
ನವದೆಹಲಿ: ಕಳೆದ ಕೆಲವು ದಿನಗಳಿಂದ NEET-UG ಪರೀಕ್ಷೆ ಸಂಬಂಧ ದೇಶಾದ್ಯಂತ ಉಂಟಾಗಿದ್ದ ವಿವಾದ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆಗಳ ನಡುವೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವುದಾಗಿ ಘೋಷಿಸಿದ್ದಾರೆ. ಈ ಕುರಿತು ದೇಶದ ಯುವಕರಿಗೆ ಉದ್ದೇಶಿಸಿ ಭಾವನಾತ್ಮಕ ಮುಕ್ತ ಪತ್ರ ಬರೆದಿರುವ ಅವರು, ದೇಶದ ಏಕತೆ, ವಿದ್ಯಾರ್ಥಿಗಳ ಭವಿಷ್ಯ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.
ತಮ್ಮ ಪತ್ರದಲ್ಲಿ, ಕಳೆದ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಶಿಕ್ಷಣ ಸುಧಾರಣೆಗೆ ತಾವು ಸಮರ್ಪಿತರಾಗಿ ಕೆಲಸ ಮಾಡಿರುವುದಾಗಿ ಉಲ್ಲೇಖಿಸಿರುವ ಧರ್ಮೇಂದ್ರ ಪ್ರಧಾನ, ಬಲಿಷ್ಠ, ಸಮಗ್ರ ಹಾಗೂ ದೂರದೃಷ್ಟಿಯ ಶಿಕ್ಷಣ ವ್ಯವಸ್ಥೆಯೇ ಸದೃಢ ರಾಷ್ಟ್ರದ ಅಡಿಪಾಯ ಎಂಬ ನಂಬಿಕೆಯನ್ನು ಪುನರುಚ್ಚರಿಸಿದ್ದಾರೆ. ದೇಶದ ಯುವಕರ ಕನಸುಗಳು, ಆಶಯಗಳು ಮತ್ತು ನ್ಯಾಯಸಮ್ಮತ ನಿರೀಕ್ಷೆಗಳಿಗೆ ತಾವು ಸದಾ ಗೌರವ ನೀಡಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ದೂರದರ್ಶಿ ನಾಯಕತ್ವದಲ್ಲಿ ದೇಶ ಸೇವೆ ಮಾಡುವ ಅವಕಾಶ ದೊರೆತಿರುವುದಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.
ಮೇ 3, 2026ರಂದು ನಡೆದ NEET-UG ಪರೀಕ್ಷೆಯಲ್ಲಿ ಅಕ್ರಮಗಳು ಬೆಳಕಿಗೆ ಬಂದ ತಕ್ಷಣ ಕೇಂದ್ರ ಸರ್ಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಯನ್ನು ಸಿಬಿಐಗೆ ವಹಿಸಿತ್ತು. ಬಳಿಕ ಪರೀಕ್ಷೆಯನ್ನು ರದ್ದುಗೊಳಿಸಿ ಮರುಪರೀಕ್ಷೆಯ ದಿನಾಂಕ ಘೋಷಿಸಲಾಯಿತು. ಮುಂದಿನ ವರ್ಷದಿಂದ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ವಿಧಾನದಲ್ಲಿ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ, ರಾಜ್ಯ ಸರ್ಕಾರಗಳು, ಜಿಲ್ಲಾಡಳಿತಗಳು, ವಿದ್ಯಾರ್ಥಿಗಳು ಹಾಗೂ ಪೋಷಕರ ಸಹಕಾರದೊಂದಿಗೆ ಜೂನ್ 21, 2026ರಂದು ಮರುಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಯಿತು ಎಂದು ಅವರು ಹೇಳಿದ್ದಾರೆ. ಮೊದಲ ದಿನದಿಂದಲೇ ಈ ಪ್ರಕರಣದ ಸಂಪೂರ್ಣ ಜವಾಬ್ದಾರಿಯನ್ನು ತಾವು ಹೊತ್ತಿದ್ದು, ಪರೀಕ್ಷಾ ಮಾಫಿಯಾದ ಕಾರಣ ಯಾವುದೇ ಪ್ರತಿಭಾವಂತ ವಿದ್ಯಾರ್ಥಿಯ ಭವಿಷ್ಯ ಹಾಳಾಗದಂತೆ ಹಾಗೂ ಯಾರಿಗೂ ಅನ್ಯಾಯವಾಗದಂತೆ ಕಾರ್ಯನಿರ್ವಹಿಸಿದ್ದಾಗಿ ಸ್ಪಷ್ಟಪಡಿಸಿದ್ದಾರೆ.

ಜುಲೈ 16ರಂದು ಪ್ರಕಟವಾದ NEET-UG ಫಲಿತಾಂಶ ತೃಪ್ತಿಕರವಾಗಿದ್ದು, ಬಡ ಹಿನ್ನೆಲೆಯ ಅನೇಕ ಪ್ರತಿಭಾವಂತ ವಿದ್ಯಾರ್ಥಿಗಳು ಯಶಸ್ಸು ಸಾಧಿಸಿರುವುದಾಗಿ ಅವರು ತಿಳಿಸಿದ್ದಾರೆ. ಆದರೆ ಈ ಅವಧಿಯಲ್ಲಿ ಕೆಲ ಜವಾಬ್ದಾರಿಯುತ ಹುದ್ದೆಗಳಲ್ಲಿ ಇರುವ ವ್ಯಕ್ತಿಗಳು ವಿದ್ಯಾರ್ಥಿಗಳನ್ನು ದಾರಿತಪ್ಪಿಸಲು ಪ್ರಯತ್ನಿಸಿದ್ದು, ಅದು ತಮ್ಮ ಮನಸ್ಸಿಗೆ ತೀವ್ರ ನೋವುಂಟು ಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.
ಕಳೆದ ಹತ್ತು ದಿನಗಳ ಬೆಳವಣಿಗೆಗಳು ತಮ್ಮನ್ನು ವೈಯಕ್ತಿಕವಾಗಿ ನೋಯಿಸಿವೆ. ಆದರೆ ಇದು ತಮ್ಮ ವೈಯಕ್ತಿಕ ಪ್ರತಿಷ್ಠೆಯ ವಿಚಾರವಲ್ಲ. ಭಾರತದ ಯುವಶಕ್ತಿಯೇ ದೇಶದ ನಿಜವಾದ ಶಕ್ತಿ. ಯುವಕರನ್ನು ಗೊಂದಲದ ಜಾಲದಲ್ಲಿ ಸಿಲುಕದಂತೆ ಮಾಡುವುದು ತಮ್ಮ ಸಂಕಲ್ಪವಾಗಿದೆ ಎಂದು ಅವರು ಹೇಳಿದ್ದಾರೆ.
ಜಂತರ್-ಮಂತರ್ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ನಿರ್ಮಾಣವಾಗಿರುವ ಪರಿಸ್ಥಿತಿಯನ್ನು ರಾಷ್ಟ್ರವಿರೋಧಿ ಶಕ್ತಿಗಳು ದುರುಪಯೋಗಪಡಿಸಿಕೊಳ್ಳಬಾರದು. ದೇಶದ ಏಕತೆ ಅಕ್ಷುಣ್ಣವಾಗಿರಬೇಕು. ಒಬ್ಬ ವಿದ್ಯಾರ್ಥಿಯ ಭವಿಷ್ಯವೂ ಕಾನೂನು ತೊಡಕುಗಳಲ್ಲಿ ಸಿಲುಕಬಾರದು. ವಿದ್ಯಾರ್ಥಿಗಳು ತಮ್ಮ ಸಮಯವನ್ನು ಓದು ಹಾಗೂ ವೃತ್ತಿಜೀವನ ನಿರ್ಮಾಣಕ್ಕೆ ಮೀಸಲಿಡಬೇಕು ಎಂಬ ಉದ್ದೇಶದಿಂದಲೇ ತಾವು ತಮ್ಮ ರಾಜೀನಾಮೆ ಪತ್ರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸಲ್ಲಿಸಿರುವುದಾಗಿ ಧರ್ಮೇಂದ್ರ ಪ್ರಧಾನ ತಿಳಿಸಿದ್ದಾರೆ.
ತಮ್ಮ ಮೇಲೆ ವಿಶ್ವಾಸವಿಟ್ಟು ಮಾರ್ಗದರ್ಶನ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳನ್ನು ಅರ್ಪಿಸಿರುವ ಅವರು, ಸಚಿವ ಸಂಪುಟದ ಸಹೋದ್ಯೋಗಿಗಳು, ಶಿಕ್ಷಣ ಸಚಿವಾಲಯದ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೇರಿದಂತೆ ತಮ್ಮೊಂದಿಗೆ ಕೆಲಸ ಮಾಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ. ರಾಷ್ಟ್ರಸೇವೆಯೇ ತಮ್ಮ ಜೀವನದ ಪರಮ ಗುರಿಯಾಗಿದ್ದು, ಮುಂದೆಯೂ ಭಾರತ ಮಾತೆ, ಒಡಿಶಾದ ಜನತೆ ಹಾಗೂ ದೇಶದ ಯುವಕರ ಆಶಯಗಳ ಈಡೇರಿಕೆಗೆ ತಮ್ಮನ್ನು ಸಮರ್ಪಿಸಿಕೊಳ್ಳುವುದಾಗಿ ಅವರು ಪತ್ರದ ಅಂತ್ಯದಲ್ಲಿ ತಿಳಿಸಿದ್ದಾರೆ.

