
ಹನೂರು : ಕ್ಷೇತ್ರದ ಅಧಿದೇವತೆ ಮಲೆ ಮಾದೇಶ್ವರ ಸ್ವಾಮಿಯ ಕೃಪೆಯಿಂದ ಈ ಬಾರಿ ಉತ್ತಮ ಮಳೆಯಾಗಿದ್ದು, ಬರಗಾಲದಿಂದ ಕಂಗೆಟ್ಟಿದ್ದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ ಎಂದು ಹನೂರು ಶಾಸಕ ಎಂ.ಆರ್. ಮಂಜುನಾಥ್ ಹೇಳಿದರು.
ಪಟ್ಟಣದ ಸಮೀಪದ ತುಂಬಿ ತುಳುಕುತ್ತಿರುವ ಹುಬ್ಬೆ-ಹುಣಸೆ ಜಲಾಶಯಕ್ಕೆ ಭಾನುವಾರ ಭೇಟಿ ನೀಡಿ ಮಾತನಾಡಿದ ಅವರು, ಗಣಪತಿ ಹಬ್ಬದ ವೇಳೆಗೆ ರಾಜ್ಯದಲ್ಲೇ ಹನೂರು ತಾಲೂಕಿನಲ್ಲಿ ಅತಿ ಕಡಿಮೆ ಮಳೆಯಾಗಿತ್ತು. ಬೋರ್ವೆಲ್ಗಳಲ್ಲಿಯೂ ನೀರು ಸಿಗದ ಪರಿಸ್ಥಿತಿ ಇತ್ತು. ಆದರೆ ಕೇವಲ 2-3 ಗಂಟೆಗಳ ಮಳೆಗೆ ಜಲಾಶಯ ಭರ್ತಿಯಾಗಿ ನೀರು ಹರಿಯುತ್ತಿರುವುದು ಸಂತಸ ತಂದಿದೆ. ಇದು ಮಾದಪ್ಪನ ಕೃಪೆ ಮತ್ತು ವರುಣದೇವನ ಅನುಗ್ರಹ ಎಂದರು.
900 ಎಕರೆ ಪ್ರದೇಶಕ್ಕೆ ನೀರು
ಹುಬ್ಬೆ-ಹುಣಸೆ ಜಲಾಶಯ ಭರ್ತಿಯಾಗಿರುವುದರಿಂದ ಸುಮಾರು 900 ಎಕರೆ ಪ್ರದೇಶಕ್ಕೆ ನೀರು ಲಭ್ಯವಾಗಲಿದ್ದು, ಇದರಿಂದ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ಸಿಗಲಿದೆ ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.
ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿ
ಹುಬ್ಬೆ-ಹುಣಸೆ ಜಲಾಶಯವನ್ನು ಪ್ರವಾಸೋದ್ಯಮ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಮಾಸ್ಟರ್ ಪ್ಲಾನ್ ಸಿದ್ಧಪಡಿಸಲಾಗಿದೆ. ಡ್ಯಾಂನ ಬಲಭಾಗದಲ್ಲಿರುವ 10-12 ಎಕರೆ ಪ್ರದೇಶ ಹಾಗೂ ಡ್ಯಾಂನಲ್ಲಿರುವ ಆಲದ ಮರದ ದಿಣ್ಣೆಯನ್ನು ಐಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸಿ, ಬೋಟ್ ಮೂಲಕ ತೆರಳುವ ವ್ಯವಸ್ಥೆ ಮಾಡಲಾಗುವುದು. ಜಲಾಶಯದ ಸುತ್ತ ರಿಂಗ್ ರಸ್ತೆ ಕಾಮಗಾರಿಯನ್ನು ಶೀಘ್ರದಲ್ಲೇ ಆರಂಭಿಸಲಾಗುವುದು ಎಂದರು.
ರೈತರ ಬೆಳೆಗಳಿಗೆ ಉತ್ತಮ ಬೆಲೆ ದೊರೆಯಬೇಕು, ನಿರುದ್ಯೋಗಿ ಯುವಕರಿಗೆ ಹಾಗೂ ಕೂಲಿ ಇಲ್ಲದೆ ಸಂಕಷ್ಟದಲ್ಲಿರುವ ಮಹಿಳೆಯರಿಗೆ ಉದ್ಯೋಗ ಸಿಗಬೇಕು ಎಂದು ಮಾದೇಶ್ವರ, ಬೆಟ್ಟದ ಮಾರಮ್ಮ, ಸಿದ್ದಪ್ಪಾಜಿ ಹಾಗೂ ಮಂಟೇಸ್ವಾಮಿ ದೈವಗಳಲ್ಲಿ ಪ್ರಾರ್ಥಿಸುವುದಾಗಿ ಶಾಸಕ ಎಂ.ಆರ್. ಮಂಜುನಾಥ್ ಹೇಳಿದರು.
ಈ ಸಂದರ್ಭದಲ್ಲಿ ನೀರಾವರಿ ಇಲಾಖೆ ಇಇ ಉಮೇಶ್, ಎಇಇ ಕರುಣಾಮಯಿ, ಚಾಮುಲ್ ಮಾಜಿ ಅಧ್ಯಕ್ಷ ಗುರುಮಲ್ಲಪ್ಪ, ನಿರ್ದೇಶಕ ಉದ್ದನೂರು ಮಹದೇವಪ್ರಸಾದ್, ಮಾಜಿ ಜಿ.ಪಂ ಸದಸ್ಯರಾದ ಬಾಬಣ್ಣ, ಪೋಸ್ಟ್ ಮಹದೇವಪ್ಪ, ಮಾಜಿ ಪ.ಪಂ ಸದಸ್ಯರಾದ ಸಿದ್ದರಾಜು, ಬಸವರಾಜು ಸೇರಿದಂತೆ ಮುಖಂಡರು ಉಪಸ್ಥಿತರಿದ್ದರು.
ವರದಿ :ಕಾರ್ತಿಕ್ ಗೌಡ ಹನೂರು.

