
ನವಲಗುಂದ: ಪಟ್ಟಣದಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಒಳಚರಂಡಿ (ಯುಜಿಡಿ) ಕಾಮಗಾರಿಯು ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವತಿಯಿಂದ ನಡೆಯುತ್ತಿರುವ ಈ ಕಾಮಗಾರಿಯಲ್ಲಿ, ಅಭಿವೃದ್ಧಿಯ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಾರ್ವಜನಿಕರ ತೆರಿಗೆ ಹಣ ದುರುಪಯೋಗವಾಗುತ್ತಿರುವುದು ಅತ್ಯಂತ ಖಂಡನೀಯ.
ವಿಶ್ವಾಸಾರ್ಹ ಮೂಲಗಳ ಪ್ರಕಾರ ಈ ಬೃಹತ್ ಯೋಜನೆಗಾಗಿ ಬರೋಬ್ಬರಿ 30 ಕೋಟಿ ರೂಪಾಯಿ ಅನುದಾನ ಮಂಜೂರಾಗಿದ್ದರೂ, ಸ್ಥಳದಲ್ಲಿ ನಡೆಯುತ್ತಿರುವ ಕೆಲಸದ ಸ್ಥಿತಿಯನ್ನು ನೋಡಿದರೆ ಕನಿಷ್ಠ 3 ಕೋಟಿ ರೂಪಾಯಿಯಷ್ಟು ಕೆಲಸವೂ ಆದಂತೆ ಕಾಣುತ್ತಿಲ್ಲ. ಕಳಪೆ ದರ್ಜೆಯ ಸಿಮೆಂಟ್, ಗುಣಮಟ್ಟವಿಲ್ಲದ ಪೈಪ್‌ಗಳ ಬಳಕೆ ಹಾಗೂ ತರಾತುರಿಯಲ್ಲಿ ಗುಂಡಿಗಳನ್ನು ಮುಚ್ಚುತ್ತಿರುವುದು ಜಲ ಮಂಡಳಿಯ ಅಧಿಕಾರಿಗಳು ಮತ್ತು ಗುತ್ತಿಗೆದಾರರುಶಾಮೀಲಾಗಿರುವ ಸಂಶಯ ಸಾರ್ವಜನಿಕ ವಲಯದಲ್ಲಿ ತೀವ್ರವಾಗಿ ಕೇಳಿ ಬರುತ್ತಿದೆ.
ಸರ್ಕಾರದ ನಿಯಮಾವಳಿಗಳ ಪ್ರಕಾರ ಯಾವುದೇ ಸಾರ್ವಜನಿಕ ಕಾಮಗಾರಿ ಆರಂಭಿಸುವ ಮುನ್ನ ಯೋಜನೆಗೆ ಸಂಬಂಧಿಸಿದ ವಿವರಗಳ ಮಾಹಿತಿ ಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು. ಆದರೆ ಇಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು ಗುತ್ತಿಗೆದಾರರು ಯಾರು, ಒಟ್ಟು ಮೊತ್ತ ಎಷ್ಟು ಹಾಗೂ ಕಾಮಗಾರಿ ಮುಕ್ತಾಯದ ಅವಧಿ ಎಂದು ಎಂಬ ಯಾವುದೇ ಪ್ರಾಥಮಿಕ ವಿವರಗಳನ್ನೂ ಪ್ರಕಟಿಸದೆ ನಿಯಮಗಳನ್ನು ಗಾಳಿಗೆ ತೂರಿದೆ. ಕತ್ತಲಲ್ಲಿ ವ್ಯವಹಾರ ನಡೆಸುವಂತೆ ಮನಸೋಇಚ್ಛೆ ಕಾಮಗಾರಿ ನಿರ್ವಹಿಸುತ್ತಿರುವುದು ಮಂಡಳಿಯ ಮತ್ತು ಗುತ್ತಿಗೆದಾರರ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತದೆ.

ಈ ಕಳಪೆ ಕಾಮಗಾರಿಯ ಕುರಿತು ಸಾಮಾಜಿಕ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ ಅವರು ಸಂಬಂಧಪಟ್ಟ ಇಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡು ಅಂದಾಜು ಪಟ್ಟಿ (ಎಸ್ಟಿಮೇಷನ್ ಕಾಪಿ) ಕೇಳಿದಾಗ, ಜವಾಬ್ದಾರಿಯುತ ಸ್ಥಾನದಲ್ಲಿರುವ ಇಂಜಿನಿಯರ್ “ನಮ್ಮ ಬಳಿ ಎಸ್ಟಿಮೇಷನ್ ಕಾಪಿ ಇಲ್ಲ” ಎಂದು ಹಾರಿಕೆ ಉತ್ತರ ನೀಡಿ ಜಾರಿಕೊಂಡಿರುವುದು ತೀವ್ರ ಖಂಡನೀಯವಾಗಿದೆ. ಯೋಜನೆಯನ್ನು ನಿರ್ವಹಿಸುತ್ತಿರುವ ತಾಂತ್ರಿಕ ಅಧಿಕಾರಿಗಳ ಈ ಬೇಜವಾಬ್ದಾರಿ ವರ್ತನೆಯು ಕಾಮಗಾರಿಯಲ್ಲಿ ನಡೆದಿರುವ ದೊಡ್ಡ ಮಟ್ಟದ ಭ್ರಷ್ಟಾಚಾರದ ಸಂಶಯವನ್ನು ಮತ್ತಷ್ಟು ಬಲಪಡಿಸಿದೆ.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಈ ಗುಣಮಟ್ಟವಿಲ್ಲದ ಒಳಚರಂಡಿ ವ್ಯವಸ್ಥೆಯಿಂದಾಗಿ ಮುಂದಿನ ದಿನಗಳಲ್ಲಿ ಇಡೀ ಪಟ್ಟಣದ ರಸ್ತೆಗಳು ಕುಸಿಯುವ ಹಾಗೂ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಆದ್ದರಿಂದ ಕೂಡಲೇ ಉನ್ನತ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಮಗ್ರ ತನಿಖೆ ನಡೆಸಬೇಕು. ನಿಯಮ ಬಾಹಿರವಾಗಿ ವರ್ತಿಸುತ್ತಿರುವ ತಪ್ಪಿತಸ್ಥ ಗುತ್ತಿಗೆದಾರರನ್ನು, ಭ್ರಷ್ಟ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಹಾಗೂ ಸಂಘಟನೆಗಳು ತೀವ್ರವಾಗಿ ಒತ್ತಾಯಿಸಿವೆ.

ಬಾಕ್ಸ
ಮಾಧ್ಯಮಗಳ ಪ್ರಶ್ನೆಗೆ ಸೈಟ್ ಇಂಜಿನಿಯರ್ ಸತೀಶ ಹಾರಿಕೆ ಉತ್ತರ:*
ನವಲಗುಂದ ಪಟ್ಟಣದ ಯುಜಿಡಿ ಕಾಮಗಾರಿಗೆ ಸಂಬಂಧಿಸಿದ ಸೈಟ್ ಇಂಜಿನಿಯರ್ ಸತೀಶ ಅವರನ್ನು ಮಾಧ್ಯಮ ಪ್ರತಿನಿಧಿಗಳು ಸಂಪರ್ಕಿಸಿ ಕಳಪೆ ಕಾಮಗಾರಿ ಹಾಗೂ ಅಂದಾಜು ಪಟ್ಟಿಯ (ಎಸ್ಟಿಮೇಷನ್ ಕಾಪಿ) ಕುರಿತು ಪ್ರಶ್ನಿಸಿದಾಗ, ಅವರು ಅತ್ಯಂತ ಬೇಜವಾಬ್ದಾರಿತನದ ಹಾರಿಕೆ ಉತ್ತರ ನೀಡಿ ಜಾರಿಕೊಂಡಿದ್ದಾರೆ.
“ನಾನು ಸದ್ಯ ಬೇರೆ ಕಡೆ ಇದ್ದೇನೆ, ಸ್ವಲ್ಪ ಬ್ಯುಸಿ ಇದ್ದೇನೆ. ಎಸ್ಟಿಮೇಷನ್ ಕಾಪಿ ಕೇಳಿದರೆ ಅದು ಬೆಂಗಳೂರಿನಲ್ಲಿದೆ, ಇಲ್ಲಿ ಇರುವುದಿಲ್ಲ. ಆದರೂ ನಾವು ಆ ಕಾಮಗಾರಿಗೆ ಬೆಡ್ ಸರಿಯಾಗಿಯೇ ಹಾಕಿದ್ದೇವೆ,” ಎಂದು ಇಂಜಿನಿಯರ್ ಸತೀಶ ಅವರು ಉತ್ತರಿಸಿದ್ದಾರೆ. ಸ್ಥಳದಲ್ಲಿ ನಿಂತು ಕಾಮಗಾರಿಯ ಗುಣಮಟ್ಟ ಪರಿಶೀಲಿಸಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ತಾಂತ್ರಿಕ ಅಧಿಕಾರಿಯ ಈ ರೀತಿಯ ಹಾರಿಕೆ ಉತ್ತರಗಳು, ಕಾಮಗಾರಿಯಲ್ಲಿ ನಡೆದಿರುವ ಭ್ರಷ್ಟಾಚಾರದ ಸಂಶಯವನ್ನು ಮತ್ತಷ್ಟು ಬಲಪಡಿಸುವಂತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

