
ಧಾರವಾಡ: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಪತ್ನಿಯನ್ನು ಕೊಡಲಿಯಿಂದ ಹೊಡೆದು ಕೊಲೆ ಮಾಡಿದ್ದ ಪ್ರಕರಣದಲ್ಲಿ ಆರೋಪಿಗೆ ಧಾರವಾಡ ಜಿಲ್ಲಾ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಕಾಲವಾಡ ಗ್ರಾಮದ ಗುರುಶಾಂತಪ್ಪ ಅನವಾಲದನಿ ಎಂಬಾತ ತನ್ನ ಪತ್ನಿ ಪಾರವ್ವ ಹಾಗೂ ಮನೆಯ ಸದಸ್ಯರು ತನ್ನ ಮೇಲೆ ಮಾಟಮಂತ್ರ ಮಾಡಿಸಿದ್ದಾರೆ ಎಂದು ಆರೋಪಿಸಿ ನಿರಂತರ ಕಿರುಕುಳ ನೀಡುತ್ತಿದ್ದನು. ಇದೇ ವಿಚಾರವಾಗಿ 2024ರ ಮಾರ್ಚ್ 30ರಂದು ನಸುಕಿನ ವೇಳೆ ಮಲಗಿದ್ದ ಪತ್ನಿ ಪಾರವ್ವಳ ಮೇಲೆ ಕೊಡಲಿಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ್ದನು. ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದನು. ಅಲ್ಲದೆ, ಮೃತಳ ಪಕ್ಕದಲ್ಲೇ ಮಲಗಿದ್ದ ಸಂಬಂಧಿ ರೇಣವ್ವ ಕಿತ್ತಳಿ ಅವರಿಗೆ ಜೀವ ಬೆದರಿಕೆ ಹಾಕಿದ್ದನು.
ಘಟನೆ ಸಂಬಂಧ ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನವಲಗುಂದ ವೃತ್ತದ ಸರ್ಕಲ್ ಪೊಲೀಸ್ ಇನ್ಸ್‌ಪೆಕ್ಟರ್ ಆರ್.ಎಸ್. ಕಪ್ಪತ್ತನವರ್ ತನಿಖೆ ನಡೆಸಿ ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಧಾರವಾಡದ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಪೂರ್ಣಿಮಾ ಪೈ ಅವರು ಆರೋಪಿಯ ವಿರುದ್ಧದ ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಕಠಿಣ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಪಿ.ಎಸ್. ತೊರಗಲ್ ವಾದ ಮಂಡಿಸಿದ್ದರು. ಪ್ರಕರಣವನ್ನು ಯಶಸ್ವಿಯಾಗಿ ತನಿಖೆ ನಡೆಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪ್ರಶಂಸಿಸಿದ್ದಾರೆ.

