
ಧಾರವಾಡ, ಜೂ.24: ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ತಯಾರಿಸುತ್ತಿದ್ದ ಸ್ಥಳದ ಮೇಲೆ ಅಬಕಾರಿ ಇಲಾಖೆ ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿದೆ.
ಬೆಳಗಾವಿ ಅಬಕಾರಿ ಅಪರ ಆಯುಕ್ತರು, ಅಬಕಾರಿ ಜಂಟಿ ಆಯುಕ್ತರು, ಧಾರವಾಡ ಅಬಕಾರಿ ಉಪ ಆಯುಕ್ತರು ಹಾಗೂ ಅಬಕಾರಿ ಅಧೀಕ್ಷಕರ ಮಾರ್ಗದರ್ಶನದಲ್ಲಿ ಜೂನ್ 22ರಂದು ನವಲಗುಂದ ವಲಯ ವ್ಯಾಪ್ತಿಯ ಅಣ್ಣಿಗೇರಿ ಶರಹದ್ದಿನ ಕಣಗಲ್ಲ ಹಳ್ಳದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು. ಅಬಕಾರಿ ನಿರೀಕ್ಷಕ ರಾಮು ಆರೆನ್ನವರ, ಉಪ ನಿರೀಕ್ಷಕಿ ಅನುರಾಧ ಓಲೇಕಾರ ಹಾಗೂ ಸಿಬ್ಬಂದಿ ತಂಡವು ಪಂಚರ ಸಮ್ಮುಖದಲ್ಲಿ ದಾಳಿ ನಡೆಸಿ ಅಕ್ರಮವಾಗಿ ಕಳ್ಳಭಟ್ಟಿ ಸಾರಾಯಿ ತಯಾರಿಸುತ್ತಿದ್ದ ಆರೋಪಿಗಳನ್ನು ವಶಕ್ಕೆ ಪಡೆದಿದೆ.
ಬಂಧಿತ ಆರೋಪಿಗಳನ್ನು ಶೇಖರ ವಿರೂಪಾಕ್ಷಿ ಹರಣಶಿಕಾರಿ (26) ಹಾಗೂ ಸಾಗರ ವಿರೂಪಾಕ್ಷಪ್ಪ ಹರಣಶಿಕಾರಿ (31) ಎಂದು ಗುರುತಿಸಲಾಗಿದೆ. ಇಬ್ಬರೂ ಅಣ್ಣಿಗೇರಿ ಪಟ್ಟಣದ ಹರಣಶಿಕಾರಿ ಕಾಲೋನಿಯ ನಿವಾಸಿಗಳಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದಾರೆ. ಈ ಸಂಬಂಧ ಕರ್ನಾಟಕ ಅಬಕಾರಿ ಕಾಯ್ದೆ-1965ರಡಿ ಗುನ್ನೆ ಸಂಖ್ಯೆ 99/2025-26 ದಾಖಲಿಸಲಾಗಿದೆ. ಪ್ರಕರಣದಲ್ಲಿ ಬಳಸಲಾಗಿದ್ದ ದ್ವಿಚಕ್ರ ವಾಹನದ ಮಾಲೀಕರನ್ನು ಪತ್ತೆಹಚ್ಚಿ ಬಂಧಿಸಲು ಕ್ರಮ ಕೈಗೊಳ್ಳಲಾಗಿದೆ.
ದಾಳಿಯ ವೇಳೆ ಸುಮಾರು ಮೂರು ಲೀಟರ್ ಕಳ್ಳಭಟ್ಟಿ ಸಾರಾಯಿ, 1,700 ಲೀಟರ್ ಬೆಲ್ಲದ ರಾಸಾಯನ, 30 ಕೆಜಿ ಬೆಲ್ಲ, ಕಳ್ಳಭಟ್ಟಿ ತಯಾರಿಕೆಗೆ ಬಳಸುತ್ತಿದ್ದ ಪ್ಲಾಸ್ಟಿಕ್ ಬ್ಯಾರಲ್ಗಳು, ಹೀರೋ ಹೆಚ್ಎಫ್ ಡಿಲಕ್ಸ್ ದ್ವಿಚಕ್ರ ವಾಹನ ಹಾಗೂ ಎರಡು ಸ್ಮಾರ್ಟ್ ಮೊಬೈಲ್ ಫೋನ್ಗಳನ್ನು ಜಪ್ತಿ ಮಾಡಲಾಗಿದೆ.
ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅಬಕಾರಿ ನಿರೀಕ್ಷಕ ರಾಮು ಆರೆನ್ನವರ ಅವರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ನವಲಗುಂದ ವಲಯದ ಅಬಕಾರಿ ನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

