
ಹುಬ್ಬಳ್ಳಿ: ನಿಷೇಧಿತ ಹಾಗೂ ಅಪಾಯಕಾರಿ ಮಾಂಜಾ ದಾರದ ಮಾರಾಟ ಮತ್ತು ಬಳಕೆಯ ವಿರುದ್ಧ ‘ಮಾಯ್ ಪಬ್ಲಿಕ್ ಸಮಾಚಾರ’ ವರದಿ ಬೆನ್ನಲ್ಲೇ ಹುಬ್ಬಳ್ಳಿ-ಧಾರವಾಡ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದ್ದು, ಸಾರ್ವಜನಿಕರು ಮಾಂಜಾ ದಾರವನ್ನು ಬಳಸಬಾರದು ಎಂದು ಮನವಿ ಮಾಡಿದೆ. ನಿಷೇಧಿತ ಮಾಂಜಾ ದಾರ ಬಳಕೆ ಮಾಡುವುದು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಎರಡು ದಿನಗಳ ಹಿಂದೆ ‘ಮಾಯ್ ಪಬ್ಲಿಕ್ ಸಮಾಚಾರ’ದಲ್ಲಿ ಬೆಳಗಾವಿಯಲ್ಲಿ ಮಾಂಜಾ ದಾರದ ಅಂಗಡಿಗಳ ಮೇಲೆ ಪೊಲೀಸರು ದಾಳಿ ನಡೆಸಿ, ನಿಷೇಧಿತ ದಾರ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದನ್ನು ಉಲ್ಲೇಖಿಸಿ, ಹುಬ್ಬಳ್ಳಿ-ಧಾರವಾಡದಲ್ಲಿ ಇಂತಹ ಕ್ರಮ ಯಾವಾಗ ಎಂಬ ಕುರಿತು ವಿಶೇಷ ವರದಿ ಪ್ರಸಾರ ಮಾಡಲಾಗಿತ್ತು. ಅಪಾಯಕಾರಿ ಮಾಂಜಾ ದಾರದಿಂದ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಸೇರಿದಂತೆ ಸಾರ್ವಜನಿಕರ ಜೀವಕ್ಕೆ ಅಪಾಯ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ವರದಿಯಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗೆ ಮನವಿ ಮಾಡಲಾಗಿತ್ತು.
ವರದಿಯನ್ನು ಗಮನಿಸಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಇಲಾಖೆ ಇದೀಗ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದು, ನಿಷೇಧಿತ ಮಾಂಜಾ ದಾರವನ್ನು ಯಾರೂ ಮಾರಾಟ ಮಾಡಬಾರದು ಹಾಗೂ ಬಳಸಬಾರದು ಎಂದು ತಿಳಿಸಿದೆ. ನಿಯಮ ಉಲ್ಲಂಘಿಸಿ ಮಾಂಜಾ ದಾರ ಬಳಸುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.
ಬೆಳಗಾವಿಯಲ್ಲಿ ಪೊಲೀಸ್ ಇಲಾಖೆ ನಡೆಸಿದ ಕಾರ್ಯಾಚರಣೆಯ ಬೆನ್ನಲ್ಲೇ ಹುಬ್ಬಳ್ಳಿ-ಧಾರವಾಡದಲ್ಲೂ ಪೊಲೀಸ್ ಇಲಾಖೆ ಸ್ಪಂದಿಸಿರುವುದು ಸಾರ್ವಜನಿಕರ ಗಮನ ಸೆಳೆದಿದೆ. ಅಪಾಯಕಾರಿ ಮಾಂಜಾ ದಾರದಿಂದ ಯಾವುದೇ ರೀತಿಯ ಜೀವಹಾನಿ ಅಥವಾ ಅಪಘಾತ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದ್ದು, ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸುವಂತೆ ಕಮೀಶನರ್ ಭೂಷಣ್ ಜಿ. ಬೊರಸೆ ಹಾಗೂ ಪೋಲಿಸ ಇಲಾಖೆ ಮನವಿ ಮಾಡಲಾಗಿದೆ.

