
ಹಾವೇರಿ: ನಿಧಿ ಸಿಗುವ ಆಸೆಯಿಂದ ಮೂಕಬಸವೇಶ್ವರ ಹಾಗೂ ಈಶ್ವರಮೂರ್ತಿ ಪ್ರತಿಷ್ಠಾಪಿತವಾಗಿದ್ದ ಕಲ್ಲಿನ ದೇವಸ್ಥಾನವನ್ನು ಧ್ವಂಸಗೊಳಿಸಿ ನೆಲ ಅಗೆದ ಆರೋಪದಡಿ ನಾಲ್ವರನ್ನು ಸವಣೂರು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿರುವ ಘಟನೆ ತಾಲೂಕಿನ ನದಿನೀರಲಗಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ನದಿನೀರಲಗಿ ಗ್ರಾಮದ ಫಕ್ಕಿರಪ್ಪ ಮಾದರ ಅವರ ಜಮೀನಿನಲ್ಲಿರುವ ಮೂಕಬಸವೇಶ್ವರ ಹಾಗೂ ಈಶ್ವರಮೂರ್ತಿಯ ಸಣ್ಣ ಕಲ್ಲಿನ ದೇವಸ್ಥಾನವನ್ನು ನಿಧಿ ಹುಡುಕುವ ಉದ್ದೇಶದಿಂದ ಧ್ವಂಸ ಮಾಡಲಾಗಿದೆ ಎಂದು ಸವಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು ಆರೋಪಿಗಳನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ನದಿನೀರಲಗಿ ಗ್ರಾಮದ ಯುನಿಸಖಾನ್ ಮಹಬೂಬಖಾನ್ ಕುಲಕರ್ಣಿ, ನೂರಅಹ್ಮದ ಯುನಿಸಖಾನ್ ಕುಲಕರ್ಣಿ, ಮುಂಡಗೋಡದ ಮುಸ್ತಾಕಅಹ್ಮದ ಇಮಾಮಖಾನ್ ದುಂಡಸಿ ಹಾಗೂ ದೇವಿಹೊಸೂರಿನ ಆಸೀಪ್ ಮಕ್ಯುಲಸಾಬ ಯಲವಗಿ ಎಂದು ಗುರುತಿಸಲಾಗಿದೆ.

ಆರೋಪಿಗಳು ದೇವಸ್ಥಾನದಲ್ಲಿದ್ದ ಮೂರ್ತಿಗಳನ್ನು ಪಕ್ಕಕ್ಕೆ ಸ್ಥಳಾಂತರಿಸಿ, ಅವುಗಳ ಕೆಳಭಾಗದ ನೆಲವನ್ನು ಜೆಸಿಬಿ ಯಂತ್ರದ ಮೂಲಕ ಅಗೆದು ಗುಂಡಿ ತೋಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಕೃತ್ಯದಿಂದ ಹಿಂದೂ ಧರ್ಮದ ಪೂಜಾ ಸ್ಥಳಕ್ಕೆ ಹಾನಿಯುಂಟಾಗಿದ್ದು, ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗಿದೆ ಎಂಬ ಆರೋಪದಡಿ ಅವರನ್ನು ಬಂಧಿಸಲಾಗಿದೆ.
ಪ್ರಕರಣದ ತನಿಖೆ ಹಾಗೂ ಆರೋಪಿಗಳ ಪತ್ತೆಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ ಹಾಗೂ ಡಿಎಸ್ಪಿ ಗುರುಶಾಂತಪ್ಪ ಕೆ.ವಿ. ಅವರ ಮಾರ್ಗದರ್ಶನದಲ್ಲಿ ವಿಶೇಷ ತಂಡವನ್ನು ರಚಿಸಲಾಗಿತ್ತು. ತಂಡವು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದೆ.
ಈ ಕಾರ್ಯಾಚರಣೆಯಲ್ಲಿ ಸಿಪಿಐ ತಿಮ್ಮಣ್ಣ ಎಸ್. ಚಾಮನೂರ, ಪಿಎಸ್ಐ ರಂಗನಾಥ ಅಂತರಗಟ್ಟಿ ಹಾಗೂ ಠಾಣೆಯ ಸಿಬ್ಬಂದಿಗಳಾದ ಆರ್.ಎನ್. ಪೂಜಾರ, ಬಿ.ಎನ್. ಆವೋಜಿ, ಮಂಜುನಾಥ ಮಣ್ಣಿಯವರ, ಮಹೇಶ ಕೆಲೂರ, ಎ.ಎಚ್. ನದಾಫ್, ಅನೀಲ ಮಲ್ಲಾಡದ, ಆರ್.ಎನ್. ಕನವಳ್ಳಿ ಮತ್ತು ತಾಂತ್ರಿಕ ಸಿಬ್ಬಂದಿಗಳಾದ ಮಾರುತಿ ಹಾಲಭಾವಿ ಹಾಗೂ ಸತೀಶ ಮಾರಕಟ್ಟಿ ಭಾಗವಹಿಸಿದ್ದರು.

