
ನವಲಗುಂದ: ರಾಷ್ಟ್ರೀಯ ಹೆದ್ದಾರಿಯ ಅಮರಗೋಳ ಕ್ರಾಸ್ ಬಳಿ ಕ್ಯಾಂಟರ್ ಲಾರಿ ಹಾಗೂ ಸ್ವಿಫ್ಟ್ ಕಾರಿನ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಹಿಳೆ ಸೇರಿದಂತೆ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಬೆಳಗಿನ ಜಾವ ನಡೆದಿದೆ. ಅಪಘಾತದ ತೀವ್ರತೆಗೆ ಕಾರು ಸಂಪೂರ್ಣ ಜಖಂಗೊಂಡಿದ್ದು, ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಅಪಘಾತದಲ್ಲಿ ಬಾಗೇವಾಡಿ ತಾಲೂಕಿನ ಅಜೀತ ಪ್ರಭು ಅಲ್ಲಾಪೂರ (38), ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಬರ್ಡೋಲಿ ಗ್ರಾಮದ ರಾಕೇಶ ಅನಿಲ ಬೋಸೆ (22), ಅದೇ ಗ್ರಾಮದ ಸಂದೀಪ ಗಣಪತಿ ಶಿಂಧೆ (33) ಹಾಗೂ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶೃತಿ ನವೀನಕುಮಾರ ಎಸ್.ಜಿ. (28) ಮೃತಪಟ್ಟಿದ್ದಾರೆ.
ಮೃತರು ಪ್ರಯಾಣಿಸುತ್ತಿದ್ದ ಸ್ವಿಫ್ಟ್ ಕಾರು ಹುಬ್ಬಳ್ಳಿ ಕಡೆಯಿಂದ ವಿಜಯಪುರ ಮಾರ್ಗವಾಗಿ ಇಂಡಿ ಕಡೆಗೆ ತೆರಳುತ್ತಿತ್ತು. ಈ ವೇಳೆ ಕಾರು ಚಾಲಕನಿಗೆ ನಿದ್ರೆಯ ಮಂಪರು ಆವರಿಸಿದ್ದರಿಂದ ನಿಯಂತ್ರಣ ತಪ್ಪಿ ಕ್ಯಾಂಟರ್ ಲಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ತೀವ್ರತೆಗೆ ಕಾರಿನಲ್ಲಿದ್ದ ನಾಲ್ವರೂ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಅಪಘಾತಕ್ಕೆ ನಿಖರ ಕಾರಣವೇನು ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.
ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಡಿವೈಎಸ್‌ಪಿ ಶಿವಾನಂದ ಕಟಗಿ, ನವಲಗುಂದ ಪೊಲೀಸ್ ಠಾಣೆಯ ಸಿಪಿಐ ರವಿ ಕಪ್ಪತ್ತನವರ ಹಾಗೂ ಪಿಎಸ್‌ಐ ಚಂದ್ರಶೇಖರ ಸಾಗನೂರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂಬಂಧ ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

