ನವಲಗುಂದ ಶಾಸಕರ ವಿರುದ್ಧ ಲೋಕಾಯುಕ್ತ, ಹೈಕೋರ್ಟ್ ಮೆಟ್ಟಿಲೇರುವ ಎಚ್ಚರಿಕೆ

Spread the love

ನವಲಗುಂದ: ಶಾಸಕರು ತಮ್ಮ ರಾಜಕೀಯ ಅಧಿಕಾರವನ್ನು ಬಳಸಿ ಕಾನೂನುಬಾಹಿರವಾಗಿ ಪೊಲೀಸ್ ಎಸ್ಕಾರ್ಟ್ ವಾಹನವನ್ನು ದುರ್ಬಳಕೆ ಮಾಡಿಕೊಂಡಿದ್ದು, ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ಅವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ ಆಗ್ರಹಿಸಿದರು.

ಬುಧವಾರ ತಹಶೀಲ್ದಾರ್ ಸುಧೀರ ಸಾಹುಕಾರ ಅವರ ಮೂಲಕ ಗೃಹ ಸಚಿವರು ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ದೂರು ಸಲ್ಲಿಸಿ ಮಾತನಾಡಿದ ಅವರು, ಜನಪ್ರತಿನಿಧಿಯೊಬ್ಬರು ಸಾರ್ವಜನಿಕ ಹಣದಲ್ಲಿ ನಿರ್ವಹಣೆಯಾಗುವ ಪೊಲೀಸ್ ವ್ಯವಸ್ಥೆಯನ್ನು ಸ್ವಂತ ಹಿತಾಸಕ್ತಿಗೆ ಬಳಸಿಕೊಂಡಿರುವುದು ಖಂಡನೀಯ ಎಂದು ಆರೋಪಿಸಿದರು. ನಿಯಮಬಾಹಿರವಾಗಿ ಬಳಕೆಯಾದ ಪೊಲೀಸ್ ವಾಹನದ ಡೀಸೆಲ್ ವೆಚ್ಚ, ಭದ್ರತಾ ಸಿಬ್ಬಂದಿಯ ವೇತನ ಹಾಗೂ ವಾಹನದ ದುರಸ್ತಿ ವೆಚ್ಚವನ್ನು ಹಾಲಿ ಶಾಸಕ ಎನ್.ಎಚ್. ಕೋನರೆಡ್ಡಿ ಅವರಿಂದಲೇ ವಸೂಲಿ ಮಾಡಿ ಸರ್ಕಾರದ ಖಜಾನೆಗೆ ಜಮಾ ಮಾಡಬೇಕು. ಇಲ್ಲದಿದ್ದರೆ ಕರ್ನಾಟಕ ಹೈಕೋರ್ಟ್ ಹಾಗೂ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಿಸಿ ಕಾನೂನು ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.

ರೈತ ಮುಖಂಡ ಮಲ್ಲಿಕಾರ್ಜುನಸ್ವಾಮಿ ಮಠಪತಿ ಮಾತನಾಡಿ, ಶಾಸಕರು ತಮ್ಮ ಖಾಸಗಿ ಕಾರ್ಯಕ್ರಮಗಳಿಗೆ ಪೊಲೀಸ್ ವಾಹನ ಮತ್ತು ಸಿಬ್ಬಂದಿಯನ್ನು ಬಳಸಿಕೊಳ್ಳುವ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ತಕ್ಷಣವೇ ಉನ್ನತ ಮಟ್ಟದ ತನಿಖೆ ನಡೆಸಿ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಅಲ್ಲದೆ, ಇಲಾಖೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳಿಗೆ ಸರ್ಕಾರ ಕಡ್ಡಾಯ ನಿರ್ದೇಶನ ನೀಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಹಮ್ಮದಲಿ ಮಿರ್ಜಿ ಹಾಗೂ ಬಾಪುಸಾಬ ತಾಸೇದ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *