
ಕುಂದಗೋಳ: ಅಂತೂ ಇಂತು ಕೊನೆಗೂ ತಾಲೂಕಿನ ರೈತರು, ಜನಪ್ರತಿನಿಧಿಗಳು, ಅಧಿಕಾರಿ ವರ್ಗ ಹಾಗೂ ವಿವಿಧ ಜನಪರ ಸಂಘಟನೆಗಳ ನಿರಂತರ ಹೋರಾಟದ ಫಲವಾಗಿ, ರಾಜ್ಯ ಸರ್ಕಾರದ ಕಂದಾಯ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (KSDMA) ನಿನ್ನೆ ದಿನ (ಬುದುವಾರದಂದು) ಬಿಡುಗಡೆ ಮಾಡಿರುವ 04 ನೇ ಪಟ್ಟಿಯಲ್ಲಿ ಕುಂದಗೋಳ ತಾಲೂಕನ್ನು ಬರಪೀಡಿತ ಎಂದು ಅಧಿಕೃತವಾಗಿ ಘೋಷಿಸಲಾಗಿದೆ ಎಂದು ತಹಶೀಲ್ದಾರ್ ರಾಜು ಮಾವರಕರ ಮಾಹಿತಿ ನೀಡಿದ್ದಾರೆ.
ರೈತರು, ವಿವಿಧ ಸಂಘಟನೆ ಹಾಗೂ ಜನಪ್ರತಿನಿಧಿಗಳ ನಿರಂತರ ಹೋರಾಟ:
ಪ್ರಸ್ತುತ ವರ್ಷ ತಾಲೂಕಿನಲ್ಲಿ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಕೊರತೆ ಉಂಟಾಗಿದ್ದು, ಬಿತ್ತನೆಯಾದ ಪ್ರಮುಖ ಬೆಳೆಗಳೆಲ್ಲವೂ ಬಿಸಿಲ ಬೇಗೆಗೆ ಒಣಗಿ ಹೋಗಿದ್ದವು. ಇದರಿಂದಾಗಿ ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುವಂತಾಗಿತ್ತು. ಮೊದಲ ಹಂತದ ಬರಪೀಡಿತ ತಾಲೂಕುಗಳ ಪಟ್ಟಿಯಲ್ಲಿ ಕುಂದಗೋಳ ಹೆಸರು ಕೈಬಿಟ್ಟು ಹೋಗಿದ್ದರಿಂದ ತಾಲೂಕಿನಾದ್ಯಂತ ಸಾರ್ವಜನಿಕರು ಮತ್ತು ರೈತ ಸಂಘಟನೆಗಳು ನಿರಂತರ ಪ್ರತಿಭಟನೆ ಹಾಗೂ ಧರಣಿಗಳನ್ನು ನಡೆಸಿದ್ದವು.
ರೈತರಿಗೆ ಸಿಗಲಿರುವ ಸೌಲಭ್ಯಗಳು :
ಇದೀಗ ಸರ್ಕಾರದ ನೂತನ ಆದೇಶದ ಪ್ರಕಾರ ಧಾರವಾಡ ಜಿಲ್ಲೆಯ ಕುಂದಗೋಳ ಸೇರಿದಂತೆ ಸುತ್ತಮುತ್ತಲಿನ ತಾಲೂಕುಗಳನ್ನು ಬರಪೀಡಿತ ಎಂದು ಸೇರ್ಪಡೆಗೊಳಿಸಲಾಗಿದೆ. ಈ ನಿರ್ಧಾರದಿಂದಾಗಿ ತಾಲೂಕಿನ ರೈತರಿಗೆ ಬೆಳೆ ಹಾನಿ ಪರಿಹಾರ, ಸಾಲ ಮರುಪಾವತಿಯಲ್ಲಿ ವಿನಾಯಿತಿ, ಕೃಷಿ ಇಲಾಖೆಯಿಂದ ಅಗತ್ಯ ಸೌಲಭ್ಯಗಳು ಹಾಗೂ ಕುಡಿಯುವ ನೀರು ಮತ್ತು ಮೇವಿನ ಅಭಾವ ನೀಗಿಸಲು ಸರ್ಕಾರದಿಂದ ವಿಶೇಷ ಅನುದಾನ ದೊರೆಯಲಿದೆ.

