ರಾಷ್ಟ್ರೀಯ ಶಿಕ್ಷಣ ಸುಧಾರಣೆಗಳ ಕುರಿತು ಕೇಂದ್ರ ಶಿಕ್ಷಣ ಸಚಿವರಿಗೆ ಮನವಿ

Spread the love

ಹುಬ್ಬಳ್ಳಿ: ರಾಷ್ಟ್ರೀಯ ಮಟ್ಟದಲ್ಲಿ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಿರುವ ಕಾನೂನು ಮತ್ತು ನೀತಿ ಸುಧಾರಣೆಗಳ ಕುರಿತು ಕೇಂದ್ರ ಶಿಕ್ಷಣ ಸಚಿವರಾದ ಶ್ರೀ ಪ್ರಲ್ಹಾದ್ ಜೋಶಿ ಅವರನ್ನು ಭೇಟಿ ಮಾಡಿ, ನಾಲ್ಕು ಪ್ರಮುಖ ಬೇಡಿಕೆಗಳ ಕುರಿತು ರವಿವಾರದಂದು ಹುಬ್ಬಳ್ಳಿ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.

ಭಾರತದ ಶಿಕ್ಷಕರಿಗೆ ಗೌರವಪೂರ್ಣ ವೃತ್ತಿಪರ ಗುರುತನ್ನು ನೀಡುವ ಉದ್ದೇಶದಿಂದ “ನ್ಯಾಷನಲ್ ಟೀಚರ್ ಎಂಬ್ಲೆಮ್” (National Teacher Emblem) ರೂಪಿಸುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು. ಶಿಕ್ಷಕರ ವೃತ್ತಿಪರ ಗೌರವ ಮತ್ತು ಸಾಮಾಜಿಕ ಸ್ಥಾನಮಾನವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಯಿತು.

ಅದೇ ರೀತಿ, RTE ಕಾಯ್ದೆಯ ಸೆಕ್ಷನ್ 12(1)(c) ಅಡಿಯಲ್ಲಿ ಅರ್ಹ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಶೇ.25ರಷ್ಟು ಪ್ರವೇಶ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು, ಪೋಷಕರಿಗೆ ಶಾಲೆ ಆಯ್ಕೆ ಮಾಡುವ ಅವಕಾಶವನ್ನು ಬಲಪಡಿಸುವುದು ಹಾಗೂ ಶಾಲೆಗಳಿಗೆ ಸರ್ಕಾರದಿಂದ ನೀಡಬೇಕಾದ ಮರುಪಾವತಿ (Reimbursement) ಪ್ರಕ್ರಿಯೆಯನ್ನು ಸಮಯಬದ್ಧಗೊಳಿಸುವಂತೆ ಮನವಿ ಮಾಡಲಾಯಿತು.

NEP–2020ರ ಆಶಯದಂತೆ “ಒನ್ ನೇಷನ್–ಒನ್ ಮಿನಿಮಮ್ ಸ್ಕೂಲ್ ರೆಗ್ಯುಲೇಟರಿ ಫ್ರೇಮ್‌ವರ್ಕ್” ರೂಪಿಸಿ, ದೇಶಾದ್ಯಂತ ಶಾಲೆಗಳ ನಿಯಂತ್ರಣ ವ್ಯವಸ್ಥೆಯನ್ನು ಸರಳ, ಪಾರದರ್ಶಕ ಹಾಗೂ ಗುಣಮಟ್ಟ ಆಧಾರಿತವಾಗಿಸುವ ಅಗತ್ಯವನ್ನೂ ಸಚಿವರ ಗಮನಕ್ಕೆ ತರಲಾಯಿತು.

ಇದರೊಂದಿಗೆ ಗ್ರಾಮೀಣ ಪ್ರದೇಶಗಳು ಹಾಗೂ ಕಡಿಮೆ ಶುಲ್ಕದಲ್ಲಿ ಶಿಕ್ಷಣ ನೀಡುತ್ತಿರುವ Affordable/Low-Fee Private Schoolsಗಳ ಅಭಿವೃದ್ಧಿಗೆ ವಿಶೇಷ ಅನುದಾನ, ಸಬ್ಸಿಡಿ ಹಾಗೂ ಕಡಿಮೆ ಬಡ್ಡಿದರದ ಸಾಲ ಸೌಲಭ್ಯಗಳನ್ನು ಒದಗಿಸುವ ರಾಷ್ಟ್ರೀಯ ಯೋಜನೆ ರೂಪಿಸುವಂತೆಯೂ ಮನವಿ ಸಲ್ಲಿಸಲಾಯಿತು.

ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ, ಈ ಮಹತ್ವದ ವಿಷಯಗಳ ಕುರಿತು ಮುಂದಿನ ವಾರ ಪ್ರತ್ಯೇಕವಾಗಿ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ರುಪ್ಸಾ ಬೆಂಗಳೂರು ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಕಡೇಮನಿ ತಿಳಿಸಿದ್ದಾರೆ.

“ಗೌರವಾನ್ವಿತ ಶಿಕ್ಷಕರು, ಸಮಾನ ಅವಕಾಶ, ಬಲಿಷ್ಠ ಶಾಲೆಗಳು, ಗುಣಮಟ್ಟದ ಶಿಕ್ಷಣ ಮತ್ತು ಬಲಿಷ್ಠ ಭಾರತ” ಎಂಬ ಆಶಯದೊಂದಿಗೆ ಈ ಸುಧಾರಣೆಗಳನ್ನು ಜಾರಿಗೆ ತರಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

Leave a Reply

Your email address will not be published. Required fields are marked *