ಹುಣಸೂರಿನಲ್ಲಿ ಭೀಕರ ಕೌಟುಂಬಿಕ ದುರಂತ: ಹೆಂಡತಿ, ಮಕ್ಕಳಿಗೆ ಪ್ಲಾಸ್ಟರ್ ಸುತ್ತಿ ಕೊಲೆ ಮಾಡಿ ವ್ಯಕ್ತಿ ಆತ್ಮಹತ್ಯೆ!

Spread the love

ವಿಶೇಷ ಕ್ರೈಂ ವರದಿ

ಹುಣಸೂರು / ಮೈಸೂರು:

ಮೈಸೂರು ಜಿಲ್ಲೆಯ ಹುಣಸೂರು ನಗರದ ಮಾರುತಿ ಬಡಾವಣೆಯಲ್ಲಿ ಸಮಾಜವೇ ತಲೆತಗ್ಗಿಸುವಂತಹ, ಕರುಳು ಹಿಂಡುವ ದಾರುಣ ಘಟನೆಯೊಂದು ನಡೆದಿದೆ. ಸಣ್ಣಪುಟ್ಟ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹತಾಶೆಗೊಂಡ ವ್ಯಕ್ತಿಯೊಬ್ಬ ತನ್ನ ಹೆಂಡತಿ ಹಾಗೂ ಇಬ್ಬರು ಮುಗ್ಧ ಮಕ್ಕಳನ್ನು ಅತ್ಯಂತ ನೃಶಂಸವಾಗಿ ಕೊಲೆ ಮಾಡಿ, ತಾನೂ ನೇಣಿಗೆ ಶರಣಾಗಿರುವ ಮನಕಲಕುವ ಘಟನೆ ಬೆಳಕಿಗೆ ಬಂದಿದೆ.

ಕುಟುಂಬದ ಯಜಮಾನ ಹರೀಶ್, ಆತನ ಪತ್ನಿ ನಿಶ್ಚಿತಾ ಹಾಗೂ ಇವರ ಮುಗ್ಧ ಮಕ್ಕಳಾದ ನೆಕ್ಸಾ ಮತ್ತು ರಕ್ಷಾ ದಾರುಣವಾಗಿ ಪ್ರಾಣ ಕಳೆದುಕೊಂಡ ದುರ್ದೈವಿಗಳಾಗಿದ್ದಾರೆ. 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ನೆಕ್ಸಾ ಹಾಗೂ 1ನೇ ತರಗತಿ ಓದುತ್ತಿದ್ದ ರಕ್ಷಾ ಎಂಬ ಕಂದಮ್ಮಗಳು ತಂದೆಯ ಕೃತ್ಯಕ್ಕೆ ಬಲಿಯಾಗಿದ್ದು, ಇಡೀ ಬಡಾವಣೆಯಲ್ಲಿ ಶೋಕಸಾಗರ ಮುಸುಕುವಂತೆ ಮಾಡಿದೆ.

ಹರೀಶ್ ತನ್ನ ಪತ್ನಿ ಮತ್ತು ಮಕ್ಕಳ ಬಾಯಿ ಹಾಗೂ ಮೂಗಿಗೆ ಪ್ಲಾಸ್ಟರ್ ಸುತ್ತಿ, ಅವರು ಕನಿಷ್ಠ ಉಸಿರಾಡಲೂ ಸಾಧ್ಯವಾಗದಂತೆ ಮಾಡಿ ಕ್ರೂರವಾಗಿ ಹತ್ಯೆಗೈದಿದ್ದಾನೆ. ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಇಡೀ ಕುಟುಂಬವನ್ನೇ ಸರ್ವನಾಶಗೊಳಿಸಿದ್ದಾನೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಮಲ್ಲಿಕಾರ್ಜುನ ಬಾಲದಂಡಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಧಾವಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಕೌಟುಂಬಿಕ ಮನಸ್ತಾಪವೇ ಈ ದುರಂತಕ್ಕೆ ಮುಖ್ಯ ಕಾರಣ ಎನ್ನಲಾಗಿದ್ದು, ಈ ಕುರಿತು ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿಖರ ಕಾರಣವನ್ನು ತಿಳಿಯಲು ಪೊಲೀಸರು ಎಲ್ಲಾ ಕೋನಗಳಿಂದಲೂ ತನಿಖೆಯನ್ನು ತೀವ್ರಗೊಳಿಸಿದ್ದಾರೆ.

Leave a Reply

Your email address will not be published. Required fields are marked *