
ನವಲಗುಂದ: ಸಮಾಜದಲ್ಲಿ ಸಮಾನತೆಯನ್ನು ನೆಲೆಗೊಳಿಸಲು ಸರಳ, ಸಾಮೂಹಿಕ ಹಾಗೂ ಅಂತರ್ಜಾತಿ ವಿವಾಹಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ಕರೆ ನೀಡಿದರು. ಜಾತಿ ವ್ಯವಸ್ಥೆ ನಿರ್ಮೂಲನೆಗೆ ಇದು ಪ್ರಮುಖ ಸಾಧನವಾಗಿದ್ದು, ಸಮಾಜದ ಸರ್ವರಲ್ಲಿ ಸಮಾನತೆ ತರಲು ಸಹಾಯಕವಾಗುತ್ತದೆ ಎಂದರು.
ರವಿವಾರದಂದು ನವಲಗುಂದ ಪಟ್ಟಣದ ಮಾಡೆಲ್ ಹೈಸ್ಕೂಲ್ ಮೈದಾನದಲ್ಲಿ ಶಾಸಕ ಎನ್.ಎಚ್.ಕೋನರಡ್ಡಿ ಅವರ ಪುತ್ರ ನವೀನಕುಮಾರ್ ಅವರ ವಿವಾಹ ಆರತಕ್ಷತೆ ಅಂಗವಾಗಿ ಆಯೋಜಿಸಲಾಗಿದ್ದ 75 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ, ನವದಂಪತಿಗಳಿಗೆ ಶುಭಾಶಯ ಕೋರಿ ಅವರು ಮಾತನಾಡಿದರು.
ಬಸವಣ್ಣನವರ ತತ್ವಾದರ್ಶ ಪಾಲನೆ
ಬಸವಣ್ಣನವರ ಕಲ್ಯಾಣ ಕ್ರಾಂತಿಯನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ಬಸವಣ್ಣನವರು ಅಂದೇ ಕೆಳಜಾತಿಯವರೊಂದಿಗೆ ಮೇಲುಜಾತಿಯವರ ಮದುವೆಗಳನ್ನು ನೆರವೇರಿಸಿ ಸಮಾಜದಲ್ಲಿ ಸಮಾನತೆ ತರಲು ಮುನ್ನುಡಿ ಬರೆದಿದ್ದರು. ಜಾತಿ ವ್ಯವಸ್ಥೆಯು ಹೋಗಲಾಡಬೇಕೆಂದರೆ ಅಂತರ್ಜಾತಿಯ ವಿವಾಹಗಳು ಹೆಚ್ಚಾಗಬೇಕು. ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ ಸೇರಿದಂತೆ ಎಲ್ಲರೂ ಮನುಷ್ಯರಾಗಿ ಬದುಕಬೇಕು. ಶಾಸಕ ಕೋನರಡ್ಡಿ ಅವರು 75 ಜೋಡಿಗಳ ಸಾಮೂಹಿಕ ವಿವಾಹಗಳನ್ನು ಏರ್ಪಡಿಸಿದ್ದು, ಈ ಸಂದರ್ಭದಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯದ ವಧು-ವರರು ಮದುವೆಯಾಗುತ್ತಿರುವುದು ಸಂತೋಷದ ಕ್ಷಣವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಬ್ಬರೇ ಮಕ್ಕಳು ಸಾಕು: ಸಿಎಂ ಸಲಹೆ
ಕಾರ್ಯಕ್ರಮದ ವೈಭವವನ್ನು ಕೊಂಡಾಡಿದ ಮುಖ್ಯಮಂತ್ರಿಗಳು, ನವಲಗುಂದದಲ್ಲಿ ಮದುವೆಯು ಜಾತ್ರೆಯಂತೆ ಕಾಣುತ್ತಿದೆ. ಕೋನರಡ್ಡಿ ಅವರು ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿದ್ದಾರೆ. ಹೊಸ ಜೀವನಕ್ಕೆ ಕಾಲಿಡುತ್ತಿರುವ ವಧು-ವರರಿಗೆ ನನ್ನ ಕಿವಿಮಾತು ಏನೆಂದರೆ, ಭಾರತದಲ್ಲಿ ಜನಸಂಖ್ಯೆ ಅತಿ ಹೆಚ್ಚಾಗುತ್ತಾ ಹೋಗುತ್ತಿರುವ ಹಿನ್ನೆಲೆಯಲ್ಲಿ, ‘ಆರ್ಥಿಗೊಬ್ಬ, ಕೀರ್ತಿಗೊಬ್ಬ’ ಎಂಬ ನುಡಿಮುತ್ತಿನಂತೆ ಕೇವಲ ಇಬ್ಬರೇ ಮಕ್ಕಳನ್ನು ಮಾಡಿಕೊಳ್ಳಬೇಕು ಮತ್ತು ಅವರಿಗೆ ಉತ್ತಮ ಸಂಸ್ಕಾರ ನೀಡಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ಶಾಸಕ ಕೋನರಡ್ಡಿ ಕಾರ್ಯಕ್ರಮಕ್ಕೆ ಇಡೀ ಸರ್ಕಾರದ ಶುಭ ಹಾರೈಕೆ
ಉಪಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ, ಶಾಸಕ ಎನ್. ಹೆಚ್. ಕೋನರಡ್ಡಿ ಅವರು ಬಡವರು ಮತ್ತು ದಲಿತರ ಪರವಾಗಿ ಹೋರಾಟ ಮಾಡುತ್ತಾ ಬಂದಿರುವ ಒಬ್ಬ ಒಳ್ಳೆಯ ನಾಯಕ. ನವಲಗುಂದದಲ್ಲಿ ಐತಿಹಾಸಿಕ ಕಾರ್ಯಕ್ರಮವನ್ನು ಮಾಡಿದ್ದಾರೆ. “ಹುಳಿ ಪೆಟ್ಟು ಬಿದ್ದ ಮೇಲೆ ಕಲ್ಲು ಶಿಲೆಯಾಗಲು ಸಾಧ್ಯ” ಎಂಬಂತೆ ನಿಮ್ಮೆಲ್ಲರ ಆಶೀರ್ವಾದ ಇಲ್ಲದೆ ಈ ಕಾರ್ಯಕ್ರಮ ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದರು. ಹೆಣ್ಣು ಮತ್ತು ಗಂಡು ಸೇರಿ ವಧು-ವರರಾದರೆ, ಅಕ್ಕಿ ಮತ್ತು ಅರಿಶಿನ ಸೇರಿ ಮಂತ್ರಾಕ್ಷತೆಯಾಯಿತು. ಹಾಗೆಯೇ, ಇಂದು ಎಲ್ಲರನ್ನು ಸೇರಿಸಿ ವಧು-ವರರಿಗೆ ಆಶೀರ್ವಾದ ಮಾಡುವ ಭಾಗ್ಯವನ್ನು ಈ ಸರ್ಕಾರ ನಿಮ್ಮ ತಾಲೂಕಿನ ಜನರಿಗೆ ತಂದುಕೊಟ್ಟಿದೆ. ಅದಕ್ಕೆ ಇಡೀ ಸರ್ಕಾರದ ಪರವಾಗಿ ಶುಭ ಮತ್ತು ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.
ಕೋನರಡ್ಡಿ ಅವರ ಪುತ್ರ-ಸೊಸೆಗೆ ಹಾಗೂ ಎಲ್ಲ ವಧು-ವರರಿಗೆ ಆಶೀರ್ವದಿಸಿದ ಡಿಸಿಎಂ, ಈ ಶುಭ ಗಳಿಗೆಯಲ್ಲಿ ಇಡೀ ರಾಜ್ಯಕ್ಕೆ ನಿಮ್ಮ ಕುಟುಂಬ ಮಾದರಿಯಾಗುವ ಶಕ್ತಿಯನ್ನು ದೇವರು ಕೊಡಲಿ ಎಂದು ಹಾರೈಸಿದರು. ಮದುವೆಯ ಖರ್ಚಿನ ಹಣದಿಂದ ಸ್ವಂತ ಉದ್ಯೋಗವನ್ನು ಮಾಡುವ ಮೂಲಕ ಹೊಸ ಜಗತ್ತಿನಲ್ಲಿ ಮತ್ತೊಬ್ಬರಿಗೆ ಉದ್ಯೋಗವನ್ನು ಕೊಡುವ ರೀತಿಯಲ್ಲಿ ಬೆಳೆಯಿರಿ. ಚೆನ್ನಾಗಿ ಸಂಸಾರವನ್ನು ತೂಗಿಸಿಕೊಂಡು ಹೋಗಿ, ಆದರ್ಶ ದಂಪತಿಗಳಾಗಿ ಬದುಕಬೇಕು ಎಂದು ಸಲಹೆ ನೀಡಿದರು. ಎಲ್ಲರಿಗೂ ಶುಭವಾಗಲಿ, ಮಂಗಳವಾಗಲಿ, ಬದುಕು ಬಂಗಾರವಾಗಿರಲಿ ಎಂದು ಉಪಮುಖ್ಯಮಂತ್ರಿಗಳು ಆಶಿಸಿದರು.
ಮಾದರಿ ಕಾರ್ಯಕ್ರಮ ಎಂದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ
ಕೇಂದ್ರ ಸಚಿವರು ಮತ್ತು ಧಾರವಾಡ ಲೋಕಸಭಾ ಸಂಸದರಾದ ಪ್ರಲ್ಹಾದ ಜೋಶಿ ಅವರು ಮಾತನಾಡಿ, ಶಾಸಕ ಎನ್. ಎಚ್. ಕೋನರಡ್ಡಿ ಅವರ ಪುತ್ರನ ವಿವಾಹದ ಆರತಕ್ಷತೆ ದಿನವೇ 75 ಜೋಡಿಗಳ ಸಾಮೂಹಿಕ ವಿವಾಹವನ್ನು ಆಯೋಜಿಸಿದ್ದು ಇತರರಿಗೆ ಮಾದರಿ ಕಾರ್ಯಕ್ರಮವಾಗಿದೆ ಎಂದು ಶ್ಲಾಘಿಸಿದರು. ಕೋನರಡ್ಡಿ ಅವರ ಮಗ ಮತ್ತು ಸೊಸೆ ಸೇರಿದಂತೆ ಎಲ್ಲ 75 ನವದಂಪತಿಗಳಿಗೆ ಅಭಿನಂದನೆ ಸಲ್ಲಿಸಿದ ಅವರು, ಎಲ್ಲ 76 ನವಜೋಡಿಗಳು ನೂರಾರು ವರ್ಷ ಸಂತೋಷದಿಂದ, ನೆಮ್ಮದಿಯಿಂದ ಮಕ್ಕಳೊಂದಿಗೆ, ಮೊಮ್ಮಕ್ಕಳೊಂದಿಗೆ, ಮರಿ ಮೊಮ್ಮಕ್ಕಳೊಂದಿಗೆ ಬಾಳಲಿ ಎಂದು ಹಾರೈಸಿದರು. 75 ಸಾಮೂಹಿಕ ವಿವಾಹಗಳನ್ನು ಮಾಡಿದ ಎನ್.ಎಚ್ ಕೋನರಡ್ಡಿ ಅವರಿಗೆ ವೈಯಕ್ತಿಕ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಎಲ್ಲರಿಗೂ ವಂದಿಸಿದ ಶಾಸಕ ಕೋನರಡ್ಡಿ
ಶಾಸಕರಾದ ಎನ್.ಹೆಚ್.ಕೋನರಡ್ಡಿ ಅವರು ಮಾತನಾಡಿ, ನವಲಗುಂದದಲ್ಲಿ ಒಂದು ದೊಡ್ಡ ಇತಿಹಾಸ ಸೃಷ್ಟಿಯಾಗಿದೆ. 75 ಜೋಡಿಗಳ ಸರ್ವ ಧರ್ಮದ ಮದುವೆಯನ್ನು ನಮ್ಮ ಕ್ಷೇತ್ರದ ಜನ ಮಾಡಿದ್ದಾರೆ. ತಮ್ಮ ಮಗನ ಆರತಕ್ಷತೆ ಕಾರ್ಯಕ್ರಮಕ್ಕಾಗಿ 10 ಎಕರೆ ಜಮೀನಿನಲ್ಲಿ ಊಟದ ವ್ಯವಸ್ಥೆ ಮತ್ತು 26 ಎಕರೆ ಜಮೀನಿನಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಿದ್ದರೂ, ಎಲ್ಲ ಕಡೆ ಜನಸ್ತೋಮದಿಂದ ಜಾಮ್ ಆಗಿದೆ. ಇದು ನಿಮ್ಮೆಲ್ಲರ ಆಶೀರ್ವಾದ ಎಂದು ಹೇಳಿದರು. ಮಾನ್ಯ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಹಾಗೂ ಸಚಿವ ಸಂಪುಟದ ಎಲ್ಲ ಸಹೋದರರು ಸೇರಿ ದೊಡ್ಡ ಆಶೀರ್ವಾದವನ್ನು ಮಾಡಿದ್ದಾರೆ ಎಂದು ಧನ್ಯವಾದ ತಿಳಿಸಿದರು.
ಸರ್ಕಾರದ ಯೋಜನೆಗಳನ್ನು ವಿವರಿಸಿದ ಅವರು, ಇಂದಿನ ನಮ್ಮ ಸರ್ಕಾರದಿಂದ ಉದ್ಘಾಟನೆಯಾಗುತ್ತಿರುವ ಹಾಸ್ಟೆಲ್ ಕಟ್ಟಡವು ಫೈವ್ ಸ್ಟಾರ್ ಹೋಟೆಲ್ ತರಹದ ಸೌಲಭ್ಯ ಹೊಂದಿದೆ. ಹಾಗೂ 5 ಗ್ಯಾರಂಟಿ ಸೌಲಭ್ಯಗಳನ್ನು ನಮ್ಮ ಸರ್ಕಾರ ಜನರಿಗೆ ಕೊಟ್ಟು ಜನಸೇವೆಯನ್ನು ಮಾಡುತ್ತಿದೆ. ಜಾತ್ಯಾತೀತವಾಗಿ ನವಲಗುಂದ ಜನ ತಮಗೆ ಸಹಕಾರವನ್ನು ನೀಡಿದ್ದೀರಿ, ನಿಮ್ಮೆಲ್ಲರಿಗೂ ಹೃದಯಪೂರ್ವಕ ವಂದನೆಗಳು ಎಂದು ಹೇಳಿ ಭಾಷಣ ಮುಗಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸಚಿವ ಸಂಪುಟದ ಸಚಿವರಾದ ಕೆ.ಜೆ.ಜಾರ್ಜ್, ಎಚ್.ಸಿ.ಮಹಾದೇವಪ್ಪ, ಕೃಷ್ಣ ಭೈರೆಗೌಡ, ರಾಮಲಿಂಗಾರಡ್ಡಿ, ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಶಾಸಕರಾದ ಬಸವರಾಜ ರಾಯರೆಡ್ಡಿ, ಪ್ರಸಾದ ಅಬ್ಬಯ್ಯ, ಬಸವರಾಜ ಶಿವಣ್ಣವರ, ಹೆಸ್ಕಾಂ ಅಧ್ಯಕ್ಷ ಸೈಯದ್ ಅಜ್ಜಂಪೀರ ಖಾದ್ರಿ, ವಿಪ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ ಸೇರಿದಂತೆ ವಿವಿಧ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು, ಹಾಗೂ ವಿವಿಧ ಜನಪ್ರತಿನಿಧಿಗಳು, ಗಣ್ಯರು ಭಾಗವಹಿಸಿ, ನವ ವಧು-ವರರಿಗೆ ಆಶೀರ್ವದಿಸಿ, ಶುಭಾಶಯ ಕೋರಿದರು. ನವಲಗುಂದ ತಾಲೂಕಿನ ನಾಗರಿಕರು ಸೇರಿದಂತೆ ಸುತ್ತಮುತ್ತಲಿನ ವಿವಿಧ ತಾಲೂಕಿನ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಸಾಕ್ಷೀಕರಿಸಿದರು.

