
ಧಾರವಾಡ: ಜಿಲ್ಲಾ ಉಸ್ತುವಾರಿ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರ 51ನೇ ಜನ್ಮದಿನದ ಅಂಗವಾಗಿ ಜಿಲ್ಲೆಯಾದ್ಯಂತ ವಿಶೇಷ ಚೇತನರು ಹಾಗೂ ನಿರಾಶ್ರಿತರ ಏಳಿಗೆಗಾಗಿ ಹಮ್ಮಿಕೊಂಡಿದ್ದ ಸಮಾಜಮುಖಿ ಕಾರ್ಯಕ್ರಮಗಳು ಗಮನ ಸೆಳೆದವು. ನಗರದ ಶಿಕ್ಷಕಿಯರ ಸರ್ಕಾರಿ ತರಬೇತಿ ಕಾಲೇಜು (ಟಿಸಿಡಬ್ಲ್ಯೂ) ಸಭಾಂಗಣದಲ್ಲಿ ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ, ಶಾಲಾ ಶಿಕ್ಷಣ ಇಲಾಖೆ, ಸಂತೋಷ ಲಾಡ್ ಫೌಂಡೇಶನ್ ಮತ್ತು ಜನಮುಖಿ ಸೇವಾ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ವಿಶೇಷ ಚೇತನರು ಹಾಗೂ ಅವರ ಕುಟುಂಬದವರೊಂದಿಗೆ ಸಂವಾದ ಮತ್ತು ಸಾಧನ ಸಲಕರಣೆ ವಿತರಣಾ ಸಮಾರಂಭ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಅವರು, ಜಿಲ್ಲೆಯಲ್ಲಿ ಈಗಾಗಲೇ ಎಲ್ಲ ವಿಶೇಷ ಚೇತನ ಹಾಗೂ ದಿವ್ಯಾಂಗ ಮಕ್ಕಳ ಸಮೀಕ್ಷೆ ನಡೆಸಲಾಗಿದ್ದು, ಅವರಿಗೆ ಅಗತ್ಯವಿರುವ ಎಲ್ಲ ಉಪಕರಣ ಹಾಗೂ ಸೌಲಭ್ಯಗಳನ್ನು ಸರ್ಕಾರದಿಂದ ಒದಗಿಸಲಾಗುತ್ತಿದೆ ಎಂದು ತಿಳಿಸಿದರು. ವಿಶೇಷ ಚೇತನ ಮಕ್ಕಳನ್ನು ಬರೀ ಕರುಣೆಯಿಂದ ನೋಡದೆ, ಅವರಿಗೆ ಸಿಗಬೇಕಾದ ನ್ಯಾಯಯುತ ಸರ್ಕಾರಿ ಸೌಲಭ್ಯಗಳನ್ನು ತಲುಪಿಸುವಲ್ಲಿ ಅಧಿಕಾರಿಗಳು ಮತ್ತು ಸಂಸ್ಥೆಗಳು ಆದ್ಯತೆ ನೀಡಬೇಕು. ಈ ಮಕ್ಕಳನ್ನು ಸಂರಕ್ಷಿಸುತ್ತಿರುವ ಕುಟುಂಬಗಳಿಗೂ ಸರ್ಕಾರದ ನಿಯಮಾನುಸಾರ ಅಗತ್ಯ ನೆರವು ನೀಡಲಾಗುವುದು ಎಂದರು. ಸಚಿವರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಸಂತೋಷ ಲಾಡ್ ಫೌಂಡೇಶನ್ ಹಮ್ಮಿಕೊಂಡಿರುವ ಈ ಮಾದರಿ ಕಾರ್ಯಕ್ರಮವು ವಿಕಲಚೇತನರಲ್ಲಿ ಬದುಕಿನ ಆತ್ಮವಿಶ್ವಾಸ ಮೂಡಿಸುತ್ತದೆ ಎಂದು ಅವರು ಶ್ಲಾಘಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಮಾತನಾಡಿ, ವಿಶೇಷ ಚೇತನರಲ್ಲಿ ಅಸಾಧಾರಣ ಬುದ್ಧಿವಂತಿಕೆ ಮತ್ತು ಜ್ಞಾನವಿರುತ್ತದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಲು ಸಮಾಜ ಮತ್ತು ಸಮುದಾಯದ ಬೆಂಬಲ ಅತ್ಯಗತ್ಯ. ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಪಂಚಾಯತಿಗಳ ಮೂಲಕ ವಿಕಲಚೇತನರ ಅಭಿವೃದ್ಧಿಗಾಗಿ ವಿಶೇಷ ಅನುದಾನಗಳನ್ನು ಮೀಸಲಿಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಸೇವೆಗಳ ವಿವರ: ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ಧಾರವಾಡದ ಶಿಕ್ಷಕಿಯರ ತರಬೇತಿ ಸಂಸ್ಥೆ, ಹುಬ್ಬಳ್ಳಿಯ ನಿರಾಶ್ರಿತರ ಕಲ್ಯಾಣ ಕೇಂದ್ರ ಮತ್ತು ಕಲಘಟಗಿ ಪಟ್ಟಣಗಳಲ್ಲಿ ವಿಶೇಷ ಚೇತನರಿಗೆ ಹಾಗೂ ನಿರಾಶ್ರಿತರಿಗೆ ಸುಮಾರು 10 ಲಕ್ಷ ರೂಪಾಯಿ ಮೊತ್ತದ ಸಾಧನಗಳನ್ನು ವಿತರಿಸಲಾಯಿತು. ಇದರಲ್ಲಿ 20 ವ್ಹೀಲ್ ಚೇರ್, 100 ಫಿಸಿಯೋಥೆರಪಿ ಬಾಲ್, 50 ತೂಕದ ಸಾಧನಗಳು ಸೇರಿದಂತೆ ಆಟಿಕೆ ಸಾಮಾನು, ಹಣ್ಣು ಹಾಗೂ ಧಾನ್ಯದ ಕಿಟ್ಗಳನ್ನು ವಿತರಿಸಲಾಯಿತು. ಅಲ್ಲದೆ, ವಿಕಲಚೇತನ ಮಗುವಿಗೆ ಆರ್ಥಿಕ ಸಹಾಯವನ್ನೂ ನೀಡಲಾಯಿತು.
ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಧಾರವಾಡ ತಹಶೀಲ್ದಾರ ಡಾ. ಡಿ.ಎಚ್. ಹೂಗಾರ, ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣ ಸದಲಗಿ, ಡಿವೈಪಿಸಿ ಅಧಿಕಾರಿ ಎಸ್.ಎಮ್. ಹುಡೇದಮನಿ, ಜನಮುಖಿ ಸೇವಾ ಸಂಸ್ಥೆಯ ಬಸವರಾಜ ಮ್ಯಾಗೇರಿ, ದೈಹಿಕ ಶಿಕ್ಷಕ ರವಿಕುಮಾರ ಬಾರಾಟಕೆ, ಸಂತೋಷ ಲಾಡ್ ಫೌಂಡೇಶನ್ನ ಡಾ. ಜೆ. ಸಂದೀಪ ಹಾಗೂ ಸಚಿವರ ಆಪ್ತ ಸಹಾಯಕ ಶ್ರೀಕಾಂತ ಗಾಯಕವಾಡ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

