
ನವಲಗುಂದ: ರಕ್ತದಾನ ಮಹಾದಾನವಾಗಿದ್ದು, ರಕ್ತದಾನ ಮಾಡುವ ಪ್ರತಿಯೊಬ್ಬರೂ ಹಲವರ ಜೀವ ಉಳಿಸಲು ಕಾರಣರಾಗುತ್ತಾರೆ. ಇಂತಹ ಸೇವೆ ಅತ್ಯಂತ ಶ್ರೇಷ್ಠವಾದದ್ದು ಎಂದು ಪಂಚಗೃಹ ಹಿರೇಮಠದ ಇಮ್ಮಡಿ ಸಿದ್ದೇಶ್ವರ ಶ್ರೀಗಳು ಹೇಳಿದರು.
ಶುಕ್ರವಾರ ಪಟ್ಟಣದ ಶ್ರೀ ಹುರಕಡ್ಲಿ ಅಜ್ಜನವರ ಕಲ್ಯಾಣ ಕೇಂದ್ರದಲ್ಲಿ ದೇವರಾಜ ದಾಡಿಬಾವಿ ಅವರ ಹುಟ್ಟುಹಬ್ಬದ ಅಂಗವಾಗಿ ಗೆಳೆಯರ ಬಳಗ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರ ಹಾಗೂ ಜನ್ಮದಿನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಹುಟ್ಟುಹಬ್ಬವನ್ನು ದುಂದುವೆಚ್ಚದಿಂದ ಆಚರಿಸುವ ಬದಲು ಸಮಾಜಕ್ಕೆ ಒಳಿತಾಗುವ ಸತ್ಕಾರ್ಯಗಳ ಮೂಲಕ ಆಚರಿಸುವುದು ಶ್ಲಾಘನೀಯ. ದೇವರಾಜ ದಾಡಿಬಾವಿ ಹಾಗೂ ಅವರ ಗೆಳೆಯರ ಬಳಗ ಕೈಗೊಂಡಿರುವ ಈ ಸಮಾಜಮುಖಿ ಕಾರ್ಯ ಮಾದರಿಯಾಗಿದೆ. ದಾಡಿಬಾವಿ ಅವರು ಸದಾ ಸಮಾಜಮುಖಿ ಚಿಂತನೆ, ಸ್ನೇಹ ಮತ್ತು ಸೇವಾ ಮನೋಭಾವ ಹೊಂದಿರುವ ಯುವ ನಾಯಕರಾಗಿದ್ದು, ಅವರ ಎಲ್ಲ ಇಷ್ಟಾರ್ಥಗಳು ಈಡೇರಲಿ ಎಂದು ಹಾರೈಸಿದರು.
ನಂತರ ಮಣಕವಾಡ ಮಠದ ಮೃತ್ಯುಂಜಯ ಶ್ರೀಗಳು ಮಾತನಾಡಿ, ದೇವರಾಜ ದಾಡಿಬಾವಿ ಅವರು ಅಣ್ಣಿಗೇರಿಯಲ್ಲಿ ಪಿಎಲ್ಡಿ ಬ್ಯಾಂಕ್ ಸ್ಥಾಪಿಸುವ ಮೂಲಕ ಜನಸಾಮಾನ್ಯರಿಗೆ ಅನುಕೂಲ ಕಲ್ಪಿಸಿದ್ದಾರೆ. ಸಮಾಜಮುಖಿ ಕಾರ್ಯಗಳ ಮೂಲಕ ಜನರ ಮೆಚ್ಚುಗೆ ಗಳಿಸಿರುವುದು ಶ್ಲಾಘನೀಯ. ಒಬ್ಬ ವ್ಯಕ್ತಿ ಧನ ಸಂಪಾದಿಸಬಹುದು, ಆದರೆ ಜನರ ಪ್ರೀತಿ ಮತ್ತು ವಿಶ್ವಾಸ ಗಳಿಸುವುದು ಕಷ್ಟ. ಇಂದು ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿರುವುದು ಅವರ ಮೇಲಿನ ಪ್ರೀತಿ, ಗೌರವ ಮತ್ತು ಅಭಿಮಾನದ ಪ್ರತೀಕವಾಗಿದೆ. ಹೊಸ ಯುವಶಕ್ತಿ ಇನ್ನಷ್ಟು ಸಂಘಟಿತವಾಗಿ ಬೆಳೆಯಲಿ ಹಾಗೂ ದೇವರಾಜ ದಾಡಿಬಾವಿ ಅವರು ಉತ್ತಮ ಯುವ ನಾಯಕರಾಗಿ ಮುಂದುವರಿಯಲಿ ಎಂದು ಆಶೀರ್ವದಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಷಣ್ಮುಖ ಗುರಿಕಾರ, ಯುವಕರ ಹೊಸ ಭರವಸೆಯಾಗಿ ಹೊರಹೊಮ್ಮಿರುವ ದೇವರಾಜ ದಾಡಿಬಾವಿ ಅವರ ಸೇವಾ ಮನೋಭಾವವನ್ನು ಕೊಂಡಾಡಿದರು. ಅವರ ಜನ್ಮದಿನದ ಅಂಗವಾಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ, ವನಮಹೋತ್ಸವ ಸೇರಿದಂತೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಲಿಂಗರಾಜ ಸರದೇಸಾಯಿ, ಸಿದ್ದಲಿಂಗಪ್ಪ ಮದ್ದೂರು, ಪಿ.ಸಿ. ಲೋಕಾಪುರಮಠ, ಪೂರ್ಣಿಮಾ ಜೋಶಿ, ಪ್ರೇಮಾ ನಾಯ್ಕರ, ಸವಿತಾ ಮೇಗುಂಡಿ, ಶಕುಂತಲಾ ಕರ್ಜಗಿ ಸೇರಿದಂತೆ ದಾಡಿಬಾವಿ ಗೆಳೆಯರ ಬಳಗದ ಸದಸ್ಯರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಉಪಸ್ಥಿತರಿದ್ದು, ದೇವರಾಜ ದಾಡಿಬಾವಿ ಅವರಿಗೆ ಜನ್ಮದಿನದ ಶುಭಾಶಯ ಕೋರಿದರು.
ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ವಿತರಣೆ
ದೇವರಾಜ ದಾಡಿಬಾವಿ ಅವರ ಜನ್ಮದಿನದ ಅಂಗವಾಗಿ ನವಲಗುಂದ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿದ್ದ ರೋಗಿಗಳಿಗೆ ಹಣ್ಣುಹಂಪಲು ವಿತರಿಸಿ ಆರೋಗ್ಯ ವಿಚಾರಿಸಿದರು.
ರಕ್ತದಾನಿಗಳಿಗೆ ಪ್ರಮಾಣಪತ್ರ ನೀಡಿ ಗೌರವ
ರಕ್ತದಾನ ಶಿಬಿರದಲ್ಲಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದ ದಾನಿಗಳಿಗೆ ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಸಮಾಜಮುಖಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ರಕ್ತದಾನಿಗಳ ಸೇವೆಯನ್ನು ಗಣ್ಯರು ಶ್ಲಾಘಿಸಿದರು.

