
ಬೆಂಗಳೂರು: KPSC ಪಶುವೈದ್ಯಾಧಿಕಾರಿ ನೇಮಕಾತಿ ಪರೀಕ್ಷೆಯ ಅಕ್ರಮದ ತನಿಖೆ ಚುರುಕುಗೊಂಡಿದ್ದು, ಸಿಐಡಿ ಅಧಿಕಾರಿಗಳ ವಿಚಾರಣೆ ವೇಳೆ ಒಂದೊಂದೇ ಬೆಚ್ಚಿಬೀಳಿಸುವ ಸತ್ಯಗಳು ಹೊರಬರುತ್ತಿವೆ. IAS ಅಧಿಕಾರಿ ಜ್ಞಾನೇಂದ್ರ ಬಂಧನದ ಬೆನ್ನಲ್ಲೇ, ಪ್ರಕರಣದ ಮತ್ತೊಬ್ಬ ಪ್ರಮುಖ ಕಿಂಗ್‌ಪಿನ್ ಬಸವರಾಜ್ ಕನ್ನಾಳೆ ಮತ್ತು ಆತನ ಜಾಲದ ಅಸಲಿ ಮುಖ ಬಯಲಾಗಿದೆ.
₹40 ಲಕ್ಷಕ್ಕೆ ಒಂದೊಂದು ಹುದ್ದೆ ಸೇಲ್!
ಸಿಐಡಿ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದ ಬೆನ್ನಲ್ಲೇ ಬಲೆಗೆ ಬಿದ್ದಿರುವ ಅಭ್ಯರ್ಥಿಗಳು ಸತ್ಯ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಪಶುವೈದ್ಯಾಧಿಕಾರಿ ಹುದ್ದೆಗೆ ತಲಾ ₹30 ರಿಂದ ₹40 ಲಕ್ಷಕ್ಕೆ ಡೀಲ್ ಕುದುರಿಸಲಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ. ವಾಟ್ಸಾಪ್ ಕಾಲ್ ಮೂಲಕ ಸಂಪರ್ಕಿಸಿ, ರಾಜಾಜಿನಗರದ ಕಚೇರಿಯೊಂದರಲ್ಲಿ ಹಣದ ವಹಿವಾಟು ನಡೆಸಲಾಗಿತ್ತು ಎನ್ನಲಾಗಿದೆ.
ಪರೀಕ್ಷೆಗೂ ಮೊದಲೇ ಅಭ್ಯರ್ಥಿಗಳಿಗೆ ಪ್ರಶ್ನೆಪತ್ರಿಕೆ ನೀಡಿ, ಬೆಂಗಳೂರು, ತುಮಕೂರಿನ ದೇವರಾಯನದುರ್ಗ ಹಾಗೂ ಆಂಧ್ರಪ್ರದೇಶದ ರೆಸಾರ್ಟ್‌ಗಳಲ್ಲಿ ವಿಶೇಷ ತರಬೇತಿ ನೀಡಲಾಗಿತ್ತು ಎಂಬ ಆರೋಪವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
IAS ಅಧಿಕಾರಿ ಜ್ಞಾನೇಂದ್ರ – ಕನ್ನಾಳೆ ದಂಧೆಯ ನೆಟ್‌ವರ್ಕ್
ಜ್ಞಾನೇಂದ್ರ ಬೀದರ್‌ನಲ್ಲಿ ಪ್ರೊಬೇಷನರಿಯಾಗಿದ್ದ ಕಾಲದಿಂದಲೇ ಬಸವರಾಜ್ ಕನ್ನಾಳೆ ಜೊತೆ ಸಂಪರ್ಕದಲ್ಲಿದ್ದ ಎನ್ನಲಾಗಿದೆ. ಪಶುವೈದ್ಯಾಧಿಕಾರಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸಿದ್ಧಪಡಿಸುವುದು ಮತ್ತು ಪ್ರಿಂಟಿಂಗ್ ಹೊಣೆಯನ್ನು ಜ್ಞಾನೇಂದ್ರ ಹೊತ್ತಿದ್ದ ಎನ್ನಲಾಗಿದೆ.
ಪರೀಕ್ಷೆಗೆ ಒಂದು ವಾರ ಮುಂಚೆಯೇ ಒಂದು ಸೆಟ್ ಪ್ರಶ್ನೆಪತ್ರಿಕೆಯನ್ನು ಕನ್ನಾಳೆಗೆ ನೀಡಿದ್ದು, ಆತ ಅಭ್ಯರ್ಥಿಗಳಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಿ ಜ್ಞಾನೇಂದ್ರನಿಗೆ ತಲುಪಿಸಿದ್ದಾನೆ ಎನ್ನಲಾಗಿದೆ.
ಮನೆ ಸೀಜ್, ಸಾಕ್ಷ್ಯಗಳ ಜಪ್ತಿ
ಪ್ರಕರಣದ ಬೆನ್ನುಬಿದ್ದಿರುವ ಸಿಐಡಿ ಅಧಿಕಾರಿಗಳು ಬೆಂಗಳೂರಿನ ವಿನಾಯಕ ಲೇಔಟ್‌ನಲ್ಲಿರುವ ಕನ್ನಾಳೆ ನಿವಾಸವನ್ನು ಸೀಜ್ ಮಾಡಿದ್ದಾರೆ. ಮನೆಯಲ್ಲಿದ್ದ ಸಿಸಿಟಿವಿ ಡಿವಿಆರ್ ಹಾಗೂ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಅಕ್ರಮದಲ್ಲಿ ಭಾಗಿಯಾಗಿದ್ದ 10 ಅಭ್ಯರ್ಥಿಗಳು ತಪ್ಪೊಪ್ಪಿಕೊಂಡಿದ್ದು, ಈ ಪೈಕಿ 6 ಅಭ್ಯರ್ಥಿಗಳ ಹೇಳಿಕೆಯನ್ನು ಅಧಿಕೃತವಾಗಿ ದಾಖಲಿಸಿಕೊಳ್ಳಲಾಗಿದೆ ಎನ್ನಲಾಗಿದೆ.
ಕಷ್ಟಪಟ್ಟು ಓದಿದ ಅರ್ಹ ಅಭ್ಯರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿ, ಕೋಟಿ ಕೋಟಿ ಲೂಟಿ ಹೊಡೆದ ಖದೀಮರ ಹೆಡೆಮುರಿಕಟ್ಟಲು ಸಿಐಡಿ ಬಲೆ ಬೀಸಿದೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಇನ್ನಷ್ಟು ಸ್ಫೋಟಕ ಮಾಹಿತಿಗಳು ಹೊರಬರುವ ಸಾಧ್ಯತೆ ಇದೆ.

