ಮುಂಗಾರು ಹಂಗಾಮಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ: ರೈತರಿಗೆ ಸರ್ಕಾರದ ಭದ್ರತಾ ಕವಚ

Spread the love

ಮುಂಗಾರು ಹಂಗಾಮಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ: ರೈತರಿಗೆ ಸರ್ಕಾರದ ಭದ್ರತಾ ಕವಚ

ಧಾರವಾಡ: 2026-27ನೇ ಸಾಲಿನ ಮುಂಗಾರು ಹಂಗಾಮಿಗೆ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯನ್ನು ರಾಜ್ಯ ಸರ್ಕಾರ ಘೋಷಿಸಿದ್ದು, ಧಾರವಾಡ ಜಿಲ್ಲೆಯ ರೈತರು ಇದರ ಸದುಪಯೋಗ ಪಡೆದುಕೊಳ್ಳುವಂತೆ ತೋಟಗಾರಿಕೆ ಇಲಾಖೆ ಮನವಿ ಮಾಡಿದೆ.

ಈ ಯೋಜನೆಯಡಿ ಹಸಿಮೆಣಸಿನಕಾಯಿ ಹಾಗೂ ಮಾವು ಬೆಳೆಗಳನ್ನು ಒಳಪಡಿಸಲಾಗಿದೆ. ಹಸಿಮೆಣಸಿನಕಾಯಿ ಬೆಳೆಗೆ ಧಾರವಾಡ, ಅಮ್ಮಿನಭಾವಿ, ಗರಗ, ದುಮ್ಮವಾಡ ಹಾಗೂ ಛಬ್ಬಿ ಹೋಬಳಿಗಳ ಆಯ್ದ ಗ್ರಾಮ ಪಂಚಾಯಿತಿಗಳನ್ನು ವಿಮೆ ಯೋಜನೆಯ ವ್ಯಾಪ್ತಿಗೆ ತರಲಾಗಿದೆ. ಅದೇ ರೀತಿ ಮಾವು ಬೆಳೆಗೆ ಅಮ್ಮಿನಭಾವಿ, ಧಾರವಾಡ, ಗರಗ, ಅಳ್ನಾವರ, ಹುಬ್ಬಳ್ಳಿ, ಛಬ್ಬಿ, ಕಲಘಟಗಿ, ತಡಸಹೊನ್ನಳ್ಳಿ, ದುಮ್ಮವಾಡ, ಕುಂದಗೋಳ ಹಾಗೂ ಸಂಶಿ ಹೋಬಳಿಗಳ ಆಯ್ದ ಗ್ರಾಮ ಪಂಚಾಯಿತಿಗಳನ್ನು ಒಳಪಡಿಸಲಾಗಿದೆ.

ಧಾರವಾಡ ಜಿಲ್ಲೆಗೆ ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿ (AIC) ಆಯ್ಕೆಯಾಗಿದ್ದು, ವಿಮೆ ಕಂತಿನ ಮೊತ್ತವಾಗಿ ಹಸಿಮೆಣಸಿನಕಾಯಿ ಬೆಳೆಗೆ ಪ್ರತಿ ಹೆಕ್ಟೇರ್‌ಗೆ ₹6,745 ಹಾಗೂ ಮಾವು ಬೆಳೆಗೆ ಪ್ರತಿ ಹೆಕ್ಟೇರ್‌ಗೆ ₹4,000 ಪಾವತಿಸಬೇಕಾಗಿದೆ. ರೈತರು ತಮ್ಮ ವಿಮಾ ಕಂತನ್ನು ಆಗಸ್ಟ್ 31, 2026ರೊಳಗೆ ಪಾವತಿಸಿ ಯೋಜನೆಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯೋಜನೆಯಡಿ ನೋಂದಾಯಿಸಿಕೊಳ್ಳಲು ರೈತರು ಕಡ್ಡಾಯವಾಗಿ ಫ್ರೂಟ್ಸ್ (FRUITS) ಐಡಿ ಹೊಂದಿರಬೇಕು. ಹತ್ತಿರದ ಬ್ಯಾಂಕ್‌ಗಳು ಅಥವಾ ಸಾಮಾನ್ಯ ಸೇವಾ ಕೇಂದ್ರಗಳ (ಸಿಎಸ್‌ಸಿ) ಮೂಲಕ ರೈತರು ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆಯಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಧಾರವಾಡ, ಹುಬ್ಬಳ್ಳಿ, ಕಲಘಟಗಿ ಹಾಗೂ ಕುಂದಗೋಳ ತಾಲೂಕುಗಳ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರೈತ ಸಂಪರ್ಕ ಕೇಂದ್ರಗಳ ಸಹಾಯಕ ತೋಟಗಾರಿಕೆ ಅಧಿಕಾರಿಗಳು, ಸ್ಥಳೀಯ ವಾಣಿಜ್ಯ ಹಾಗೂ ಗ್ರಾಮೀಣ ಸಹಕಾರಿ ಬ್ಯಾಂಕ್‌ಗಳ ಅಧಿಕಾರಿಗಳನ್ನು ಸಂಪರ್ಕಿಸಬಹುದು. ಅಲ್ಲದೆ ಅಗ್ರಿಕಲ್ಚರ್ ಇನ್ಸುರೆನ್ಸ್ ಕಂಪನಿಯ ಜಿಲ್ಲಾ ಸಂಯೋಜಕಿ ಅನುಷಾ ಎ.ಆರ್. (ಮೊ. 7411292116) ಅಥವಾ ಸಹಾಯವಾಣಿ ಸಂಖ್ಯೆ 1800 425 0505 ಅನ್ನು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *