
ಹುಬ್ಬಳ್ಳಿ: ನಗರದ ಹಳೇ ಹುಬ್ಬಳ್ಳಿ ಭಾಗದ ಕಲ್ಮೇಶ್ವರ ನಗರದ 1, 2 ಮತ್ತು 3ನೇ ಕ್ರಾಸ್ಗಳ ನಿವಾಸಿಗಳು ಕುಡಿಯುವ ನೀರಿಗಾಗಿ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ವಾರಕ್ಕೊಮ್ಮೆ ಪೂರೈಕೆಯಾಗುವ ನೀರು ಸಂಪೂರ್ಣ ಕಲುಷಿತಗೊಂಡು ಬರುತ್ತಿದ್ದು, ಸಾರ್ವಜನಿಕರ ಆರೋಗ್ಯದ ಜೊತೆ ಪಾಲಿಕೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಲ್ಲಿನ ನಿವಾಸಿಗಳಿಗೆ ಈಗಾಗಲೇ 6 ರಿಂದ 7 ದಿನಗಳಿಗೊಮ್ಮೆ ತಡವಾಗಿ ನೀರು ಬಿಡಲಾಗುತ್ತಿದೆ. ಅದರಂತೆ ಭಾನುವಾರ ನೀರು ಪೂರೈಸಲಾಗಿದೆಯಾದರೂ, ಅದು ಕುಡಿಯಲು ಬಿಡಿ, ದಿನಬಳಕೆಗೂ ಯೋಗ್ಯವಿಲ್ಲದಂತೆ ಸಂಪೂರ್ಣ ರಾಡಿ ಮಿಶ್ರಿತವಾಗಿ ಹರಿದು ಬಂದಿದೆ. ಕಲ್ಮೇಶ್ವರ ನಗರದ ಮನೆ ಮನೆಗಳಲ್ಲಿ ತುಂಬಿಟ್ಟಿರುವ ಬಕೆಟ್, ಕೊಡಗಳು ಹಾಗೂ ಡ್ರಮ್ಗಳಲ್ಲಿನ ನೀರೆಲ್ಲಾ ಮಣ್ಣು ಮತ್ತು ಕಸದಿಂದ ಕಗ್ಗತ್ತಲೆಯಾಗಿ ಮಾರ್ಪಟ್ಟಿದೆ.
ಆರೋಗ್ಯದ ಭೀತಿ ಮತ್ತು ಅಧಿಕಾರಿಗಳ ಬೇಜವಾಬ್ದಾರಿತನ:
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಸ್ಥಳೀಯ ನಿವಾಸಿ ಪ್ರಶಾಂತ್ ಹಾಗೂ ಬಿ. ಎಫ್. ಪಾಟೀಲ್ ಅವರು, “ವಾರಕ್ಕೊಮ್ಮೆ ಬರುವ ಈ ನೀರನ್ನೇ ನಾವು ಕುಡಿಯಲು ಹಾಗೂ ಅಡುಗೆಗೆ ಬಳಸಬೇಕಾದ ಅನಿವಾರ್ಯತೆ ಇದೆ. ಪ್ರತಿಯೊಬ್ಬರ ಮನೆಯಲ್ಲೂ ಸಣ್ಣ ಮಕ್ಕಳು ಮತ್ತು ವೃದ್ಧರಿದ್ದಾರೆ. ಇಂತಹ ಗಲೀಜು ನೀರನ್ನು ಬಳಸುವುದರಿಂದ ಸಾಂಕ್ರಾಮಿಕ ರೋಗಗಳು ಹರಡಿ ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಯಾರು ಹೊಣೆ?” ಎಂದು ಪಾಲಿಕೆ ವಿರುದ್ಧ ಕಿಡಿಕಾರಿದ್ದಾರೆ.
ಈ ಗಂಭೀರ ಸಮಸ್ಯೆಯ ಕುರಿತು ಈಗಾಗಲೇ ಸಂಬಂಧಪಟ್ಟ ಕಾರ್ಪೊರೇಟರ್ಗಳಾದ ಮುಲ್ಲಾ ಹಾಗೂ ಗುಜಂಳ ಸೇರಿದಂತೆ ಸ್ಥಳೀಯ ವಾಲ್ಮ್ಯಾನ್ಗೂ ದೂರು ನೀಡಲಾಗಿದೆ. ಆದರೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮಾತ್ರ, “ಮಳೆಯಿಂದಾಗಿ ನೀರು ಹೀಗೆ ಮಿಶ್ರಿತವಾಗಿದೆ, ಮೂರ್ನಾಲ್ಕು ತಾಸು ನೀರನ್ನು ಹರಿದು ಹೋಗಲು ಬಿಟ್ಟರೆ ಆಮೇಲೆ ಸರಿಹೋಗುತ್ತದೆ” ಎಂದು ಬೇಜವಾಬ್ದಾರಿಯ ಸಬೂಬು ಹೇಳಿ ನುಣುಚಿಕೊಳ್ಳುತ್ತಿದ್ದಾರೆ ವಿನಃ ಶಾಶ್ವತ ಪರಿಹಾರ ಕಲ್ಪಿಸುತ್ತಿಲ್ಲ ಎಂದು ನಿವಾಸಿಗಳು ದೂರಿದ್ದಾರೆ.
ಮಹಾನಗರ ಪಾಲಿಕೆ ಹಾಗೂ ಜಲಮಂಡಳಿ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಕಲ್ಮೇಶ್ವರ ನಗರಕ್ಕೆ ಸ್ವಚ್ಛ ಹಾಗೂ ಶುದ್ಧ ಕುಡಿಯುವ ನೀರನ್ನು ಪೂರೈಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇಡೀ ಬಡಾವಣೆಯ ನಿವಾಸಿಗಳು ಬೀದಿಗಿಳಿದು ಪಾಲಿಕೆ ವಿರುದ್ಧ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಸ್ಥಳೀಯ ಮುಖಂಡರಾದ ಶಿವು ಹಿರೇಮಠ, ಈರಣ್ಣ ಬಡಿಗೇರ ಹಾಗೂ ಬಡಾವಣೆಯ ನಾಗರಿಕರು ಎಚ್ಚರಿಕೆ ನೀಡಿದ್ದಾರೆ.

