
ಹುಬ್ಬಳ್ಳಿ : ಧಾರವಾಡ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಮೊನ್ನೆ ನಿವೃತ್ತರಾದ ಡಿಡಿಪಿಐ ಎಸ್.ಎಸ್. ಕೆಳದಿಮಠ ವಿರುದ್ಧ ಶಿಕ್ಷಣ ಕ್ಷೇತ್ರದಲ್ಲಿ ಭ್ರಷ್ಟಾಚಾರ, ಅನಧಿಕೃತ ಶಾಲೆಗಳ ನಿರ್ವಹಣೆ ಹಾಗೂ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಿದ ಆರೋಪಗಳನ್ನು ಮಾಡುತ್ತಾ ವಿದ್ಯಾನಿಕೇತನ ಶಿಕ್ಷಣ ಸಮೂಹ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷರು ಹಾಗೂ ಪ್ರಾಂಶುಪಾಲರು ಹಾಗೂ ಅಡ್ವಕೇಟ್ ಮತ್ತು ಶಿಕ್ಷಣ ಸೇವೆ ಗುರುತಿಸಿ ನೀಡಿದ ಕರ್ನಾಟಕ ರಾಜ್ಯ ಸರ್ಕಾರದ ಪ್ರತಿಷ್ಠಿತ “ವೀರ ರಾಣಿ ಕಿತ್ತೂರ ಚೆನ್ನಮ್ಮ” ರಾಜ್ಯ ಪ್ರಶಸ್ತಿಪುರಸ್ಕೃತರಾ ಡಾ. ಸುವರ್ಣಲತಾ ಜಿ. ಗದಿಗೆಪ್ಪಗೌಡರ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಳೆಹುಬ್ಬಳ್ಳಿಯ ಗೋಕುಲಧಾಮದ ಸುಭಾಷ್ ನಗರದ ವಿದ್ಯಾನಿಕೇತನ ಶಿಕ್ಷಣ ಸಮೂಹ ಸಂಸ್ಥೆಗಳ ವತಿಯಿಂದ ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ಅವರು, “ಧಾರವಾಡ ಜಿಲ್ಲೆಯ ಇತಿಹಾಸದಲ್ಲೇ ಎಸ್.ಎಸ್. ಕೆಳದಿಮಠ ಅವರ ಕಾರ್ಯವೈಖರಿ ಒಂದು ಕಪ್ಪು ಚುಕ್ಕೆ. ನಿನ್ನೆ ನಿವೃತ್ತಿಯಾದ ದಿನವೂ ಅವರ ಸ್ವಗ್ರಾಮ ಹರಕುಣಿ ಗ್ರಾಮದಲ್ಲಿ ಜನರು ಅವರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಅತಿ ಭ್ರಷ್ಟ ಅಧಿಕಾರಿ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ” ಎಂದು ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಎಂಬುದು “ಇಂದಿನ ಮಕ್ಕಳು ನಾಳಿನ ನಾಗರಿಕರು” ಎಂಬ ಧ್ಯೇಯದ ಮೇಲೆ ಕಾರ್ಯನಿರ್ವಹಿಸಬೇಕಾದ ಇಲಾಖೆ. ಆದರೆ ಅದೇ ಇಲಾಖೆಯೊಳಗೆ ಭ್ರಷ್ಟ ವ್ಯವಸ್ಥೆ ಬೆಳೆದರೆ ಸಮಾಜ ಮತ್ತು ದೇಶದ ಭವಿಷ್ಯವೇ ಹಾಳಾಗುತ್ತದೆ ಎಂಬುದಕ್ಕೆ ಧಾರವಾಡ ಜಿಲ್ಲೆಯ ಶಿಕ್ಷಣ ಇಲಾಖೆಯ ಸ್ಥಿತಿ ಉದಾಹರಣೆ ಎಂದು ಆರೋಪಿಸಿದರು.
ಹುಬ್ಬಳ್ಳಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ನಾಲ್ಕು ಅನಧಿಕೃತ ಶಾಲೆಗಳು ಹಲವು ವರ್ಷಗಳಿಂದ ನಡೆಯುತ್ತಿವೆ ಎಂದು ಆರೋಪಿಸಿದ ಅವರು ಮೋಹನ ಹೀರೇಮನೀ ಒಡೆತನದಲ್ಲಿರುವ 1) ಶಿವಪ್ಪಣ್ಣ ಜಿಗಳೂರ ಕನ್ನಡ ಅನುದಾನಿತ ಫ್ರೌಢ ಶಾಲೆ (2) ದುರ್ಗಾಂಬಿಕಾ ಕನ್ನಡ ಅನುದಾನಿತ ಪ್ರಾಥಮಿಕ ಶಾಲೆ (3) ಸಾಮ್ರೇ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಗಿರೀಶ ಗದಿಗೆಪ್ಪಗೌಡರ ಒಡೆತನದ (1) ಚೇತನಾ ಅಕಾಡೆಮಿ ಕನ್ನಡ ಅನುದಾನಿತ ಪ್ರಾಥಮಿಕ ಶಾಲೆಗಳು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ದೂರಿದರು.
ಈ ಶಾಲೆಗಳು ಕರ್ನಾಟಕ ಶಿಕ್ಷಣ ಕಾಯ್ದೆ 1983ರ ಶಿಫ್ಟಿಂಗ್ ಮತ್ತು ಹ್ಯಾಂಡೋವರ್ ಸಂಬಂಧಿತ ನಿಯಮಗಳನ್ನು ಉಲ್ಲಂಘಿಸಿ ಸರ್ಕಾರದ ಕೋಟ್ಯಂತರ ರೂಪಾಯಿ ಅನುದಾನವನ್ನು ಅಕ್ರಮವಾಗಿ ಪಡೆದುಕೊಂಡಿವೆ. ಇದರಿಂದ ಸರ್ಕಾರದ ಖಜಾನೆಗೆ ನೂರಾರು ಕೋಟಿ ರೂಪಾಯಿ ನಷ್ಟ ಉಂಟಾಗಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.

ತಮ್ಮ ವಿದ್ಯಾನಿಕೇತನ ಆಂಗ್ಲ ಮಾಧ್ಯಮ ಶಾಲೆಗಳು ಕಾನೂನುಬದ್ಧ ಹಾಗೂ ಅಧಿಕೃತವಾಗಿದ್ದರೂ, ಅನಧಿಕೃತ ಶಾಲೆಗಳ ಕಾರ್ಯಾಚರಣೆಯಿಂದ ತಮ್ಮ ಸಂಸ್ಥೆಗೆ ಆರ್ಥಿಕ ಹಾಗೂ ವಿದ್ಯಾರ್ಥಿ ಸಂಖ್ಯೆಯ ದೃಷ್ಟಿಯಿಂದ ತೊಂದರೆ ಉಂಟಾಗಿದೆ. ಈ ಕುರಿತು ಹಲವು ಬಾರಿ ಮನವಿ, ಪ್ರಸ್ತಾವನೆ ಮತ್ತು ದಾಖಲೆಗಳನ್ನು ಡಿಡಿಪಿಐ ಕಚೇರಿಗೆ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಹೇಳಿದರು.
ನಂತರ ಕಾನೂನು ಹೋರಾಟ ಆರಂಭಿಸಿದ ಪರಿಣಾಮ ಹಿಂದಿನ ಆಯುಕ್ತರಾದ ಜಯಶ್ರೀ ಶಿಂತ್ರಿ ಅವರು ಡಿಡಿಪಿಐ ಎಸ್.ಎಸ್. ಕೆಳದಿಮಠ ವಿರುದ್ಧ 1 ರಿಂದ 4ನೇ ದೋಷಾರೋಪಣ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಪ್ರಸ್ತುತ ಪ್ರಕರಣ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಅವರ ಹಂತದಲ್ಲಿದೆ ಎಂದು ತಿಳಿಸಿದರು.
ಲೋಕಾಯುಕ್ತ ತನಿಖೆ ಹಾಗೂ ದಾಳಿ ನಡೆದಿರುವುದನ್ನೂ ಉಲ್ಲೇಖಿಸಿದ ಅವರು, “ನನ್ನ ಪ್ರಕರಣದ ಆಧಾರದಲ್ಲಿಯೇ ಎರಡು ಬಾರಿ ಡಿಡಿಪಿಐ ಕಚೇರಿಯಲ್ಲಿ ಲೋಕಾಯುಕ್ತ ದಾಳಿ ನಡೆದಿದೆ. ಡಿಡಿಪಿಐ ಕೆಳದಿಮಠ ಅವರ ಪಿಂಚಣಿ ಕಡತಗಳು ಸಹಿತ ಇನ್ನೂ ಕ್ಲಿಯರ್ ಆಗಿಲ್ಲ. ಅವರ ವಿರುದ್ಧ ಲೋಕಾಯುಕ್ತ ಪ್ರಕರಣಗಳು ಮುಂದುವರಿದಿವೆ” ಎಂದು ಹೇಳಿದರು.
ಇದಲ್ಲದೆ ಬಿಇಒ ಕಚೇರಿ, ಡಿಡಿಪಿಐ ಕಚೇರಿ ಹಾಗೂ ಆಯುಕ್ತರ ಕಚೇರಿಯ ಸುಮಾರು ಅಧಿಕಾರಿಗಳ ವಿರುದ್ಧವೂ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ ಎಂದು ತಿಳಿಸಿದರು.
“ಎಸ್.ಎಸ್. ಕೆಳದಿಮಠ ಅವರು ಜಂಟಿ ನಿರ್ದೇಶಕರಾಗಲು ಸಾಕಷ್ಟು ಪ್ರಯತ್ನ ನಡೆಸಿದ್ದರು. ಆದರೆ ನನ್ನ ಕಾನೂನು ಹೋರಾಟದಿಂದ ಅವರಿಗೆ ಹಿನ್ನಡೆ ಉಂಟಾಯಿತು. ಅವರು ಜೆಡಿ ಆಗದಿರುವುದು ನನಗೆ ಸಂತೋಷ ತಂದಿದೆ” ಎಂದು ಹೇಳಿದರು.
ಲೋಕಾಯುಕ್ತ ತನಿಖೆಯ ವೇಳೆ ಡಿಡಿಪಿಐ ಕೆಳದಿಮಠ, ಆಯುಕ್ತರು ಹಾಗೂ ಜಂಟಿ ನಿರ್ದೇಶಕರಿಂದಲೇ ನಾಲ್ಕು ಶಾಲೆಗಳು ಅನಧಿಕೃತವಾಗಿ ನಡೆಯುತ್ತಿರುವುದಾಗಿ ಲಿಖಿತ ಹೇಳಿಕೆ ಪಡೆಯಲಾಗಿದೆ. ಆ ಶಾಲೆಗಳು ಅಕ್ರಮವಾಗಿವೆ ಎಂದು ಸ್ವತಃ ಡಿಡಿಪಿಐ ವರದಿ ನೀಡಿರುವ ದಾಖಲೆಗಳು ಹಾಗೂ ಪ್ರಮಾಣೀಕೃತ ಪ್ರತಿಗಳು ತಮ್ಮ ಬಳಿ ಲಭ್ಯವಿವೆ ಎಂದು ಹೇಳಿದರು.
ಹಿಂದಿನ ಆಯುಕ್ತರಾದ ಜಯಶ್ರೀ ಶಿಂತ್ರಿ ಅವರಿಂದಲೂ “ಅವು ಅನಧಿಕೃತ ಶಾಲೆಗಳಾಗಿದ್ದು, ಅವುಗಳ ವಿರುದ್ಧ ಕ್ರಮ ಕೈಗೊಳ್ಳುವ ಪರಮಾಧಿಕಾರ ಡಿಡಿಪಿಐಗೇ ಇದೆ” ಎಂಬ ವರದಿ ದೊರೆತಿದೆ ಎಂದು ಹೇಳಿದರು. ಜಂಟಿ ನಿರ್ದೇಶಕರಾದ ಈಶ್ವರ್ ನಾಯಕ್ ಅವರಿಂದಲೂ “ಅನಧಿಕೃತ ಶಾಲೆಗಳನ್ನು ಮುಚ್ಚಲೇಬೇಕು, ಸರ್ಕಾರಕ್ಕೆ ನೂರಾರು ಕೋಟಿ ರೂಪಾಯಿ ಆರ್ಥಿಕ ನಷ್ಟ ಉಂಟಾಗಿದೆ” ಎಂಬ ವರದಿ ಲೋಕಾಯುಕ್ತರಿಗೆ ಸಲ್ಲಿಕೆಯಾಗಿದೆ ಎಂದು ತಿಳಿಸಿದರು.
ಇಷ್ಟೆಲ್ಲ ದಾಖಲೆಗಳು ಮತ್ತು ತನಿಖೆಗಳಿದ್ದರೂ ಸಹ ಡಿಡಿಪಿಐ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ. ನಿವೃತ್ತಿಗೆ ಸಮೀಪಿಸುವ ಅಧಿಕಾರಿಗಳು ಕಾಮ್‌ಚಲಾವ್ ಆಡಳಿತ ನಡೆಸುತ್ತಾ ಭ್ರಷ್ಟಾಚಾರದಲ್ಲಿ ತೊಡಗಿ ಪ್ರಕರಣಗಳನ್ನು ಮುಂದೂಡುತ್ತಾ ಬಂದಿರುವುದರಿಂದ ಇಂತಹ ಅನಧಿಕೃತ ಶಾಲೆಗಳ ವಿರುದ್ಧ ಕ್ರಮವಾಗುತ್ತಿಲ್ಲ ಎಂದು ದೂರಿದರು.
ಆದರೆ ಇದೀಗ ಪ್ರಕರಣ ಅಂತಿಮ ಹಂತ ತಲುಪಿದ್ದು, ಅಕ್ರಮವಾಗಿ ನಡೆಯುತ್ತಿರುವ ನಾಲ್ಕು ಅನಧಿಕೃತ ಶಾಲೆಗಳ ವಿರುದ್ಧ ಕ್ರಮ ಖಚಿತವಾಗಿದೆ. ಹಲವು ವರ್ಷಗಳಿಂದ ಸರ್ಕಾರಕ್ಕೆ ಮೋಸ ಮಾಡಿ, ಖಜಾನೆಗೆ ನಷ್ಟ ಉಂಟುಮಾಡಿ, ಅಕ್ರಮವಾಗಿ ಅನುದಾನ ಪಡೆದುಕೊಂಡಿರುವ ಶಾಲೆಗಳ ವಿರುದ್ಧ ಕಠಿಣ ಕ್ರಮ ಹಾಗೂ ಸಂಬಂಧಪಟ್ಟವರ ವಿರುದ್ಧ ತಲೆದಂಡ ನಿಶ್ಚಿತ ಎಂದು ಡಾ. ಸುವರ್ಣಲತಾ ಜಿ. ಗದಿಗೆಪ್ಪಗೌಡರ ಹೇಳಿದರು.
ಕೊನೆಯಲ್ಲಿ “ಧಾರವಾಡ ಜಿಲ್ಲೆಗೆ ಇಂತಹ ಅಧಿಕಾರಿಗಳು ಮತ್ತೆ ಬಾರದಿರಲಿ” ಎಂದು ಆಶಿಸಿದರು. “ಸತ್ಯಮೇವ ಜಯತೆ, ಜೈ ಹಿಂದ್, ಸಿರಿಗನ್ನಡಂ ಗೆಲ್ಗೆ” ಎಂಬ ಘೋಷಣೆಗಳೊಂದಿಗೆ ತಮ್ಮ ಹೇಳಿಕೆಯನ್ನು ಮುಕ್ತಾಯಗೊಳಿಸಿದರು.

