
ಧಾರವಾಡ, ಜೂ.24: ಬೆಳಗಾವಿ ವಿಭಾಗ ಮಟ್ಟದ ಉದ್ಯೋಗ ಮೇಳ ಆಯೋಜನೆ ಕುರಿತು ಶೀಘ್ರದಲ್ಲೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಕಾಂತಾ ನಾಯಕ ತಿಳಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿಯ ನೂತನ ಸಭಾಂಗಣದಲ್ಲಿ ನಡೆದ ಜಿಲ್ಲಾ ಕೌಶಲ್ಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ಅಗತ್ಯ ಮಾಹಿತಿಯನ್ನು ಒದಗಿಸಿದರೆ ಬೆಳಗಾವಿ ವಿಭಾಗ ಮಟ್ಟದ ಉದ್ಯೋಗ ಮೇಳವನ್ನು ಆಯೋಜಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಹುಬ್ಬಳ್ಳಿ-ಧಾರವಾಡ ನಗರಗಳು ಕೈಗಾರಿಕಾ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಪ್ರಮುಖ ಕೇಂದ್ರಗಳಾಗಿದ್ದು, ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಕೈಗಾರಿಕೆಗಳಲ್ಲಿ ಸ್ಥಳೀಯ ಅಭ್ಯರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು ಅಗತ್ಯವಾಗಿದೆ. ಉದ್ಯೋಗ ಸಿಗದೆ ಯುವಕರು ನಿರಾಶರಾಗದಂತೆ ಉದ್ಯೋಗಾಧಾರಿತ ಕೌಶಲ್ಯ ತರಬೇತಿಗಳನ್ನು ನೀಡಬೇಕು. ವಿಶೇಷವಾಗಿ ಯುವನಿಧಿ ಯೋಜನೆಯ ಫಲಾನುಭವಿಗಳಿಗೆ ಕೈಗಾರಿಕೆಗಳ ಅಗತ್ಯಗಳಿಗೆ ಅನುಗುಣವಾಗಿ ಕೌಶಲ್ಯಾಭಿವೃದ್ಧಿ ತರಬೇತಿ ಒದಗಿಸಬೇಕು ಎಂದು ಅವರು ಸೂಚಿಸಿದರು.
ಮುಂದಿನ ದಿನಗಳಲ್ಲಿ ಕೈಗಾರಿಕೋದ್ಯಮಿಗಳ ಸಭೆ ನಡೆಸಿ, ಕೈಗಾರಿಕೆಗಳಿಗೆ ಬೇಕಾಗಿರುವ ಕೌಶಲ್ಯಗಳ ಕುರಿತು ಚರ್ಚಿಸಿ ಅದರ ಆಧಾರದ ಮೇಲೆ ಅಭ್ಯರ್ಥಿಗಳಿಗೆ ತರಬೇತಿ ನೀಡುವ ವ್ಯವಸ್ಥೆ ರೂಪಿಸಲಾಗುವುದು. ಹೊಸದಾಗಿ ಉದ್ಯೋಗಕ್ಕೆ ಸೇರುವ ಅಭ್ಯರ್ಥಿಗಳಿಗೆ ಕೆಲಸದ ಸ್ವರೂಪಕ್ಕೆ ತಕ್ಕ ವೇತನ ದೊರೆಯುವಂತೆ ನೋಡಿಕೊಳ್ಳಬೇಕು. ಜೊತೆಗೆ ಅಲ್ಪಾವಧಿ ಹಾಗೂ ದೀರ್ಘಾವಧಿಯ ಉದ್ಯೋಗಾವಕಾಶಗಳ ಕುರಿತು ಸಮಗ್ರ ಮಾಹಿತಿ ನೀಡಬೇಕು ಎಂದು ಹೇಳಿದರು.

ಐಟಿಐ ಹಾಗೂ ಪದವೀಧರ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯುವಂತೆ ಕ್ರಮ ಕೈಗೊಳ್ಳಬೇಕು. ಫ್ಯೂಚರ್ ಸ್ಕಿಲ್ ಸೇರಿದಂತೆ ವಿವಿಧ ಕೌಶಲ್ಯಾಭಿವೃದ್ಧಿ ಯೋಜನೆಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಮೂಲಕ ಜಾಗೃತಿ ಮೂಡಿಸಬೇಕು. ಗೃಹಲಕ್ಷ್ಮಿ ಯೋಜನೆಯ ಮಾದರಿಯಲ್ಲಿ ಕೌಶಲ್ಯ ತರಬೇತಿ ಕಾರ್ಯಕ್ರಮಗಳ ಸಾಧನೆ ಮತ್ತು ಪ್ರಗತಿ ವರದಿಗಳನ್ನು ಸಿದ್ಧಪಡಿಸಬೇಕು. ಪಾರಂಪರಿಕ ಹಾಗೂ ಪ್ರಾದೇಶಿಕ ಕಲೆಗಳು ನಶಿಸದಂತೆ ಸಂರಕ್ಷಿಸುವ ಜೊತೆಗೆ “ನನ್ನ ವೃತ್ತಿ ನನ್ನ ಆಯ್ಕೆ” ಮತ್ತು “ಕಲಿಕೆಯೊಂದಿಗೆ ಕೌಶಲ್ಯ” ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ನಲ್ ಜಲ್ ಮಿತ್ರ ಯೋಜನೆಯಡಿ ತರಬೇತಿ ಪಡೆದ ಯುವಕರು ಸ್ವಾವಲಂಬಿ ಜೀವನ ನಡೆಸುವಂತಾಗಬೇಕು. ತರಬೇತಿಯ ಫಲಿತಾಂಶ ಉದ್ಯೋಗ ಹಾಗೂ ಸ್ವಉದ್ಯೋಗದ ರೂಪದಲ್ಲಿ ಗೋಚರಿಸಬೇಕು ಎಂದು ಕಾಂತಾ ನಾಯಕ ಹೇಳಿದರು.
ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮಾತನಾಡಿ, ಉದ್ಯೋಗಾಧಾರಿತ ತರಬೇತಿಗಳ ಜೊತೆಗೆ ತರಬೇತಿ ಪಡೆಯುವವರಿಗೆ ಗೌರವ ಸಂಭಾವನೆ ನೀಡುವ ಅಗತ್ಯವಿದೆ ಎಂದರು. ಧಾರವಾಡ ಜಿಲ್ಲೆಯಲ್ಲಿ ಅನೇಕ ಯುವಕರು ಸರ್ಕಾರಿ ಉದ್ಯೋಗಗಳಿಗೆ ಸಿದ್ಧತೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅವರಿಗೆ ಪೂರಕವಾದ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ಹೇಳಿದರು. ಅಲ್ಲದೆ, ನವಲಗುಂದದ ಅಭಿಯಾನ ಫೌಂಡೇಶನ್ ವತಿಯಿಂದ ಯೋಗ ಮ್ಯಾಟ್ ತಯಾರಿಕೆ ಕುರಿತ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.
ಸಭೆಯ ಸಂದರ್ಭದಲ್ಲಿ ನಲ್ ಜಲ್ ಮಿತ್ರ ಯೋಜನೆಯಡಿ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ, ಟೂಲ್ ಕಿಟ್ ಹಾಗೂ ಸಮವಸ್ತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ದ್ಯಾಬೇರಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಕೈಗಾರಿಕೋದ್ಯಮಿಗಳು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.

