
ಗುವಾಹಟಿ: ಚುನಾವಣಾ ರಾಲಿಯೊಂದರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಬಿಜೆಪಿಯ ಸಿದ್ಧಾಂತವನ್ನು ‘ವಿಷಕಾರಿ ಹಾವು’ಗಳಿಗೆ ಹೋಲಿಸಿ ವಿವಾದಾತ್ಮಕ ಹೇಳಿಕೆ ನೀಡಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಅಸ್ಸಾಂನ ಎರಡು ಪ್ರತ್ಯೇಕ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಲಾಗಿದೆ.
ದಕ್ಷಿಣ ಅಸ್ಸಾಂನ ಶ್ರೀಭೂಮಿ ಜಿಲ್ಲೆಯ ಕರೀಂಗಂಜ್ ದಕ್ಷಿಣ ವಿಧಾನಸಭಾ ಕ್ಷೇತ್ರದ ನೀಲಂಬಜಾರ್‌ನಲ್ಲಿ ಆಯೋಜಿಸಲಾಗಿದ್ದ ಚುನಾವಣಾ ಸಭೆಯಲ್ಲಿ ಮಾತನಾಡುತ್ತಿದ್ದ ಖರ್ಗೆ ಅವರು, ನಮಾಜ್ ಮಾಡುವಾಗ ಮುಂದೆ ವಿಷಕಾರಿ ಹಾವು ಬಂದರೆ ಪ್ರಾರ್ಥನೆ ನಿಲ್ಲಿಸಿ ಮೊದಲು ಹಾವನ್ನು ಕೊಲ್ಲಬೇಕು ಎಂದು ಕುರಾನ್ ಹೇಳುತ್ತದೆ ಎಂಬ ಉಲ್ಲೇಖ ನೀಡಿ, ಆರ್‌ಎಸ್‌ಎಸ್ ಮತ್ತು ಬಿಜೆಪಿ ಕೂಡ ಅದೇ ವಿಷಕಾರಿ ಹಾವಿನಂತೆ ಎಂದು ಟೀಕಿಸಿದ್ದರು. ಈ ಹೇಳಿಕೆಯು ಪ್ರಚೋದನಾಕಾರಿ ಮತ್ತು ಕೋಮು ಸೂಕ್ಷ್ಮತೆಯಿಂದ ಕೂಡಿದ್ದು, ಸಂಘಟನೆಯ ಕಾರ್ಯಕರ್ತರ ವಿರುದ್ಧ ದೈಹಿಕ ಹಲ್ಲೆ ಅಥವಾ ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತಿದೆ ಎಂದು ಆರ್‌ಎಸ್‌ಎಸ್ ಆಕ್ಷೇಪ ವ್ಯಕ್ತಪಡಿಸಿದೆ.
ಈ ಸಂಬಂಧ ಆರ್‌ಎಸ್‌ಎಸ್‌ನ ಉತ್ತರ ಅಸ್ಸಾಂ ಕಾರ್ಯದರ್ಶಿ ಖಗೇನ್ ಸೈಕಿಯಾ ಅವರು ದಿಸ್‌ಪುರ ಪೊಲೀಸ್ ಠಾಣೆಯಲ್ಲಿ ಹಾಗೂ ದಕ್ಷಿಣ ಅಸ್ಸಾಂ ಕಾರ್ಯದರ್ಶಿ ಜ್ಯೋತ್ಸಾ ಮೋಯ್ ಚಕ್ರವರ್ತಿ ಅವರು ಸಿಲ್ಚಾರ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ದೂರುಗಳನ್ನು ಸಲ್ಲಿಸಿದ್ದಾರೆ. ಖರ್ಗೆ ಅವರ ಹೇಳಿಕೆಯು 1951ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 83ರ ಅಡಿಯಲ್ಲಿ ‘ಭ್ರಷ್ಟ ಚುನಾವಣಾ ಅಭ್ಯಾಸ’ವಾಗಿದ್ದು, ಸಾರ್ವಜನಿಕ ಶಾಂತಿಗೆ ಧಕ್ಕೆ ತರುವ ಪ್ರಯತ್ನವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದಲ್ಲದೆ, ಬಿಜೆಪಿ ಕೂಡ ಬಸಿಷ್ಠ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದರ ಜೊತೆಗೆ ಚುನಾವಣಾ ಆಯೋಗಕ್ಕೂ ದೂರು ನೀಡಿದೆ. ಚುನಾವಣಾ ಸಮಯದಲ್ಲಿ ಹಿಂದೂ-ಮುಸ್ಲಿಂ ಸಮುದಾಯಗಳ ನಡುವೆ ದ್ವೇಷ ಬಿತ್ತಲು ಮತ್ತು ವಾತಾವರಣ ಕೆಡಿಸಲು ಇಂತಹ ಹೇಳಿಕೆಗಳನ್ನು ನೀಡಲಾಗುತ್ತಿದೆ ಎಂದು ಸಂಘಟನೆಗಳು ಕಿಡಿಕಾರಿವೆ.

