
ಶಿಗ್ಗಾಂವ: ಜಗತ್ತಿನಲ್ಲಿ ಶ್ರೇಷ್ಠ ಜೀವಗಳು ಎಂದರೆ ತಂದೆ, ತಾಯಿ ಹಾಗೂ ಗುರುಗಳು. ಇವರು ನಿಸ್ವಾರ್ಥಿಗಳಾಗಿದ್ದು, ಅವರನ್ನು ಗೌರವಿಸುವುದರ ಜೊತೆಗೆ ಅವರ ಒಳ್ಳೆಯ ಮಾತುಗಳನ್ನು ಆಲಿಸಿ ಜೀವನದಲ್ಲಿ ಪಾಲಿಸಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ. ಅಂಬಿಗೇರ ಹೇಳಿದರು.
ಅವರು ಬುಧವಾರ ಪಟ್ಟಣದ ಆಶ್ರಯ ಪ್ಲಾಟ್ ಸಮೀಪದ ಸರ್ಕಾರಿ ಕನ್ನಡ ಪ್ರೌಢಶಾಲೆಯಲ್ಲಿ ಮಾತ್ರೋಶ್ರೀ ಅನಸೂಯಾ ಫಕ್ಕೀರಪ್ಪ ಯಲಿಗಾರ ಸೇವಾ ಸಂಸ್ಥೆಯ ವತಿಯಿಂದ ದಿ. ಫಕ್ಕೀರಪ್ಪ ಯಲಿಗಾರ ಅವರ 5ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಹಮ್ಮಿಕೊಂಡಿದ್ದ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿ ಸಂಚಿಕೆ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ತಂದೆ-ತಾಯಿಯನ್ನು ಸ್ಮರಿಸುವ ಕಾರ್ಯ ಶ್ರೇಷ್ಠವಾದದ್ದು. ಇಂತಹ ಕಾರ್ಯವನ್ನು ಪತ್ರಕರ್ತ ಸುರೇಶ ಯಲಿಗಾರ ಹಾಗೂ ಅವರ ಕುಟುಂಬಸ್ಥರು ಮಾಡುತ್ತಿರುವುದು ಶ್ಲಾಘನೀಯ. ತಂದೆ-ತಾಯಿ ಹಾಗೂ ಗುರುಗಳನ್ನು ಗೌರವಿಸುವವರು ಜೀವನದಲ್ಲಿ ಎಂದಿಗೂ ಸೋಲುವುದಿಲ್ಲ. ಕಷ್ಟಗಳನ್ನು ವರವಾಗಿ ಮಾರ್ಪಡಿಸಿಕೊಂಡಾಗ ಮಾತ್ರ ಸಾಧನೆ ಸಾಧ್ಯ. ಶಿಕ್ಷಣದಿಂದ ಮಾತ್ರ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯವಾಗಿದ್ದು, ಜೀವನ ಬದಲಾವಣೆಗೆ ಶಿಕ್ಷಣವೇ ಅಸ್ತ್ರವಾಗಿದೆ ಎಂದು ಹೇಳಿದರು.
ಕಜಾ ವಿವಿ ಪ್ರಾಧ್ಯಾಪಕ ಶರೀಫ್ ಮಾಕಪ್ಪನವರ ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಕರ್ತ ಸುರೇಶ ಯಲಿಗಾರ ಅವರು ತಂದೆ-ತಾಯಿಯ ಹೆಸರಿನಲ್ಲಿ ಸಂಸ್ಥೆ ಸ್ಥಾಪಿಸಿ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿದ್ದಾರೆ. ತಂದೆ-ತಾಯಿಯನ್ನು ಸ್ಮರಿಸುವುದು ಪುಣ್ಯದ ಕಾರ್ಯ. ವಿದ್ಯಾರ್ಥಿಗಳು ತಂದೆ-ತಾಯಿಯ ಕನಸುಗಳನ್ನು ನನಸು ಮಾಡುವ ಹಾದಿಯಲ್ಲಿ ಸಾಗಬೇಕು. ಇಂದು ಕೆಲವರು ತಂದೆ-ತಾಯಿಯನ್ನು ವೃದ್ಧಾಶ್ರಮಕ್ಕೆ ಬಿಡುವ ಪರಿಸ್ಥಿತಿ ನಿರ್ಮಾಣವಾಗಿರುವ ಸಂದರ್ಭದಲ್ಲಿ ಯಲಿಗಾರ ಅವರು ಅವರನ್ನು ಸ್ಮರಿಸುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನಾಗಪ್ಪ ಬೆಂತೂರ ಮಾತನಾಡಿ, ಪತ್ರಕರ್ತ ಸುರೇಶ ಯಲಿಗಾರ ಅವರು ತಮ್ಮ ಸಂಸ್ಥೆಯ ಮೂಲಕ ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ನಿರಂತರವಾಗಿ ನಡೆಸುತ್ತಿದ್ದು, ಅವರ ಕಾರ್ಯ ಮಾದರಿಯಾಗಿದೆ. ಇಂದಿನ ವಿದ್ಯಾರ್ಥಿಗಳಿಗೆ ಅನೇಕ ಅವಕಾಶಗಳಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಮುಂದೆ ವಿದ್ಯಾರ್ಥಿಗಳೂ ಇಂತಹ ಸಮಾಜಮುಖಿ ಕಾರ್ಯಗಳನ್ನು ಮಾಡುವಂತಾಗಲಿ ಎಂದು ಹಾರೈಸಿದರು.
ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಶಿವಾನಂದ ಹೊಸಮನಿ ಮಾತನಾಡಿ, ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುರೇಶ ಯಲಿಗಾರ ಅವರು ಉತ್ತಮ ಕಾರ್ಯ ಮಾಡಿದ್ದಾರೆ. ಅವರ ಸಾಮಾಜಿಕ ಕಾಳಜಿ ಶ್ಲಾಘನೀಯವಾದದ್ದು ಎಂದರು.
ಕಾನಿಪ ರಾಜ್ಯ ಸಮಿತಿ ಸದಸ್ಯ ಪರಶುರಾಮ ಸತ್ಯಪ್ಪನವರ ಮಾತನಾಡಿ, ಇಂದಿನ ದಿನಗಳಲ್ಲಿ ಪತ್ರಕರ್ತರನ್ನು ನೋಡುವ ದೃಷ್ಟಿಕೋನ ಬದಲಾಗುತ್ತಿರುವ ಸಂದರ್ಭದಲ್ಲಿ ಪತ್ರಕರ್ತ ಸುರೇಶ ಯಲಿಗಾರ ಅವರ ಸಾಮಾಜಿಕ ಸೇವೆ ಶ್ಲಾಘನೀಯವಾಗಿದೆ. ಅವರ ಸಾಮಾಜಿಕ ಕಾರ್ಯಗಳು ಹೀಗೆ ಮುಂದುವರಿಯಲಿ ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯಿನಿ ವಿನೋದಾ ಪಾಟೀಲ್ ಮಾತನಾಡಿ, ಫಕ್ಕೀರಪ್ಪ ಯಲಿಗಾರ ಅವರು ಸುಸಂಸ್ಕೃತರು ಹಾಗೂ ಸಾಮಾಜಿಕ ಕಳಕಳಿ ಹೊಂದಿದ ವ್ಯಕ್ತಿಯಾಗಿದ್ದರು. ಅವರ ಹಾದಿಯಲ್ಲಿ ಸುರೇಶ ಯಲಿಗಾರ ಅವರು ಸಾಗುತ್ತಿರುವುದು ಹೆಮ್ಮೆಯ ವಿಷಯ. ಬಡತನದಿಂದ ಹೊರಬರಲು ಶಿಕ್ಷಣವೊಂದೇ ಅಸ್ತ್ರವಾಗಿದ್ದು, ಹಿರಿಯರನ್ನು ಗೌರವದಿಂದ ಕಾಣಬೇಕು. ವಿದ್ಯಾರ್ಥಿಗಳು ಸದಾ ಪ್ರಯತ್ನಶೀಲರಾಗಿದ್ದಾಗ ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾತ್ರೋಶ್ರೀ ಅನಸೂಯಾ ಫಕ್ಕೀರಪ್ಪ ಯಲಿಗಾರ ಸೇವಾ ಸಂಸ್ಥೆಯ ಅಧ್ಯಕ್ಷ ಸುರೇಶ ಯಲಿಗಾರ, ಉಪಾಧ್ಯಕ್ಷ ಬಸವರಾಜ ಯಲಿಗಾರ, ಕಾರ್ಯದರ್ಶಿ ಲತಾ ಯಲಿಗಾರ, ಕಾನಿಪ ತಾಲೂಕು ಅಧ್ಯಕ್ಷ ವಿಶ್ವನಾಥ ಬಂಡಿವಡ್ಡರ, ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ವೀರುಪಾಕ್ಷಪ್ಪ ನೀರಲಗಿ, ಪತ್ರಕರ್ತ ಸಿದ್ರಾಮಗೌಡ ಮೆಳ್ಳಾಗಟ್ಟಿ, ಸಮಿತಿಯ ದೇವರಾಜ ಯಲಿಗಾರ, ನಿಂಗಪ್ಪ ಯಲಿಗಾರ, ದರ್ಶನ ಯಲಿಗಾರ, ಮುದಕಪ್ಪ ಕುಂದಗೊಳ, ಶಿಕ್ಷಕರಾದ ಸಿ.ಎಸ್. ಚರಂತಿಮಠ, ಬಸವರಾಜ ಬಸರಿಕಟ್ಟಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

