
ಕುಂದಗೋಳ: ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಸ್ಥಳದಲ್ಲಿಯೇ ತ್ವರಿತ ಹಾಗೂ ಸೂಕ್ತ ಪರಿಹಾರ ಒದಗಿಸುವ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ವತಿಯಿಂದ ಹೋಬಳಿ ಮಟ್ಟದ ಬೃಹತ್ ‘ಪ್ರಜಾಸೇವಾ ಆಂದೋಲನ’ ಸಭೆಯನ್ನು ಸೆ.12ರಂದು ಸಂಶಿ ಗ್ರಾಮದಲ್ಲಿ ಆಯೋಜಿಸಲಾಗಿದೆ ಎಂದು ತಹಶೀಲ್ದಾರ ರಾಜು ಮಾವರಕರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕಿನ ಸಂಶಿ ಗ್ರಾಮದ ವಾಲ್ಮೀಕಿ ಸಮುದಾಯ ಭವನದಲ್ಲಿ ಶನಿವಾರ ಬೆಳಿಗ್ಗೆ 10.30ಕ್ಕೆ ಸಭೆ ನಡೆಯಲಿದ್ದು, ಸ್ಥಳೀಯ ಶಾಸಕ ಎಂ.ಆರ್. ಪಾಟೀಲ ಅವರು ನೇತೃತ್ವ ವಹಿಸಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಭೆಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿ, ವಿವಿಧ ಸರ್ಕಾರಿ ಸೌಲಭ್ಯಗಳು ಹಾಗೂ ಪ್ರಮಾಣ ಪತ್ರಗಳನ್ನು ಸ್ಥಳದಲ್ಲಿಯೇ ವಿತರಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ವಿಧವಾ ವೇತನ, ಅಂಗವಿಕಲರ ಮಾಸಾಶನ, ಸಂಧ್ಯಾ ಸುರಕ್ಷಾ ಯೋಜನೆ ಸೇರಿದಂತೆ ವಿವಿಧ ಪಿಂಚಣಿ ಯೋಜನೆಗಳು, ಪಹಣಿ ತಿದ್ದುಪಡಿ, ಪೋಡಿ ಸಮಸ್ಯೆ, ಖಾತೆ ಬದಲಾವಣೆ, ಹೊಸ ಪಡಿತರ ಚೀಟಿ, ವಸತಿ ಯೋಜನೆ ಹಾಗೂ ನಿವೇಶನ ಹಂಚಿಕೆ, ಕುಡಿಯುವ ನೀರು ಮತ್ತು ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿರಲಿದ್ದಾರೆ. ಅಲ್ಲದೆ ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ, ಅನ್ನಭಾಗ್ಯ ಹಾಗೂ ಯುವನಿಧಿ ಸೇರಿದಂತೆ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದ ದೂರುಗಳನ್ನೂ ಸ್ವೀಕರಿಸಲಾಗುತ್ತದೆ.
ಸಾರ್ವಜನಿಕರು ಮನೆ ಬಾಗಿಲಿಗೆ ತಲುಪಿಸಲಾಗಿರುವ ಪೂರ್ವ ಮುದ್ರಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ಆಧಾರ್ ಹಾಗೂ ಪಡಿತರ ಚೀಟಿ ದಾಖಲೆಗಳೊಂದಿಗೆ ಸಭೆಗೆ ಹಾಜರಾಗಬೇಕು. ಅರ್ಜಿಗಳನ್ನು ಸ್ಥಳದಲ್ಲಿಯೇ ಆನ್‌ಲೈನ್ ಮೂಲಕ ದಾಖಲಿಸಿ ರಶೀದಿ ನೀಡುವ ಮೂಲಕ ಸಾಧ್ಯವಾದಷ್ಟು ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು. ತಾಲೂಕಿನ ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ತಹಶೀಲ್ದಾರ ರಾಜು ಮಾವರಕರ ಮನವಿ ಮಾಡಿದ್ದಾರೆ.

