ಕುಂದಗೋಳದಲ್ಲಿ ಅನ್ನಭಾಗ್ಯ ಅಕ್ಕಿ ಕಳ್ಳಸಾಗಣೆ ಆರೋಪ: ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ತನಿಖೆಗೆ ಎಎಪಿ ಮನವಿ

Spread the love

ಧಾರವಾಡ: ಕುಂದಗೋಳ ಪಟ್ಟಣದಲ್ಲಿ ಪತ್ತೆಯಾದ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿ ಕಳ್ಳಸಾಗಣೆ ಜಾಲದ ಪ್ರಮುಖ ಆರೋಪಿಗಳು ಹಾಗೂ ಆಹಾರ ಇಲಾಖೆಯ ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಧಾರವಾಡ ಜಿಲ್ಲಾ ಆಮ್ ಆದ್ಮಿ ಪಾರ್ಟಿ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ.

ಮನವಿಯಲ್ಲಿ, ಕುಂದಗೋಳ ಪಟ್ಟಣದಲ್ಲಿ ಸರ್ಕಾರದ ಅನ್ನಭಾಗ್ಯ ಯೋಜನೆಯ ಪಡಿತರ ಅಕ್ಕಿ ಅಕ್ರಮ ಸಾಗಾಟ ನಡೆಯುತ್ತಿರುವ ಕುರಿತು ಸ್ಥಳೀಯ ಸಾರ್ವಜನಿಕರು, ಕೆಆರ್‌ಎಸ್ ಪಕ್ಷ ಹಾಗೂ ಆಮ್ ಆದ್ಮಿ ಪಾರ್ಟಿ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಅಕ್ರಮವನ್ನು ಬಹಿರಂಗಪಡಿಸಿದ್ದಾಗಿ ತಿಳಿಸಲಾಗಿದೆ. ಈ ಕುರಿತು ಕುಂದಗೋಳ ಪೊಲೀಸ್ ಠಾಣೆಗೆ ಸಮಗ್ರ ಮಾಹಿತಿ ನೀಡಲಾಗಿದ್ದು, ಅಕ್ರಮದಲ್ಲಿ ನೇರವಾಗಿ ಹಾಗೂ ಪರೋಕ್ಷವಾಗಿ ಭಾಗಿಯಾಗಿರುವವರ ವಿವರಗಳನ್ನೂ ಪೊಲೀಸರಿಗೆ ನೀಡಲಾಗಿತ್ತು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಆದರೆ, ಕುಂದಗೋಳ ಪೊಲೀಸರು ಪ್ರಭಾವಿಗಳ ಒತ್ತಡಕ್ಕೆ ಒಳಗಾಗಿ ಅಕ್ರಮದಲ್ಲಿ ಭಾಗಿಯಾಗಿರುವ ಪ್ರಮುಖರನ್ನು ರಕ್ಷಿಸುವ ಉದ್ದೇಶದಿಂದ ಕೇವಲ ಲಾರಿ ಚಾಲಕ ಹಾಗೂ ದಾಸ್ತಾನು ಗೋದಾಮಿನ ಸಿಬ್ಬಂದಿ ವಿರುದ್ಧ ಮೊಕದ್ದಮೆ ಸಂಖ್ಯೆ 153/2026ರಂತೆ ಪ್ರಕರಣ ದಾಖಲಿಸಿ ಕೈತೊಳೆದುಕೊಂಡಿದ್ದಾರೆ ಎಂದು ಎಎಪಿ ಆರೋಪಿಸಿದೆ.

ಪ್ರಕರಣದ ಪ್ರಮುಖ ಆರೋಪಿಯಾಗಬೇಕಾದ ಆಹಾರ ಇಲಾಖೆಯ ಅಧಿಕಾರಿಯೇ ಸ್ವತಃ ದೂರುದಾರರಾಗಿರುವುದು ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೆ, ದೂರುದಾರರ ಮೇಲಧಿಕಾರಿಗಳು ಕೂಡ ಅಕ್ರಮದಿಂದ ನುಣುಚಿಕೊಳ್ಳುವುದರ ಜೊತೆಗೆ ಪ್ರಕರಣವನ್ನು ಬೇರೆ ಆಯಾಮಕ್ಕೆ ತಿರುಗಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಲಾಗಿದೆ. ಅಕ್ಕಿ ದಾಸ್ತಾನು ಗೋದಾಮು ಹಾಗೂ ಆಹಾರ ಇಲಾಖೆಯ ದಾಖಲೆಗಳಲ್ಲಿ ಅಕ್ರಮದ ಕುರಿತು ಸಾಕ್ಷ್ಯಗಳಿದ್ದರೂ, ಪೊಲೀಸರು ಕೇವಲ ಕೆಳಹಂತದ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿ ಪ್ರಮುಖ ಅಧಿಕಾರಿ ವರ್ಗ ಹಾಗೂ ಪ್ರಭಾವಿಗಳನ್ನು ರಕ್ಷಿಸುವ ಕೆಲಸ ಮಾಡಿದ್ದಾರೆ ಎಂದು ಎಎಪಿ ದೂರಿದೆ.

ಆದ್ದರಿಂದ ಜಿಲ್ಲಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಬೇಕು. ಅಕ್ರಮದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾಗಿಯಾಗಿರುವ ತಾಲೂಕು ಮತ್ತು ಜಿಲ್ಲಾ ಮಟ್ಟದ ಆಹಾರ ಇಲಾಖೆಯ ಅಧಿಕಾರಿಗಳ ವಿರುದ್ಧವೂ ಕಾನೂನು ಕ್ರಮ ಕೈಗೊಂಡು, ಬಡವರಿಗೆ ಸೇರಬೇಕಾದ ಅನ್ನಭಾಗ್ಯ ಅಕ್ಕಿ ಕಳ್ಳಸಾಗಣೆ ಜಾಲವನ್ನು ಸಂಪೂರ್ಣವಾಗಿ ಬಯಲಿಗೆಳೆಯಬೇಕು ಎಂದು ಎಎಪಿ ಮನವಿಯಲ್ಲಿ ಒತ್ತಾಯಿಸಿದೆ.

ಪೊಲೀಸ್ ತನಿಖೆ ಹಾಗೂ ಇತರ ಯಾವುದೇ ಇಲಾಖಾ ವಿಚಾರಣೆಯ ಸಂದರ್ಭದಲ್ಲಿ ತಮ್ಮ ಕಡೆಯಿಂದ ಅಗತ್ಯವಿರುವ ಯಾವುದೇ ಪೂರಕ ಮಾಹಿತಿ ಮತ್ತು ದಾಖಲೆಗಳನ್ನು ನೀಡಲು ಸಿದ್ಧರಿರುವುದಾಗಿ ಆಮ್ ಆದ್ಮಿ ಪಾರ್ಟಿ ತಿಳಿಸಿದೆ.

ಈ ಸಂದರ್ಭದಲ್ಲಿ ಆಮ್ ಆದ್ಮಿ ಪಾರ್ಟಿಯ ಧಾರವಾಡ ಜಿಲ್ಲಾ ಪ್ರಮುಖರಾದ ಇರ್ಷಾದ್ ಸಾಸುನಶಿ, ಹುಸೇನ್‌ಬಾಷಾ ತಳೇವಾಡ, ಅವಿನಾಶ ಸದಾನಂದ, ಶಿವರಡ್ಡಿ ರೆಡ್ಡಿ, ಜಾಕೀರ ರಾಮದುರ್ಗ ಹಾಗೂ ತಸಮೀಯಾ ತಳೇವಾಡ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *