ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಕಂಗೊಳಿಸುತ್ತಿರುವ ಮಲೆ ಮಹದೇಶ್ವರ ಬೆಟ್ಟ; ನ.6ರಿಂದ 10ರವರೆಗೆ ಐದು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ!

Spread the love

ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಕಂಗೊಳಿಸುತ್ತಿರುವ ಮಲೆ ಮಹದೇಶ್ವರ ಬೆಟ್ಟ; ನ.6ರಿಂದ 10ರವರೆಗೆ ಐದು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ!

ಚಾಮರಾಜನಗರ: ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಮಲೆ ಮಹದೇಶ್ವರ ಬೆಟ್ಟ ದೀಪಾವಳಿ ಜಾತ್ರಾ ಮಹೋತ್ಸವಕ್ಕೆ ಸಕಲ ರೀತಿಯಲ್ಲೂ ಸಜ್ಜಾಗಿದೆ. ಪ್ರತಿ ವರ್ಷದಂತೆ ಈ ವರ್ಷವೂ ನವೆಂಬರ್ 6ರಿಂದ 10ರವರೆಗೆ ಐದು ದಿನಗಳ ಕಾಲ ಅದ್ಧೂರಿಯಾಗಿ ಜಾತ್ರಾ ಮಹೋತ್ಸವ ನಡೆಯಲಿದ್ದು, ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದೆ ಎಂದು ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ತಿಳಿಸಿದೆ.

ಕಳೆದ ಒಂದು ವಾರದಿಂದ ಬೆಟ್ಟದಲ್ಲಿ ಜಾತ್ರೆಯ ಸಿದ್ಧತೆಗಳು ಭರದಿಂದ ಸಾಗಿದ್ದು, ಇದೀಗ ಬಹುತೇಕ ಎಲ್ಲಾ ಸಿದ್ಧತೆಗಳನ್ನು ಪ್ರಾಧಿಕಾರ ಪೂರ್ಣಗೊಳಿಸಿದೆ. ದೀಪಾವಳಿ ಹಬ್ಬದ ಧಾರ್ಮಿಕ ಮಹತ್ವ ಸಾರುವ ಈ ಜಾತ್ರೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲದೆ ನೆರೆಯ ತಮಿಳುನಾಡು, ಆಂಧ್ರಪ್ರದೇಶ ಹಾಗೂ ಕೇರಳ ರಾಜ್ಯಗಳಿಂದಲೂ ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಮಾದಪ್ಪನ ದರ್ಶನ ಪಡೆದು ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ನವೆಂಬರ್ 6ರಂದು ಜಾತ್ರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆಯಲಿದ್ದು, ಅಂದು ಮಾದಪ್ಪನಿಗೆ ವಿಶೇಷ ಪೂಜೆ, ಪುನಸ್ಕಾರ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ನವೆಂಬರ್ 7ರಂದು ಬೆಳಗ್ಗೆಯಿಂದಲೇ ಸ್ವಾಮಿಗೆ ಎಣ್ಣೆ ಮಜ್ಜನದ ವಿಶೇಷ ಪೂಜೆ ನಡೆಯಲಿದ್ದು, ಇದು ಕ್ಷೇತ್ರದ ಪ್ರಮುಖ ಸಂಪ್ರದಾಯಗಳಲ್ಲಿ ಒಂದಾಗಿದೆ. ನವೆಂಬರ್ 8ರಂದು ನರಕ ಚತುರ್ದಶಿ ಪ್ರಯುಕ್ತ ಮಾದಪ್ಪನಿಗೆ ವಿಶೇಷ ಅಲಂಕಾರ, ಅಭಿಷೇಕ, ನೈವೇದ್ಯ ಹಾಗೂ ವಿವಿಧ ಧಾರ್ಮಿಕ ಸೇವೆಗಳನ್ನು ಹಮ್ಮಿಕೊಳ್ಳಲಾಗಿದೆ.

ನವೆಂಬರ್ 9ರಂದು ಅಮಾವಾಸ್ಯೆ ಅಂಗವಾಗಿ ಬೆಳಗ್ಗೆ 9.30ರ ನಂತರ ಸಾಲೂರು ಮಠದ ಪರಮಪೂಜ್ಯ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳ ದಿವ್ಯ ನೇತೃತ್ವದಲ್ಲಿ ಪವಿತ್ರ ಹಾಲರುವೆ ಉತ್ಸವವು ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಅತ್ಯಂತ ವಿಜೃಂಭಣೆಯಿಂದ ಜರುಗಲಿದೆ.

ನ.10ರಂದು ಮಹಾರಥೋತ್ಸವ ಪ್ರಮುಖ ಆಕರ್ಷಣೆ:

ಐದು ದಿನಗಳ ಜಾತ್ರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಮಹಾರಥೋತ್ಸವವು ನವೆಂಬರ್ 10ರ ಸೋಮವಾರ ಬೆಳಗ್ಗೆ 7.30ರಿಂದ 8.40ರ ನಡುವಿನ ಶುಭ ಮುಹೂರ್ತದಲ್ಲಿ ನಡೆಯಲಿದೆ. ಈಗಾಗಲೇ ರಥ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಸಾಲೂರು ಬೃಹನ್ಮಠದ ಶ್ರೀಗಳ ನೇತೃತ್ವದಲ್ಲಿ ಧಾರ್ಮಿಕ ಪೂಜೆ ಸಲ್ಲಿಸಿ ರಥ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮಹಾರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.

ಲಕ್ಷಾಂತರ ಭಕ್ತರಿಗಾಗಿ ಅಗತ್ಯ ಸೌಲಭ್ಯಗಳ ವ್ಯವಸ್ಥೆ:

ಜಾತ್ರೆಗೆ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ದೇವರ ದರ್ಶನಕ್ಕೆ 24 ಗಂಟೆಗಳ ಅವಕಾಶ ನೀಡಲಾಗಿದ್ದು, ಭಕ್ತರು ಸರದಿ ಸಾಲಿನಲ್ಲಿ ಸುಗಮವಾಗಿ ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ವಿವಿಧೆಡೆ ನಿರಂತರ ದಾಸೋಹ, ಕುಡಿಯುವ ನೀರು, ಹೆಚ್ಚುವರಿ ತಾತ್ಕಾಲಿಕ ಶೌಚಾಲಯಗಳು, ಕಸ ವಿಲೇವಾರಿ ವ್ಯವಸ್ಥೆ ಹಾಗೂ ಪ್ರಸಾದದ ಹೆಚ್ಚುವರಿ ಲಾಡು ಮಾರಾಟ ಕೇಂದ್ರಗಳನ್ನು ತೆರೆಯಲಾಗಿದೆ. ಭಕ್ತರಿಗೆ ಅಗತ್ಯ ಮಾಹಿತಿ ಒದಗಿಸಲು ಬೆಟ್ಟದ ವಿವಿಧೆಡೆ ಮಾಹಿತಿ ಕೇಂದ್ರಗಳನ್ನೂ ಸ್ಥಾಪಿಸಲಾಗಿದೆ.

ಮಹಾರಥೋತ್ಸವ ಸೇರಿದಂತೆ ಐದು ದಿನಗಳ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಯಾವುದೇ ವಿಘ್ನಗಳಿಲ್ಲದೆ ಸುಸೂತ್ರವಾಗಿ ನೆರವೇರಲಿ ಹಾಗೂ ನಾಡಿನ ಸಮಸ್ತ ಭಕ್ತರಿಗೆ ಮಲೆ ಮಹದೇಶ್ವರ ಸ್ವಾಮಿಯ ಅನುಗ್ರಹ ಲಭಿಸಲಿ ಎಂಬ ಆಶಯದೊಂದಿಗೆ ಪ್ರಾಧಿಕಾರದಿಂದ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಮಲೆ ಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪುರುಷೋತ್ತಮ ಸೇರಿದಂತೆ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *