
ರೈತರ ಸಂಕಷ್ಟಕ್ಕೆ ಶಾಶ್ವತ ಪರಿಹಾರ ಕಲ್ಪಿಸುವಂತೆ ರಾಜ್ಯ ಸರ್ಕಾರ ಮತ್ತು ಜನಪ್ರತಿನಿಧಿಗಳಿಗೆ ಆಗ್ರಹ
ಹಾವೇರಿ: ಎಲೆಕೋಸು ಬೆಳೆಯ ಮಧ್ಯೆ ಬೆಳೆದ ಕಳೆ ನಾಶ ಮಾಡಲು ಇಬ್ಬರು ಪುಟ್ಟ ಮಕ್ಕಳು ಜೋಡೆತ್ತುಗಳಂತೆ ನೊಗ ಹೊತ್ತು ಹೊಲದಲ್ಲಿ ಸಾಗುತ್ತಿದ್ದರೆ, ಅವರ ಹಿಂದೆ ತಂದೆ ಎಡೆಕುಂಟೆ ಹಿಡಿದು ನಡೆಯುತ್ತಿರುವ ದೃಶ್ಯ ಹಾವೇರಿ ಜಿಲ್ಲೆಯ ರಾಣಿಬೆನ್ನೂರು ತಾಲೂಕಿನ ವೆಂಕಟಾಪುರ ತಾಂಡಾದಲ್ಲಿ ಕಂಡುಬಂದಿದೆ. ಆಧುನಿಕ ಕೃಷಿ, ರೈತರ ಅಭಿವೃದ್ಧಿ ಮತ್ತು ಕೃಷಿ ಯಾಂತ್ರೀಕರಣದ ಬಗ್ಗೆ ಸರ್ಕಾರಗಳು ದೊಡ್ಡ ಮಟ್ಟದಲ್ಲಿ ಮಾತನಾಡುತ್ತಿರುವ ಈ ಕಾಲಘಟ್ಟದಲ್ಲಿಯೂ ರೈತ ಕುಟುಂಬವೊಂದು ಇಂತಹ ದುಸ್ಥಿತಿಯಲ್ಲಿ ಕೃಷಿ ನಡೆಸುತ್ತಿರುವುದು ಗ್ರಾಮೀಣ ಭಾರತದ ಕಹಿ ವಾಸ್ತವವನ್ನು ಬಯಲಿಗೆಳೆದಿದೆ.
ವೆಂಕಟಾಪುರ ತಾಂಡಾದ ರೈತ ಶಂಕರಪ್ಪ ಲಮಾಣಿ ಅವರು 3 ಎಕರೆ 16 ಗುಂಟೆ ಜಮೀನಿನಲ್ಲಿ ಎಲೆಕೋಸು ಬೆಳೆ ಬೆಳೆದಿದ್ದಾರೆ. ಉತ್ತಮ ಬೆಳೆ ನಿರೀಕ್ಷೆಯಲ್ಲಿ ಸಾಲ ಮಾಡಿ ಬೀಜ, ಗೊಬ್ಬರ, ಔಷಧಿ ಹಾಗೂ ಕೂಲಿ ವೆಚ್ಚಗಳಿಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ದಾರೆ. ಆದರೆ ಇತ್ತೀಚೆಗೆ ಸುರಿದ ಪೂರ್ವ ಮುಂಗಾರು ಮಳೆಯಿಂದಾಗಿ ಬೆಳೆಯ ಮಧ್ಯೆ ಕಳೆ ವ್ಯಾಪಕವಾಗಿ ಬೆಳೆದಿದ್ದು, ಅದನ್ನು ನಿಯಂತ್ರಿಸದಿದ್ದರೆ ಬೆಳೆ ಹಾನಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಕಳೆ ನಾಶ ಮಾಡಲು ಎತ್ತುಗಳನ್ನು ಖರೀದಿಸುವುದು ರೈತನಿಗೆ ಸಾಧ್ಯವಾಗಿಲ್ಲ. ಬಾಡಿಗೆ ಎತ್ತು ಅಥವಾ ಕೃಷಿ ಯಂತ್ರಗಳನ್ನು ಪಡೆಯುವುದೂ ದುಬಾರಿಯಾಗಿರುವ ಕಾರಣ, ರೈತ ಶಂಕರಪ್ಪ ಅವರು ತಮ್ಮ ಇಬ್ಬರು ಮಕ್ಕಳಾದ ನಿಂಗರಾಜ್ ಮತ್ತು ಪ್ರವೀಣ್ ಅವರನ್ನೇ ಜೋಡೆತ್ತುಗಳಂತೆ ನೊಗಕ್ಕೆ ಕಟ್ಟಿ ಎಡೆಕುಂಟೆ ಎಳೆಯುವ ಪರಿಸ್ಥಿತಿಗೆ ತಲುಪಿದ್ದಾರೆ. ಮಕ್ಕಳು ಎಡೆಕುಂಟೆ ಎಳೆಯುತ್ತಿದ್ದರೆ, ತಂದೆ ಹಿಂದೆ ನಿಂತು ಹೊಲದಲ್ಲಿ ಕಳೆ ನಾಶ ಮಾಡುತ್ತಿರುವ ದೃಶ್ಯ ನೋಡುಗರ ಮನ ಕಲಕುವಂತಿದೆ.

ಇನ್ನೂ ಕೇವಲ 20 ದಿನದ ಎಲೆಕೋಸು ಬೆಳೆ ಉಳಿದಿದ್ದು, ಮಾರುಕಟ್ಟೆಗೆ ತಲುಪುವವರೆಗೆ ಕನಿಷ್ಠ ಮೂರು ಬಾರಿ ಕಳೆ ನಾಶ ಮಾಡಬೇಕಾಗಿದೆ. ಒಂದು ಬಾರಿ ಕಳೆ ತೆಗೆಯಲು ನಾಲ್ಕೈದು ದಿನಗಳ ಕಾಲ ಶ್ರಮ ಪಡಬೇಕಾಗುತ್ತದೆ. ಬೆಳೆ ಉಳಿಸಿಕೊಳ್ಳುವ ಅನಿವಾರ್ಯತೆಯಿಂದ ಈ ಕುಟುಂಬ ಇಂತಹ ಕಠಿಣ ಪರಿಸ್ಥಿತಿಯಲ್ಲೂ ಕೃಷಿ ಕಾರ್ಯದಲ್ಲಿ ತೊಡಗಿಕೊಂಡಿದೆ.
“ನಮ್ಮಲ್ಲಿ ಎತ್ತು ಖರೀದಿಸಲು ಹಣವಿಲ್ಲ. ಬಾಡಿಗೆ ಎತ್ತು ಅಥವಾ ಟ್ರ್ಯಾಕ್ಟರ್ ಪಡೆದು ಕೆಲಸ ಮಾಡಿಸುವುದೂ ಕಷ್ಟ. ಆದರೆ ಬೆಳೆ ಉಳಿಸಲೇಬೇಕು. ಅದಕ್ಕಾಗಿ ಮಕ್ಕಳೊಂದಿಗೆ ಸೇರಿ ಎಡೆಕುಂಟೆ ಹೊಡೆಯುತ್ತಿದ್ದೇನೆ. ನಮ್ಮ ರೈತರ ಪರಿಸ್ಥಿತಿ ಇಂದಿಗೂ ಇದೇ ರೀತಿ ಇದೆ. ಯಾರ ಮುಂದೆಯೂ ಕೈಚಾಚಿ ನಿಲ್ಲಲು ಮನಸ್ಸಾಗುವುದಿಲ್ಲ,” ಎಂದು ರೈತ ಶಂಕರಪ್ಪ ಲಮಾಣಿ ನೋವಿನಿಂದ ಹೇಳಿದ್ದಾರೆ.
ಈ ಘಟನೆ ಕೇವಲ ಒಂದು ರೈತ ಕುಟುಂಬದ ಸಂಕಷ್ಟದ ಚಿತ್ರಣವಲ್ಲ; ರಾಜ್ಯದ ಸಾವಿರಾರು ಸಣ್ಣ ಮತ್ತು ಅತಿಸಣ್ಣ ರೈತರು ಎದುರಿಸುತ್ತಿರುವ ಆರ್ಥಿಕ ಒತ್ತಡ, ಕೃಷಿ ವೆಚ್ಚಗಳ ಏರಿಕೆ ಹಾಗೂ ಯಾಂತ್ರೀಕರಣದ ಸೌಲಭ್ಯಗಳ ಕೊರತೆಯ ಪ್ರತಿಬಿಂಬವಾಗಿದೆ. ರೈತರನ್ನು ದೇಶದ ಅನ್ನದಾತರು ಎಂದು ಕೊಂಡಾಡುವ ಸರ್ಕಾರಗಳು ಮತ್ತು ಜನಪ್ರತಿನಿಧಿಗಳು ಇಂತಹ ಘಟನೆಗಳಿಂದ ಪಾಠ ಕಲಿತು, ರೈತರಿಗೆ ಕೈಗೆಟಕುವ ದರದಲ್ಲಿ ಕೃಷಿ ಯಂತ್ರೋಪಕರಣಗಳು, ಅನುದಾನ ಹಾಗೂ ಅಗತ್ಯ ನೆರವು ಒದಗಿಸುವತ್ತ ತುರ್ತು ಕ್ರಮ ಕೈಗೊಳ್ಳಬೇಕೆಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.
ಮಕ್ಕಳ ಕೈಯಲ್ಲಿ ಪುಸ್ತಕಗಳ ಬದಲಿಗೆ ನೊಗ ಕಾಣುತ್ತಿರುವ ಈ ದೃಶ್ಯ, ಕೃಷಿ ಕ್ಷೇತ್ರದ ನೈಜ ಸ್ಥಿತಿಗತಿಗಳನ್ನು ಸರ್ಕಾರದ ಮುಂದೆ ಮತ್ತೆ ಒಮ್ಮೆ ಅನಾವರಣಗೊಳಿಸಿದ್ದು, ರೈತರ ಬದುಕು ಸುಧಾರಣೆಗೆ ಘೋಷಣೆಗಳಿಗಿಂತ ಪರಿಣಾಮಕಾರಿ ಯೋಜನೆಗಳೇ ಅಗತ್ಯ ಎಂಬ ಸಂದೇಶವನ್ನು ಸಾರುತ್ತಿದೆ.

