
ಧಾರವಾಡ: 2026-27ನೇ ಸಾಲಿನ ಹಿಂಗಾರು ಹಂಗಾಮಿಗೆ ಧಾರವಾಡ ಜಿಲ್ಲೆಯ ಎಲ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಕಡಲೆ, ಜೋಳ, ಗೋಧಿ, ಮೆಕ್ಕೆಜೋಳ ಹಾಗೂ ಕುಸುಬೆ ಸೇರಿದಂತೆ ವಿವಿಧ ಬಿತ್ತನೆ ಬೀಜಗಳು ಲಭ್ಯವಿದ್ದು, ರೈತರು ತಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಬಿತ್ತನೆ ಬೀಜ ಪಡೆಯಬಹುದು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಒಬ್ಬ ರೈತರಿಗೆ ಒಂದು ಹಂಗಾಮಿನಲ್ಲಿ ಗರಿಷ್ಠ 5 ಎಕರೆ (2 ಹೆಕ್ಟೇರ್) ಪ್ರದೇಶಕ್ಕೆ ಹಾಗೂ ವರ್ಷದಲ್ಲಿ ಯಾವುದೇ ಎರಡು ಹಂಗಾಮಿನಲ್ಲಿ ಮಾತ್ರ ಬಿತ್ತನೆ ಬೀಜ ವಿತರಿಸಲು ಅವಕಾಶವಿದೆ. ಒಂದು ಬೆಳೆಯ ಬಿತ್ತನೆ ಬೀಜವನ್ನು ಗರಿಷ್ಠ 3 ಎಕರೆಗೆ ಸೀಮಿತಗೊಳಿಸಿ, ಉಳಿದ 2 ಎಕರೆಗೆ ಬೇರೆ ಬೆಳೆಯ ಬಿತ್ತನೆ ಬೀಜ ವಿತರಿಸಲಾಗುವುದು.
ಬಿತ್ತನೆ ಬೀಜ ಪಡೆಯಲು ರೈತರು ಕಡ್ಡಾಯವಾಗಿ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ತರಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರು ಜಾತಿ ಪ್ರಮಾಣ ಪತ್ರದೊಂದಿಗೆ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿಯನ್ನು ಸಲ್ಲಿಸಬೇಕು. ಬಿತ್ತನೆ ಬೀಜ ಪಡೆಯಲು ಎಫ್ಐಡಿ ನಂಬರ್ ಹೊಂದಿರುವುದು ಕಡ್ಡಾಯವಾಗಿದೆ.
ಇನ್ನು ಒಣ ಮಣ್ಣಿನಲ್ಲಿ ಕಡಿಮೆ ತೇವಾಂಶ ಇರುವ ಪ್ರದೇಶಗಳಲ್ಲಿ, ಅರೆ ಹಸಿಯಾಗುವ ಸಂದರ್ಭದಲ್ಲಿ ರೈತರು ಬಿತ್ತನೆ ಕೈಗೊಳ್ಳದೆ ಸಮರ್ಪಕ ಮಳೆಗಾಗಿ ಕಾಯುವುದು ಸೂಕ್ತ. ಮಣ್ಣಿನಲ್ಲಿ ಅಗತ್ಯ ಪ್ರಮಾಣದ ತೇವಾಂಶವಿದ್ದು, ಬಿತ್ತನೆಗೆ ಹದಬಂದಿರುವ ಸಂದರ್ಭದಲ್ಲಿ ಮಾತ್ರ ಬಿತ್ತನೆ ಕೈಗೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

