
ದಾವಣಗೆರೆ: ನೋಡಲು ಅಚ್ಚುಕಟ್ಟಾಗಿ, ಮುದ್ದು ಮುಖದ, ಓದಿನಲ್ಲೂ ಸದಾ ಮುಂದಿದ್ದ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ಕಾಲೇಜು ಹಾಸ್ಟೆಲ್ನಲ್ಲಿ ದಾರುಣವಾಗಿ ಮೃತಪಟ್ಟಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದ್ವಿತೀಯ ಪಿಯುಸಿಗೆ ಪ್ರವೇಶ ಪಡೆದು, ಭವಿಷ್ಯದ ಬಗ್ಗೆ ಹತ್ತಾರು ಕನಸುಗಳನ್ನು ಹೊತ್ತುಕೊಂಡಿದ್ದ ಮಗಳ ಸಾವಿನಿಂದ ಕುಟುಂಬಸ್ಥರು ಆಘಾತಕ್ಕೊಳಗಾಗಿದ್ದಾರೆ.
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕುರವತ್ತಿ ಗ್ರಾಮದ ನಿಂಗಪ್ಪ ಅವರ ಪುತ್ರಿ ರಂಜಿತಾ ಮೃತ ವಿದ್ಯಾರ್ಥಿನಿ. ದಾವಣಗೆರೆಯ ಪ್ರತಿಷ್ಠಿತ ಟೀಮ್ ಅಕಾಡೆಮಿಯಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ರಂಜಿತಾ, ನಾಲ್ಕೈದು ದಿನಗಳ ಹಿಂದಷ್ಟೇ ಸ್ವಗ್ರಾಮಕ್ಕೆ ತೆರಳಿ ನೂತನ ಮನೆಯ ಗೃಹಪ್ರವೇಶದಲ್ಲಿ ಕುಟುಂಬಸ್ಥರೊಂದಿಗೆ ಸಂಭ್ರಮದಿಂದ ಭಾಗವಹಿಸಿ ಬಳಿಕ ಕಾಲೇಜಿಗೆ ಮರಳಿದ್ದಳು. ಅಂದು ಮನೆಯವರೊಂದಿಗೆ ನಗು-ನಗುತ್ತಾ ಬೆರೆತಿದ್ದ ಮಗಳು ಇದೀಗ ಶವವಾಗಿ ಮರಳಿರುವುದು ಕುಟುಂಬಸ್ಥರ ದುಃಖಕ್ಕೆ ಕಾರಣವಾಗಿದೆ.
ಬೆಳಗ್ಗೆಯಷ್ಟೇ ತಾಯಿಯೊಂದಿಗೆ ಮಾತನಾಡಿದ್ದ ರಂಜಿತಾ
ಘಟನೆ ನಡೆದ ದಿನ ಬೆಳಗ್ಗೆಯೂ ರಂಜಿತಾ ತನ್ನ ತಾಯಿಗೆ ದೂರವಾಣಿ ಕರೆ ಮಾಡಿ ಎಂದಿನಂತೆ ಪ್ರೀತಿಯಿಂದ ಮಾತನಾಡಿದ್ದಳು ಎನ್ನಲಾಗಿದೆ. ಸಂಜೆ ಸುಮಾರು 5.30ರ ವೇಳೆಗೆ ಕಾಲೇಜಿನಿಂದ ಹಾಸ್ಟೆಲ್ ಕೊಠಡಿಗೆ ತೆರಳುವುದಾಗಿ ಹೇಳಿ ಒಬ್ಬಳೇ ಹೋಗಿದ್ದಳು. ರಾತ್ರಿ ಸುಮಾರು 8.30ರ ವೇಳೆಗೆ ಸ್ನೇಹಿತೆಯರು ಕೊಠಡಿಗೆ ತೆರಳಿ ಬಾಗಿಲು ಬಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಹಾಸ್ಟೆಲ್ ಸಿಬ್ಬಂದಿಗೆ ಮಾಹಿತಿ ನೀಡಲಾಗಿದೆ.
ಬಳಿಕ ಬಾಗಿಲು ತೆರೆದು ನೋಡಿದಾಗ ರಂಜಿತಾ ಕಿಟಕಿಯ ಸರಳಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ ಎಂದು ತಿಳಿದುಬಂದಿದೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನ ನಡೆದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದಳು ಎನ್ನಲಾಗಿದೆ.
ಸಾವಿನ ಬಗ್ಗೆ ಕುಟುಂಬಸ್ಥರಿಂದ ಅನುಮಾನ
ರಂಜಿತಾ ಸಾವಿನ ಕುರಿತು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಪೊಲೀಸರನ್ನು ಒತ್ತಾಯಿಸಿದ್ದಾರೆ. ಕಿಟಕಿಯ ಎತ್ತರ ಕೇವಲ ಮೂರು ಅಡಿಗಳಷ್ಟಿದ್ದು, ಅಲ್ಲಿ ನೇಣು ಬಿಗಿದುಕೊಳ್ಳುವುದು ಹೇಗೆ ಸಾಧ್ಯ ಎಂಬ ಪ್ರಶ್ನೆಯನ್ನು ಕುಟುಂಬಸ್ಥರು ಮುಂದಿಟ್ಟಿದ್ದಾರೆ. ಅಲ್ಲದೆ, ಕೊಠಡಿಯಲ್ಲಿ ಯಾವುದೇ ಡೆತ್ನೋಟ್ ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ.
ಬೆಳಗ್ಗೆಯಷ್ಟೇ ಮನೆಯವರೊಂದಿಗೆ ಉತ್ಸಾಹದಿಂದ ಮಾತನಾಡಿದ್ದ ರಂಜಿತಾ ಕೆಲವೇ ಗಂಟೆಗಳಲ್ಲಿ ಇಂತಹ ನಿರ್ಧಾರ ಕೈಗೊಳ್ಳಲು ಕಾರಣವೇನು ಎಂಬುದನ್ನು ತನಿಖೆಯಿಂದ ಪತ್ತೆಹಚ್ಚಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ.
“ನಮ್ಮ ಮಗಳು ಹೇಡಿಯಲ್ಲ. ಆಕೆಯ ಸಾವಿನ ಹಿಂದೆ ಯಾರದ್ದಾದರೂ ಕೈವಾಡವಿದೆಯೇ ಎಂಬ ಅನುಮಾನವಿದೆ. ಕಾಲೇಜು ಆಡಳಿತ ಮಂಡಳಿ ಹಾಗೂ ಪೊಲೀಸರು ನಿಷ್ಪಕ್ಷಪಾತ ತನಿಖೆ ನಡೆಸಿ ಸತ್ಯವನ್ನು ಹೊರತಂದು ನಮಗೆ ನ್ಯಾಯ ಒದಗಿಸಬೇಕು,” ಎಂದು ತಂದೆ ನಿಂಗಪ್ಪ ಹಾಗೂ ಸಂಬಂಧಿಕರು ಕಣ್ಣೀರಿಟ್ಟಿದ್ದಾರೆ.
ಕಾಲೇಜು ಆಡಳಿತ ಮಂಡಳಿ ಹೇಳುವುದೇನು?
ಘಟನೆ ಹಿನ್ನೆಲೆಯಲ್ಲಿ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಈ ಕುರಿತು ಟೀಮ್ ಅಕಾಡೆಮಿ ಚೇರ್ಮನ್ ಮಂಜಪ್ಪ ಪ್ರತಿಕ್ರಿಯಿಸಿ, ರಂಜಿತಾ ಊರಿನಿಂದ ಮರಳಿದ ಬಳಿಕ ಕೊಂಚ ಖಿನ್ನತೆಯಲ್ಲಿದ್ದಳು ಎಂಬ ಮಾಹಿತಿ ಲಭ್ಯವಾಗಿದೆ. ಮಗಳನ್ನು ಕಳೆದುಕೊಂಡ ದುಃಖದಲ್ಲಿರುವ ಕುಟುಂಬಸ್ಥರು ಕೊಲೆ ಆರೋಪ ಮಾಡುತ್ತಿದ್ದಾರೆ. ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಹೊರತರಲಿ ಎಂದು ತಿಳಿಸಿದ್ದಾರೆ.
ಪ್ರತಿಭಾವಂತ ವಿದ್ಯಾರ್ಥಿನಿಯ ದಾರುಣ ಸಾವಿನಿಂದ ಕುಟುಂಬಸ್ಥರು ಹಾಗೂ ಸ್ನೇಹಿತರು ತೀವ್ರ ದುಃಖದಲ್ಲಿದ್ದಾರೆ. ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದು, ರಂಜಿತಾ ಸಾವು ಆತ್ಮಹತ್ಯೆಯೇ ಅಥವಾ ಬೇರೆ ಕಾರಣದಿಂದ ಸಂಭವಿಸಿದೆಯೇ ಎಂಬುದು ತನಿಖೆಯ ಬಳಿಕವಷ್ಟೇ ಸ್ಪಷ್ಟವಾಗಬೇಕಿದೆ.

