
ಬಿಜೆಪಿ ನೂತನ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿ ಬಿಡುಗಡೆ: ಕರ್ನಾಟಕದ ಇಬ್ಬರಿಗೆ ಪ್ರಮುಖ ಜವಾಬ್ದಾರಿ
ನವದೆಹಲಿ: ಮುಂಬರುವ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ನೂತನ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್ ಅವರ ನಿರ್ದೇಶನದಂತೆ ಪ್ರಕಟಿಸಿರುವ ಪಟ್ಟಿಯಲ್ಲಿ ದೇಶಾದ್ಯಂತ ಪಕ್ಷದ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಲಿರುವ 65 ಮಂದಿಗೆ ಸ್ಥಾನ ನೀಡಲಾಗಿದೆ. ಹೊಸ ನೇಮಕಾತಿಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ ಎಂದು ಪಕ್ಷದ ಕೇಂದ್ರ ಕಚೇರಿ ತಿಳಿಸಿದೆ.
ನೂತನ ಪಟ್ಟಿಯಲ್ಲಿ 13 ರಾಷ್ಟ್ರೀಯ ಉಪಾಧ್ಯಕ್ಷರು, 8 ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ 16 ರಾಷ್ಟ್ರೀಯ ಕಾರ್ಯದರ್ಶಿಗಳು ಸೇರಿದಂತೆ ಒಟ್ಟು 65 ಹುದ್ದೆಗಳಿಗೆ ನೇಮಕ ಮಾಡಲಾಗಿದೆ. ಹಿರಿಯ ಹಾಗೂ ಯುವ ನಾಯಕರಿಗೆ ಅವಕಾಶ ಕಲ್ಪಿಸಿರುವ ಬಿಜೆಪಿ, ವಿವಿಧ ರಾಜ್ಯಗಳಿಗೆ ಪ್ರಾದೇಶಿಕ ಪ್ರಾತಿನಿಧ್ಯ ನೀಡುವ ಮೂಲಕ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನ ನಡೆಸಿದೆ.
ಕರ್ನಾಟಕದ ಇಬ್ಬರಿಗೆ ಪ್ರಮುಖ ಸ್ಥಾನ
ನೂತನ ರಾಷ್ಟ್ರೀಯ ಪದಾಧಿಕಾರಿಗಳ ಪಟ್ಟಿಯಲ್ಲಿ ಕರ್ನಾಟಕದ ಇಬ್ಬರು ನಾಯಕರಿಗೆ ಪ್ರಮುಖ ಜವಾಬ್ದಾರಿ ದೊರೆತಿದೆ. ಕರ್ನಾಟಕದ ಪ್ರೊ. ಎಂ. ನಾಗರಾಜ್ ಅವರನ್ನು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ಇದೇ ವೇಳೆ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಬಿ.ಎಲ್. ಸಂತೋಷ್ ಅವರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಹುದ್ದೆಯಲ್ಲಿ ಮುಂದುವರಿದಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಸಂಘಟನೆಯಲ್ಲಿ ಕರ್ನಾಟಕದ ಇಬ್ಬರು ನಾಯಕರಿಗೆ ಪ್ರಮುಖ ಜವಾಬ್ದಾರಿ ನೀಡಿರುವುದು ರಾಜ್ಯದ ಪಕ್ಷದ ಸಂಘಟನಾ ವಲಯದಲ್ಲಿ ಗಮನ ಸೆಳೆದಿದೆ. ಇದೇ ವೇಳೆ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ರಾಷ್ಟ್ರೀಯ ಉಪಾಧ್ಯಕ್ಷೆಯಾಗಿ ಮುಂದುವರಿದಿದ್ದಾರೆ.
ಮಹಿಳೆಯರಿಗೆ ಹೆಚ್ಚಿನ ಪ್ರಾತಿನಿಧ್ಯ
ಬಿಜೆಪಿಯ ನೂತನ ರಾಷ್ಟ್ರೀಯ ತಂಡದಲ್ಲಿ ಮಹಿಳೆಯರಿಗೂ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ. 13 ರಾಷ್ಟ್ರೀಯ ಉಪಾಧ್ಯಕ್ಷರ ಪೈಕಿ 6 ಸ್ಥಾನಗಳನ್ನು ಮಹಿಳೆಯರಿಗೆ ನೀಡಲಾಗಿದ್ದು, ಒಬ್ಬ ಮಹಿಳೆಗೆ ಪ್ರಧಾನ ಕಾರ್ಯದರ್ಶಿ ಹಾಗೂ ನಾಲ್ವರಿಗೆ ರಾಷ್ಟ್ರೀಯ ಕಾರ್ಯದರ್ಶಿ ಹುದ್ದೆ ನೀಡಲಾಗಿದೆ. ಅಲ್ಲದೆ, ಇಬ್ಬರು ಮುಸ್ಲಿಂ ಸಮುದಾಯದ ನಾಯಕರಿಗೂ ರಾಷ್ಟ್ರೀಯ ಸಂಘಟನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ದಕ್ಷಿಣ ಹಾಗೂ ಈಶಾನ್ಯ ರಾಜ್ಯಗಳ ಮೇಲೂ ಬಿಜೆಪಿ ವಿಶೇಷ ಗಮನ ಹರಿಸಿದೆ. ಕೇರಳ, ಪಶ್ಚಿಮ ಬಂಗಾಳ, ಒಡಿಶಾ ಸೇರಿದಂತೆ ಈಶಾನ್ಯ ರಾಜ್ಯಗಳ ನಾಯಕರಿಗೆ ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿ ಹುದ್ದೆಗಳಲ್ಲಿ ಆದ್ಯತೆ ನೀಡಲಾಗಿದೆ. ಎಎಪಿ ತೊರೆದಿದ್ದ ಸಂದೀಪ್ ಪಾಠಕ್ ಅವರಿಗೆ ರಾಷ್ಟ್ರೀಯ ಕಾರ್ಯದರ್ಶಿ ಜವಾಬ್ದಾರಿ ನೀಡಲಾಗಿದ್ದು, ಸಂಬಿತ್ ಪಾತ್ರ ಅವರನ್ನು ಈಶಾನ್ಯ ರಾಜ್ಯಗಳ ಸಂಯೋಜಕರನ್ನಾಗಿ ನೇಮಿಸಲಾಗಿದೆ.
ರಾಷ್ಟ್ರೀಯ ಉಪಾಧ್ಯಕ್ಷರ ಪಟ್ಟಿ
ವಸುಂಧರಾ ರಾಜೇ, ತೀರಥ್ ಸಿಂಗ್ ರಾವತ್, ರಾಮ್ ಮಾಧವ್, ಬೈಜಯಂತ್ ಜಯ್ ಪಂಡಾ, ಡಿ. ಪುರಂದೇಶ್ವರಿ, ರೇಖಾ ವರ್ಮಾ, ವರ್ಷಾಬೆನ್ ನರೇಂದ್ರಭಾಯಿ ದೋಶಿ, ಡಾ. ಭಾರತಿ ಪ್ರವೀಣ್ ಪವಾರ್, ಸರ್ದಾರ್ ಮನಪ್ರೀತ್ ಸಿಂಗ್ ಬಾದಲ್, ಲಾಲ್ ಸಿಂಗ್ ಆರ್ಯ, ಪ್ರೊ. ಎಂ. ನಾಗರಾಜ್, ಪ್ರೊ. ತಾರಿಖ್ ಮನ್ಸೂರ್ ಹಾಗೂ ಡಾ. ಮಧುಚಂದ್ರಾ ಕರ್ ಅವರನ್ನು ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಪ್ರಧಾನ ಕಾರ್ಯದರ್ಶಿಗಳಾಗಿ 8 ಮಂದಿಗೆ ಜವಾಬ್ದಾರಿ
ವಿನೋದ್ ತಾವೆ, ಸುನಿಲ್ ಬನ್ಸಲ್, ಬಿಪ್ಲಬ್ ಕುಮಾರ್ ದೇವ್, ಸ್ಮೃತಿ ಇರಾನಿ, ಡಾ. ಸತೀಶ್ ಪೂನಿಯಾ, ಗಜೇಂದ್ರ ಪಟೇಲ್, ಹರೀಶ್ ದ್ವಿವೇದಿ ಹಾಗೂ ಸಂಜಯ್ ಭಾಟಿಯಾ ಅವರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ಬಿ.ಎಲ್. ಸಂತೋಷ್ ಅವರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
ರಾಷ್ಟ್ರೀಯ ಕಾರ್ಯದರ್ಶಿಗಳಾಗಿ ಕೆ. ಸುರೇಂದ್ರನ್, ಅನಿಲ್ ಆಂಟೋನಿ, ರೋಹನ್ ಗುಪ್ತಾ ಸೇರಿದಂತೆ 16 ಮಂದಿಗೆ ಜವಾಬ್ದಾರಿ ನೀಡಲಾಗಿದೆ. ಪಕ್ಷದ ವಿವಿಧ ಸಂಘಟನಾ ಚಟುವಟಿಕೆಗಳನ್ನು ಸಮನ್ವಯಗೊಳಿಸುವ ಹೊಣೆಗಾರಿಕೆಯನ್ನು ಈ ನಾಯಕರು ನಿರ್ವಹಿಸಲಿದ್ದಾರೆ.
ಇತರ ಪ್ರಮುಖ ನೇಮಕಾತಿಗಳು
ಪಿಯೂಷ್ ಗೋಯಲ್ ಅವರನ್ನು ರಾಷ್ಟ್ರೀಯ ಖಜಾಂಚಿಯಾಗಿ ಹಾಗೂ ರಾಜೇಶ್ ಮಂಗಲ್ ಅವರನ್ನು ರಾಷ್ಟ್ರೀಯ ಸಹ ಖಜಾಂಚಿಯಾಗಿ ನೇಮಕ ಮಾಡಲಾಗಿದೆ. ಕೇಂದ್ರ ಕಚೇರಿ ಉಸ್ತುವಾರಿಯಾಗಿ ತರುಣ್ ಚುಗ್, ಮಾಧ್ಯಮ ಸಂಚಾಲಕರಾಗಿ ಅನಿಲ್ ಬಲೂನಿ ಹಾಗೂ ಸಾಮಾಜಿಕ ಜಾಲತಾಣ ಸಂಚಾಲಕರಾಗಿ ದೀಪಕ್ ಮಾಸ್ಕ್ ಅವರಿಗೆ ಜವಾಬ್ದಾರಿ ನೀಡಲಾಗಿದೆ.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷರಾಗಿ ಡಾ. ಹೇಮಂಗ್ ಜೋಶಿ, ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ರೂಪ್ ಕುಮಾರಿ ಚೌಧರಿ, ಒಬಿಸಿ ಮೋರ್ಚಾ ಅಧ್ಯಕ್ಷರಾಗಿ ಅಮರ್ಪಾಲ್ ಮೌರ್ಯ, ಕಿಸಾನ್ ಮೋರ್ಚಾ ಅಧ್ಯಕ್ಷರಾಗಿ ಬನ್ಸಿಲಾಲ್ ಗುರ್ಜರ್, ಎಸ್ಸಿ ಮೋರ್ಚಾ ಅಧ್ಯಕ್ಷರಾಗಿ ಶಿವೇಶ್ ಕುಮಾರ್ ರಾಮ್, ಎಸ್ಟಿ ಮೋರ್ಚಾ ಅಧ್ಯಕ್ಷರಾಗಿ ಡಾ. ಮನ್ನಾಲಾಲ್ ರಾವತ್ ಹಾಗೂ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷರಾಗಿ ಕುನ್ವರ್ ಬಾಸಿತ್ ಅಲಿ ಅವರನ್ನು ನೇಮಕ ಮಾಡಲಾಗಿದೆ.

