
ಧಾರವಾಡ: ಜಿಲ್ಲೆಯ ನವಲಗುಂದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಮನೆ ಕಳ್ಳತನ ಪ್ರಕರಣವನ್ನು ಭೇದಿಸಿರುವ ಪೊಲೀಸರು ಮಹಿಳಾ ಆರೋಪಿತೆಯನ್ನು ಬಂಧಿಸಿ, ಕಳುವಾಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ನವಲಗುಂದ ಪೊಲೀಸ್ ಠಾಣೆಯ ಗುನ್ನಾ ಸಂಖ್ಯೆ 94/2026ರಡಿ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್) ಕಲಂ 305ರ ಅನ್ವಯ ಪ್ರಕರಣ ದಾಖಲಾಗಿತ್ತು. ಬಳ್ಳೂರ ಗ್ರಾಮದ ಶೈಲಾ ಕೋಂ ಸಿದ್ದಯ್ಯ ಹಿರೇಮಠ ಅವರು ತಮ್ಮ ಮನೆಯಲ್ಲಿ ಕಳ್ಳತನ ನಡೆದಿರುವ ಕುರಿತು ಜೂನ್ 12ರಂದು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.
ಪ್ರಕರಣ ದಾಖಲಾದ ತಕ್ಷಣ ನವಲಗುಂದ ವೃತ್ತದ ಸಿಪಿಐ ರವಿಕುಮಾರ ಕಪ್ಪತನವರ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಯಿತು. ನವಲಗುಂದ ಪೊಲೀಸ್ ಠಾಣೆಯ ಪಿಎಸ್ಐ ಜನಾರ್ಧನ ಬಿ. ಹಾಗೂ ಸಿಬ್ಬಂದಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಪಿರ್ಯಾದಿದಾರರ ಮನೆಯ ಸುತ್ತಮುತ್ತಲಿನ ನಿವಾಸಿಗಳಿಂದ ಮಾಹಿತಿ ಸಂಗ್ರಹಿಸಿದರು. ತನಿಖೆ ವೇಳೆ ದೊರೆತ ಸುಳಿವುಗಳ ಆಧಾರದ ಮೇಲೆ ಸಂಶಯಾಸ್ಪದವಾಗಿ ವರ್ತಿಸುತ್ತಿದ್ದ ಮಹಿಳೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು.
ವಿಚಾರಣೆ ವೇಳೆ ಆರೋಪಿತೆ ಕಳ್ಳತನ ಎಸಗಿರುವುದನ್ನು ಒಪ್ಪಿಕೊಂಡಿದ್ದು, ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿತೆಯಿಂದ 42.79 ಗ್ರಾಂ ತೂಕದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅವುಗಳ ಅಂದಾಜು ಮೌಲ್ಯ ₹4,70,690 ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಅಧೀಕ್ಷಕಿ ಗುಂಜನ್ ಆರ್ಯ, ಸಿಇಎನ್ ಪೊಲೀಸ್ ಠಾಣೆಯ ಡಿಎಸ್ಪಿ ಶಿವಾನಂದ ಕಟಗಿ ಹಾಗೂ ಪೊಲೀಸ್ ಉಪಾಧೀಕ್ಷಕ ವಿನೋದ ಮುಕ್ತೇದಾರ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನವಲಗುಂದ ವೃತ್ತದ ಸಿಪಿಐ ರವಿಕುಮಾರ ಕಪ್ಪತನವರ ನೇತೃತ್ವದ ತಂಡ ಮಹತ್ವದ ಪಾತ್ರವಹಿಸಿತು. ಪಿಎಸ್ಐ ಜನಾರ್ಧನ ಬಿ. ಸೇರಿದಂತೆ ಜಗದೀಶ ಬರಿಗಾಲ, ಸಿ.ಜಿ. ನಾಗೇಶನವರ, ಗಂಗಾಧರ ಸಣಮೇಟ, ಮುತ್ತು ಭಜಂತ್ರಿ, ಸದಾಶಿವ ಮುಳ್ಳೂರ, ಸಂತೋಷ ಸಿಂಗಣ್ಣವರ, ಸಿದ್ದಾರಾಮ ಮೇಡೆದಾರ, ಫಾರೂಖ ನದಾಫ, ಜಗದೀಶ ಅಮಾತಿ, ರೂಪಾ ನಾಂವಿ, ಪ್ರತಿಭಾ ಮಾದರ ಹಾಗೂ ಸಲೀಂ ಮತ್ತೇಖಾನ್ ಸೇರಿದಂತೆ ಸಿಬ್ಬಂದಿ ಆರೋಪಿತೆಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಕಳುವಾಗಿದ್ದ ಸ್ವತ್ತನ್ನು ಪತ್ತೆಹಚ್ಚಿ ವಶಪಡಿಸಿಕೊಂಡು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದ ನವಲಗುಂದ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯಕ್ಷಮತೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಶಂಸಿಸಿದ್ದಾರೆ.

