
ಕುಂದಗೋಳ: ಪಡಿತರ ಅಕ್ರಮ ಸಾಗಣೆ ಪ್ರಕರಣದಲ್ಲಿ ನಿಜವಾದ ತಪ್ಪಿತಸ್ಥ ಅಧಿಕಾರಿಗಳನ್ನು ರಕ್ಷಿಸಿ, ಅಮಾಯಕರನ್ನು ಬಲಿಪಶು ಮಾಡುತ್ತಿರುವ ತಾಲೂಕು ಆಡಳಿತ ಹಾಗೂ ಆಹಾರ ಇಲಾಖೆಯ ತಾರತಮ್ಯದ ನಡೆ ತೀವ್ರ ಖಂಡನೀಯ. ಉಗ್ರಾಣದಿಂದ ಹರ್ಲಾಪುರಕ್ಕೆ ಸಾಗಿಸಬೇಕಿದ್ದ 320 ಚೀಲ ಅಕ್ಕಿಯಲ್ಲಿ 96 ಚೀಲ ಅಕ್ಕಿ ಮಾಯವಾಗಿದ್ದು ಮತ್ತು ನಿಯಮಬಾಹಿರವಾಗಿ 88 ಚೀಲ ಗೋಧಿ ಸಾಗಿಸುತ್ತಿದ್ದುದು ಸಾರ್ವಜನಿಕರ ಜಾಗರೂಕತೆಯಿಂದ ಬೆಳಕಿಗೆ ಬಂದಿದೆ. ಆದರೆ, ಈ ಬೃಹತ್ ದಂಧೆಯ ಹಿಂದಿರುವ ಭ್ರಷ್ಟ ಆಡಳಿತ ವ್ಯವಸ್ಥೆಯನ್ನು ತನಿಖೆಗೆ ಒಳಪಡಿಸುವ ಬದಲು, ಅಧಿಕಾರಿಗಳು ತಮ್ಮ ತಪ್ಪುಗಳನ್ನು ಮುಚ್ಚಿಹಾಕಲು ಕಪಟ ನಾಟಕವಾಡುತ್ತಿದ್ದಾರೆ. ಹಾಗಾದರೆ ಆ 96 ಚೀಲ ಅಕ್ಕಿ ಎಲ್ಲಿಗೆ ಕಳ್ಳಮಾರ್ಗ ಹಿಡಿಯಿತು? ಇದಕ್ಕೆ ಯಾರು ಹೊಣೆ? ಎಂಬ ಯಕ್ಷ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿದೆ.
ವಾಸ್ತವದಲ್ಲಿ ಹರ್ಲಾಪುರ ಪಡಿತರ ಕೇಂದ್ರಕ್ಕೆ ಹೋಗಬೇಕಿದ್ದ ಅಲಾಟ್ಮೆಂಟ್ ಈ ತಿಂಗಳ 7ನೇ ತಾರೀಖಿನಂದೇ ಎರಡು ಬಾರಿ ಇಂಟೆಂಟ್ ಹಾಕಿ ಪೂರ್ಣಗೊಂಡಿದೆ. ಈ ತಿಂಗಳ ಬಿಲ್ ಸ್ಟೇಟ್ಮೆಂಟ್ ಅನ್ನು ಸರಿಯಾಗಿ ಪರಿಶೀಲಿಸದ ಅಧಿಕಾರಿಗಳು, ತಮ್ಮ ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಸುಳ್ಳು ಹಾಸ್ಟೆಲ್ ಬಿಲ್ ಸೃಷ್ಟಿಸಿದ್ದಾರೆ ಎಂಬ ಬಲವಾದ ಆರೋಪ ಕೇಳಿಬರುತ್ತಿದೆ. ಈ ಕುರಿತು ಆಹಾರ ಇಲಾಖೆಯ ನಿರೀಕ್ಷಕರು ಹಾಗೂ ಉಪ ನಿರೀಕ್ಷಕರನ್ನು ಪ್ರಶ್ನಿಸಿದಾಗ, “ಇದು ತಾಂತ್ರಿಕ ದೋಷ” ಎಂದು ನೆಪ ಹೇಳುತ್ತಿದ್ದಾರೆ. ಅಧಿಕಾರಿಗಳಿರುವುದು ತಪ್ಪುಗಳನ್ನು ತಿದ್ದುವುದಕ್ಕೋ ಅಥವಾ ತಾಂತ್ರಿಕ ದೋಷದ ನೆಪ ಹೇಳಿ ಜಾರಿಕೊಳ್ಳುವುದಕ್ಕೋ? ಸ್ವತಃ ಅಧಿಕಾರಿಗಳೇ ಎಸಗಿದ ಗಂಭೀರ ಪ್ರಮಾದಕ್ಕೆ ವಾಹನದ ಚಾಲಕ ಹಾಗೂ ಹರ್ಲಾಪುರದ ಅಂಗಡಿ ಮಾಲೀಕರ ಮೇಲೆ ಸುಳ್ಳು ಎಫ್ಐಆರ್ ದಾಖಲಿಸಿರುವುದು ಆಡಳಿತ ವ್ಯವಸ್ಥೆಯ ಅತ್ಯಂತ ಹೇಯ ಹಾಗೂ ಖಂಡನೀಯ ಕೃತ್ಯವಾಗಿದೆ.
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಆಹಾರ ಇಲಾಖೆಯ ಅಧಿಕಾರಿಗಳು ಹಾಗೂ ತಹಶೀಲ್ದಾರ್ ಅವರು ತಡರಾತ್ರಿವರೆಗೆ ಸರಣಿ ಸಭೆ ನಡೆಸಿ, ಪ್ರಕರಣದ ಹಾದಿ ತಪ್ಪಿಸುವ ದಾರಿ ಹೆಣೆದಿದ್ದಾರೆ ಎಂಬ ಅನುಮಾನ ಬಲವಾಗಿ ವ್ಯಕ್ತವಾಗುತ್ತಿದೆ. ಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುವ ಅಧಿಕಾರಿ ಸುಭಾಷ ಅರಳಿಕಟ್ಟಿ ಸೇರಿದಂತೆ ಆಹಾರ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳ ನೇರ ಶಾಮೀಲಾತಿಯಿಂದಲೇ ಈ ಬೃಹತ್ ಅಕ್ರಮ ನಡೆದಿದೆ ಎಂಬುದು ಸ್ಪಷ್ಟವಾಗಿದ್ದರೂ, ಪ್ರಭಾವಿ ಅಧಿಕಾರಿಗಳನ್ನು ರಕ್ಷಿಸಲು ಆಡಳಿತ ಯಂತ್ರ ಆತುರದಿಂದ ಅಮಾಯಕರ ಮೇಲೆ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಎಂಬಂತೆ ಎಫ್ಐಆರ್ ದಾಖಲಿಸಿ ಕೈತೊಳೆದುಕೊಳ್ಳಲು ಯತ್ನಿಸಿದೆ. ಅಧಿಕಾರಿಗಳ ಈ ಜಾಣ ನಡೆ ಮತ್ತು ಹೊಣೆಗೇಡಿತನಕ್ಕೆ ಸಾರ್ವಜನಿಕರ ಆಕ್ರೋಶ ಮುಗಿಲುಮುಟ್ಟಿದೆ.
ಉಗ್ರಾಣದ ಭದ್ರತೆ ಹಾಗೂ ಧಾನ್ಯ ಸಾಗಣೆಯ ಅಧಿಕೃತ ಅನುಮತಿ ನೀಡುವುದು ನೇರವಾಗಿ ಆಹಾರ ಇಲಾಖೆಯ ಹೊಣೆಗಾರಿಕೆಯಾಗಿದೆ. ಪ್ರತಿಯೊಂದು ಚೀಲಕ್ಕೂ ಲೆಕ್ಕವಿಡಬೇಕಾದ ಅಧಿಕಾರಿಗಳ ಕಣ್ಣುತಪ್ಪಿಸಿ ಬೃಹತ್ ಪ್ರಮಾಣದ ಧಾನ್ಯ ವ್ಯತ್ಯಾಸವಾಗಲು ಹೇಗೆ ಸಾಧ್ಯ? ಆಮ್ ಆದ್ಮಿ ಪಾರ್ಟಿ ಸೇರಿದಂತೆ ವಿವಿಧ ಸಂಘಟನೆಗಳು ಈಗಾಗಲೇ ಆಡಳಿತದ ಈ ತಾರತಮ್ಯದ ವಿರುದ್ಧ ಧರಣಿ ನಡೆಸಿ, ಭ್ರಷ್ಟ ಅಧಿಕಾರಿಗಳ ಮೇಲೆ ಕಠಿಣ ಶಿಸ್ತುಕ್ರಮಕ್ಕೆ ಒತ್ತಾಯಿಸಿವೆ. ಇನ್ನಾದರೂ ಜಿಲ್ಲಾ ಮಟ್ಟದ ಅಧಿಕಾರಿಗಳು ಎಚ್ಚೆತ್ತುಕೊಂಡು ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತಾರೋ ಅಥವಾ ಬರೀ ಹೆಸರಿಗೆ ಮಾತ್ರ ನೋಟಿಸ್ ನೀಡಿ ಕೈಕಟ್ಟಿ ಕುಳಿತುಕೊಳ್ಳುತ್ತಾರೋ ಎಂಬುದು ಸಾರ್ವಜನಿಕರ ಕುತೂಹಲಕ್ಕೆ ಕಾರಣವಾಗಿದೆ. ಈ ಹಠಾತ್ ಎಫ್ಐಆರ್ ಹಿಂದಿನ ರಹಸ್ಯವೇನು? ತಡರಾತ್ರಿ ನಡೆದ ಸಭೆಯಲ್ಲಿ ಅಧಿಕಾರಿಗಳು ‘ಡೀಲ್’ ಕುದುರಿಸಿಕೊಂಡು ಅಕ್ರಮ ಮುಚ್ಚಿಹಾಕಿದ್ದಾರಯೇ? ಎಲ್ಲಾ ಸ್ಫೋಟಕ ಸತ್ಯಗಳನ್ನು ‘ಮೈ ಪಬ್ಲಿಕ್ ಸಮಾಚಾರ’ ಸುದ್ದಿವಾಹಿನಿಯ ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ.

