
ಧಾರವಾಡ: ಜೀವನದಲ್ಲಿ ಎದುರಾಗುವ ಕಷ್ಟ-ಸಮಸ್ಯೆಗಳಿಗೆ ಆತ್ಮಹತ್ಯೆ ಯಾವುದೇ ರೀತಿಯಲ್ಲೂ ಪರಿಹಾರವಲ್ಲ. ಪ್ರತಿಯೊಬ್ಬರೂ ಆತ್ಮಹತ್ಯೆಯಂತಹ ಕೃತ್ಯಗಳಿಗೆ ಮುಂದಾಗದೆ, ಮಾನಸಿಕವಾಗಿ ಸದೃಢರಾಗಿ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಅಲ್ಲಪ್ಪ ಎಂ. ಬಡಿಗೇರ ಹೇಳಿದರು.
ನಗರದ ಕೇಂದ್ರ ಕಾರಾಗೃಹದ ಸಭಾಭವನದಲ್ಲಿ ಅ.3ರಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರಾಗೃಹ, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಾನಸಿಕ ಆರೋಗ್ಯ ವಿಭಾಗ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಷ್ಟದ ಸಂದರ್ಭಗಳಲ್ಲಿ ಒಂಟಿಯಾಗಿ ಸಮಸ್ಯೆಗಳನ್ನು ಎದುರಿಸುವ ಬದಲು ಕುಟುಂಬದ ಸದಸ್ಯರು, ಸ್ನೇಹಿತರು ಹಾಗೂ ವಿಶ್ವಾಸಾರ್ಹ ವ್ಯಕ್ತಿಗಳೊಂದಿಗೆ ಸಮಸ್ಯೆಗಳನ್ನು ಹಂಚಿಕೊಳ್ಳಬೇಕು. ಅಗತ್ಯವಿದ್ದಲ್ಲಿ ತಜ್ಞರಿಂದ ಸೂಕ್ತ ಮಾರ್ಗದರ್ಶನ ಹಾಗೂ ನೆರವು ಪಡೆಯಬೇಕು. ಜೀವನದಲ್ಲಿ ಎದುರಾಗುವ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲು ಸಾಧ್ಯವಿದ್ದು, ಧೈರ್ಯ ಹಾಗೂ ಸಕಾರಾತ್ಮಕ ಚಿಂತನೆಯೊಂದಿಗೆ ಮುನ್ನಡೆಯಬೇಕು ಎಂದು ಅವರು ಸಲಹೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಪರಶುರಾಮ ಎಫ್.ಕೆ. ಮಾತನಾಡಿ, ವ್ಯಕ್ತಿ ಮಾನಸಿಕವಾಗಿ ದುರ್ಬಲನಾದ ಸಂದರ್ಭದಲ್ಲಿ ಆತ್ಮಹತ್ಯೆಯಂತಹ ಆಲೋಚನೆಗಳಿಗೆ ಒಳಗಾಗುವ ಸಾಧ್ಯತೆ ಇರುತ್ತದೆ. ಅಂತಹ ವ್ಯಕ್ತಿಗಳನ್ನು ಗುರುತಿಸಿ ಸೂಕ್ತ ಮಾರ್ಗದರ್ಶನ ಹಾಗೂ ನೆರವು ನೀಡುವ ಮೂಲಕ ಅವರನ್ನು ಮಾನಸಿಕವಾಗಿ ಸದೃಢರನ್ನಾಗಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
ಕೇಂದ್ರ ಕಾರಾಗೃಹದ ಅಧೀಕ್ಷಕ ಸಿ.ಜೆ. ರಘುಪತಿ ಮಾತನಾಡಿ, ಕಾರಾಗೃಹದಲ್ಲಿರುವ ಬಂದಿಗಳು ಮಾನಸಿಕವಾಗಿ ಕುಗ್ಗದೆ, ಉತ್ತಮ ಹಾಗೂ ಸೃಜನಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಆತ್ಮವಿಶ್ವಾಸದಿಂದ ಜೀವನವನ್ನು ಎದುರಿಸಿ, ಉತ್ತಮ ಚಿಂತನೆ ಹಾಗೂ ಸಕಾರಾತ್ಮಕ ಮನೋಭಾವ ಬೆಳೆಸಿಕೊಂಡು ಸಶಕ್ತ ಜೀವನ ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರಾಗೃಹ ಶಿಕ್ಷಕ ಡಿ.ಬಿ. ಕುಂಬಾರ ಸ್ವಾಗತಿಸಿದರು. ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಂ.ಎನ್. ಅಗಡಿ ವಂದಿಸಿದರು. ಡಿಮ್ಹಾನ್ಸ್ ಸಹಾಯಕ ಪ್ರಾಧ್ಯಾಪಕಿ ಡಾ. ಮೇಘಮಾಲಾ ತಾವರಗಿ ಅವರು ಆತ್ಮಹತ್ಯೆಗೆ ಕಾರಣಗಳು ಹಾಗೂ ತಡೆಗಟ್ಟುವ ವಿಧಾನಗಳ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾಧಿಕಾರಿ ಡಾ. ಎಸ್.ಬಿ. ಕಳಸೂರಮಠ, ಜಿಲ್ಲಾ ಸಮೀಕ್ಷಣಾ ಅಧಿಕಾರಿ ಡಾ. ಮಹೇಶ ಚಿತ್ತರಗಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಆರ್. ಪಾತ್ರೋಟ, ಜಿಲ್ಲಾ ಕಾಲರಾ ಕಂಟ್ರೋಲ್ ಅಧಿಕಾರಿ ಡಾ. ಗೌರಿ ಬೆಲ್ಲದ, ತಾಲೂಕು ಆರೋಗ್ಯಾಧಿಕಾರಿ ಡಾ. ತನುಜಾ ಕೆ.ಎನ್., ವೈದ್ಯಾಧಿಕಾರಿ ಡಾ. ಬೀನಾ ಶೂರ್ಪಾಲಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

