
ನವಲಗುಂದ: ಇಡಗುಂಜಿ ಗಣಪತಿ ಹೊರತುಪಡಿಸಿದರೆ ಕರ್ನಾಟಕದಲ್ಲಿ ನಡೆಯುವ ಏಕೈಕ ಗಣಪತಿ ರಥೋತ್ಸವ ಎಂಬ ಖ್ಯಾತಿಗೆ ಪಾತ್ರವಾಗಿರುವ ನವಲಗುಂದದ ಗಣಪತಿ ರಥೋತ್ಸವವು ಗಣೇಶೋತ್ಸವದ 9ನೇ ದಿನವಾದ ಮಂಗಳವಾರ ಸಕಲ ವಾದ್ಯಮೇಳ, ಸುಮಂಗಲೆಯರ ಆರತಿ ಮೆರವಣಿಗೆ ಹಾಗೂ ಸಾವಿರಾರು ಭಕ್ತರ ಹರ್ಷೋದ್ಘಾರದ ನಡುವೆ ವಿಜೃಂಭಣೆಯಿಂದ ನೆರವೇರಿತು.
ಸೆ.14ರಿಂದ 21ರವರೆಗೆ ಒಂಬತ್ತು ದಿನಗಳ ಕಾಲ ದೇವಸ್ಥಾನದ ಪಂಚಲೋಹದ ಮೂರ್ತಿಯ ವಾಹನೋತ್ಸವ, ಮೂಲ ಗಣೇಶ ಮೂರ್ತಿಗೆ ನಿರಂತರ ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. 9ನೇ ದಿನವಾದ ಮಂಗಳವಾರ ಬೆಳಿಗ್ಗೆ ಶ್ರೀ ಗಣಪತಿಗೆ ವಿಶೇಷ ಅಭಿಷೇಕ, ವರದಾ ಶಂಕರ ಪೂಜೆ, ಕಳಸಾರೋಹಣ ಹಾಗೂ ಮಹಾಪ್ರಸಾದ ಕಾರ್ಯಕ್ರಮ ಜರುಗಿತು. ಈ ಎಲ್ಲ ಧಾರ್ಮಿಕ ಕಾರ್ಯಗಳು ಗವಿಮಠದ ಶ್ರೀ ಬಸವಲಿಂಗ ಸ್ವಾಮಿಗಳ ನೇತೃತ್ವದಲ್ಲಿ ನೆರವೇರಿದವು.
ಪ್ರತಿವರ್ಷದಂತೆ ಈ ಬಾರಿಯೂ ಮಹಾಪ್ರಸಾದಕ್ಕೆ ಪಟ್ಟಣದ ಜನರು ಜಾತಿ, ಮತ, ಪಂಥಗಳ ಭೇದವಿಲ್ಲದೆ ಗಣಪತಿಗೆ ಕರಿಗಡಬನ್ನು ನೈವೇದ್ಯ ರೂಪದಲ್ಲಿ ಅರ್ಪಿಸಿದರು. ಕ್ವಿಂಟಾಲ್ಗಟ್ಟಲೆ ಸಂಗ್ರಹವಾದ ಕರಿಗಡಬಿನೊಂದಿಗೆ ತುಪ್ಪ ಹಾಗೂ ಗೋಧಿಹುಗ್ಗಿಯನ್ನು ಮಹಾಪ್ರಸಾದವಾಗಿ ಭಕ್ತರಿಗೆ ವಿತರಿಸಲಾಯಿತು.
ದೇವಸ್ಥಾನದ ರಾಜಪುರೋಹಿತರಾದ ಸಿದ್ದಾಂತಿ ಕುಟುಂಬ ಹಾಗೂ ಸಂಜುಸ್ವಾಮಿ ಹಿರೇಮಠ ಅವರು ಧಾರ್ಮಿಕ ಕಾರ್ಯಗಳನ್ನು ನೆರವೇರಿಸಿಕೊಟ್ಟರು. ವಾದ್ಯಮೇಳದೊಂದಿಗೆ ನಡೆದ ಮೆರವಣಿಗೆಯಲ್ಲಿ ಸುಮಂಗಲೆಯರು ಆರತಿ ಬೆಳಗಿದರು. ಸಾವಿರಾರು ಭಕ್ತರು ಪಾಲ್ಗೊಂಡು ಗಣಪತಿಯ ದರ್ಶನ ಪಡೆದು ಭಕ್ತಿ ಭಾವ ಮೆರೆದರು.
ಗಣಪತಿ ಉತ್ಸವ ಸಮಿತಿಯ ಅಣ್ಣಪ್ಪ ಬಾಗಿ, ಸಿದ್ದಲಿಂಗಯ್ಯ ಹಿರೇಮಠ, ಈರಣ್ಣ ಚವಡಿ, ಶಂಭು ಶಿದ್ರಾಶೆಟ್ಟರ, ಸಂತೋಷ ನಾವಳ್ಳಿ, ಹಕ್ಕರಕಿ, ಸತೀಶ ಜಿನಗಾ, ವಿಜಯ ಬ್ಯಾಳಿ, ಸಿದ್ದು ಗಣಾಚಾರಿ, ಬಸನಗೌಡ ಮುದಿಗೌಡರ, ಆನಂದ ಹೂಗಾರ, ಮಹಾಂತೇಶ ಬಾಗಿ, ವಿನಾಯಕ ಮಟಿಗೇರ, ಆರ್.ಬಿ. ಧನಮಾರು, ವಿಠಲ ಮೆಣಸಗಿ, ಮುದಕಪ್ಪ ಕುಂಬಾರ, ವಿಜಯ ನಾಗಾವಿ, ಮುತ್ತಣ್ಣ ಕುಂಬಾರ, ಉಮೇಶ ಅಂಗಡಿ, ಹುಸೇನ ಆನಿ ಸೇರಿದಂತೆ ಸಾವಿರಾರು ಭಕ್ತರು ಉಪಸ್ಥಿತರಿದ್ದರು.

