ಪಶ್ಚಿಮ ಪದವೀಧರರ ಮತಕ್ಷೇತ್ರದ ಕರಡು ಮತದಾರರ ಪಟ್ಟಿ ಪ್ರಕಟ: ಒಟ್ಟು 74,316 ಮತದಾರರು

Spread the love

ನ. 25 ರಿಂದ ಡಿ. 10 ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ; ವೆಬ್‌ಸೈಟ್‌ನಲ್ಲೂ ಪಟ್ಟಿ ಲಭ್ಯ

ಧಾರವಾಡ: ನವೆಂಬರ್ 25: ಕರ್ನಾಟಕ ಪಶ್ಚಿಮ ಪದವೀಧರರ ಮತಕ್ಷೇತ್ರದ ಪರಿಷ್ಕೃತ ಕರಡು ಮತದಾರರ ಪಟ್ಟಿಯನ್ನು ನವೆಂಬರ್ 25, 2025 ರಂದು ಪ್ರಕಟಿಸಲಾಗಿದೆ. ಪ್ರಕಟಿತ ಪಟ್ಟಿಯಲ್ಲಿ 43,573 ಪುರುಷರು ಮತ್ತು 30,743 ಮಹಿಳೆಯರು ಸೇರಿ ಒಟ್ಟು 74,316 ಮತದಾರರು ಇದ್ದಾರೆ ಎಂದು ಪಶ್ಚಿಮ ಪದವೀಧರರ ಮತಕ್ಷೇತ್ರದ ಮತದಾರರ ನೋಂದಣಿ ಅಧಿಕಾರಿಗಳು ಆಗಿರುವ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತೆ ಜಾನಕಿ ಕೆ.ಎಂ. ಅವರು ತಿಳಿಸಿದ್ದಾರೆ.

ಕರಡು ಪಟ್ಟಿ ಲಭ್ಯತೆ:

​ಪ್ರಕಟಿತ ಕರಡು ಮತದಾರರ ಪಟ್ಟಿಯು ಮತದಾರರ ನೋಂದಣಿ ಅಧಿಕಾರಿಗಳಾದ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಗಳಾದ ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಕಚೇರಿಗಳಲ್ಲಿ ಮತ್ತು ಅವರ ವ್ಯಾಪ್ತಿಯಲ್ಲಿ ಬರುವ ಎಲ್ಲ ನಿಯೋಜಿತ ಅಧಿಕಾರಿಗಳ ಕಚೇರಿಗಳಲ್ಲಿ ಸಾರ್ವಜನಿಕರ ಪರಿಶೀಲನೆಗೆ ಲಭ್ಯವಿದೆ.

​ಕರಡು ಮತದಾರರ ಪಟ್ಟಿಯು ಬೆಂಗಳೂರು ಮುಖ್ಯ ಚುನಾವಣಾಧಿಕಾರಿ ಅವರ ವೆಬ್‌ಸೈಟ್ www.ceokarnatake.kar.nic.in ನಲ್ಲಿ ಮತ್ತು ಬೆಳಗಾವಿ ಪ್ರಾದೇಶಿಕ ಕಾರ್ಯಾಲಯದ ವೆಬ್‌ಸೈಟ್ https://rcbelagavi.karnataka.gov.in ನಲ್ಲಿಯೂ ಲಭ್ಯವಿರುತ್ತದೆ ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಕೆ ಅವಧಿ:

​ಕರಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಅರ್ಹ ಪದವೀಧರರಿಂದ ಹಕ್ಕು ಮತ್ತು ಆಕ್ಷೇಪಣೆಗಳನ್ನು ನವೆಂಬರ್ 25, 2025 ರಿಂದ ಡಿಸೆಂಬರ್ 10, 2025 ರವರೆಗೆ ಸಲ್ಲಿಸಲು ಅವಕಾಶ ನೀಡಲಾಗಿದೆ.

​ಅರ್ಹ ಪ್ರತಿಯೊಬ್ಬ ವ್ಯಕ್ತಿಯು ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರ್ಪಡೆ ಮಾಡಲು, ಸೇರ್ಪಡೆಗೆ ಆಕ್ಷೇಪಣೆ ಸಲ್ಲಿಸಲು, ಹೆಸರು ತೆಗೆದುಹಾಕಲು ಹಾಗೂ ಪಟ್ಟಿಯಲ್ಲಿನ ನಮೂದುಗಳ ತಿದ್ದುಪಡಿಗಳಿಗಾಗಿ ಮತದಾರರ ನೋಂದಣಿ ನಿಯಮಗಳು 1960 ರ ಪ್ರಕಾರ ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಬೇಕು. ಭರ್ತಿ ಮಾಡಿದ ಅರ್ಜಿಯೊಂದಿಗೆ ಅವಶ್ಯಕ ದಾಖಲೆಗಳನ್ನು ಲಗತ್ತಿಸಿ, ಸಂಬಂಧಿಸಿದ ಸಹಾಯಕ ಮತದಾರರ ನೋಂದಣಾಧಿಕಾರಿಗಳು ಹಾಗೂ ನಿಯೋಜಿತ ಅಧಿಕಾರಿಗಳ ಕಚೇರಿಗಳಲ್ಲಿ ಸಲ್ಲಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *