
ಕುಂದಗೋಳ:ವಿಧಾನಸಭೆ ಉತ್ತರ ಕರ್ನಾಟಕದ ಅಭಿವೃದ್ಧಿ ಹಾಗೂ ರೈತರ ಸಂಕಷ್ಟ ನಿವಾರಣೆ ಕುರಿತು ಕುಂದಗೋಳ ಶಾಸಕ ಎಮ್. ಆರ್. ಪಾಟೀಲ್ ಅವರು ಶುಕ್ರವಾರ ಚಳಿಗಾಲದ ಅಧಿವೇಶನದಲ್ಲಿ
ಈ ಭಾಗದ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಗಂಭೀರ ವಿಷಯಗಳನ್ನು ಪ್ರಸ್ತಾಪಿಸಿದರು.
ರಸ್ತೆ ಕೊರತೆ, ಬೆಳೆ ನಷ್ಟದ ಸಂಕಷ್ಟ
ಉತ್ತರ ಕರ್ನಾಟಕವು ಪ್ರಧಾನವಾಗಿ ಕೃಷಿ ಮತ್ತು ಉದ್ದಿಮೆ ಆಧಾರಿತ ಪ್ರದೇಶವಾಗಿದೆ. ಇಲ್ಲಿ ಕಪ್ಪು ಭೂಮಿ ಹೇರಳವಾಗಿದ್ದರೂ, ಉತ್ತಮ ಬೆಳೆ ಬಂದರೂ ಅದನ್ನು ಮಾರುಕಟ್ಟೆಗೆ ಸಾಗಿಸಲು ರಸ್ತೆಗಳು ಇಲ್ಲದಿರುವುದರಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಈ ಹಿಂದೆ ಇದ್ದ ‘ನಮ್ಮ ಹೊಲ ನಮ್ಮ ರಸ್ತೆ’ ಯೋಜನೆ ಸ್ಥಗಿತಗೊಂಡಿದ್ದು, ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಹೆಚ್ಚಿನ ಅನುದಾನ ನೀಡಿ ತುರ್ತಾಗಿ ರಸ್ತೆಗಳನ್ನು ಸುಧಾರಿಸಬೇಕು ಎಂದು ಮನವಿ ಮಾಡಿದರು.
“ಬೆಂಬಲ ಬೆಲೆಗೆ ಹೆಚ್ಚುವರಿ ಖರೀದಿ ಒತ್ತಾಯ”
ಈ ಸಲ ಧಾರವಾಡ ಜಿಲ್ಲೆಯಲ್ಲಿ ಅತಿವೃಷ್ಟಿಯಾಗಿ ಬೆಳೆ ವಿಫಲವಾಗಿದೆ. ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿದರೂ, ಸಂಪೂರ್ಣ ಬೆಳೆಯನ್ನು ಖರೀದಿಸಬೇಕು. ಪ್ರಸ್ತುತ 20 ಕ್ವಿಂಟಾಲ್ಗೆ ಮಿತಿ ನಿಗದಿಪಡಿಸಿದ್ದರೂ (ಹಿಂದೆ 5 ಕ್ವಿಂಟಾಲ್ ಇತ್ತು), ಧಾರವಾಡ ಜಿಲ್ಲೆಗೆ ಘೋಷಿಸಲಾಗಿರುವ ಕೇವಲ 2,000 ಮೆಟ್ರಿಕ್ ಟನ್ ಖರೀದಿ ಗುರಿ ಸಾಕಾಗುವುದಿಲ್ಲ. ಇದನ್ನು ಕನಿಷ್ಠ 25,000 ಮೆಟ್ರಿಕ್ ಟನ್ಗೆ ಹೆಚ್ಚಿಸಬೇಕು ಎಂದು ಆಗ್ರಹಿಸಿದರು. ಗದಗ, ಹಾವೇರಿಯಲ್ಲಿ 50 ಕ್ವಿಂಟಾಲ್ ಖರೀದಿ ಆರಂಭವಾಗಿದ್ದರೂ ಧಾರವಾಡದಲ್ಲಿ ಆಗಿಲ್ಲ. ಇದನ್ನು ತಕ್ಷಣ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.
ಐಟಿ-ಬಿಟಿ ವಿಸ್ತರಣೆ ಮತ್ತು ಅಭಿವೃದ್ಧಿ ಮಂಡಳಿ
ಉದ್ಯೋಗ ಸೃಷ್ಟಿಗಾಗಿ ಬೆಂಗಳೂರಿನಲ್ಲಿ ಮಾತ್ರ ಕೇಂದ್ರೀಕೃತವಾಗಿರುವ ಐಟಿ-ಬಿಟಿ ಉದ್ದಿಮೆಗಳನ್ನು ಧಾರವಾಡ, ಹುಬ್ಬಳ್ಳಿ, ಬೆಳಗಾವಿ ಕಡೆಗೆ ವಿಸ್ತರಿಸಬೇಕು. ಇದರಿಂದ ಕಡಿಮೆ ದರದಲ್ಲಿ ಭೂಮಿ ಮತ್ತು ಶ್ರಮ ಲಭ್ಯವಾಗಿ ಉದ್ಯೋಗ ಸೃಷ್ಟಿ ಸಾಧ್ಯ. ಅಲ್ಲದೆ, ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ರಚಿಸಿ ₹5,000 ಕೋಟಿ ಅನುದಾನ ಮತ್ತು ಬಯಲುಸೀಮೆ ಅಭಿವೃದ್ಧಿ ಮಂಡಳಿಯ ಅನುದಾನವನ್ನು ₹35 ಲಕ್ಷದಿಂದ ₹50 ಕೋಟಿಗೆ ಹೆಚ್ಚಿಸಬೇಕು.
ಉದ್ಯೋಗಾವಕಾಶವಿಲ್ಲದೆ ಬೀದಿಗಿಳಿದಿರುವ ವಿದ್ಯಾರ್ಥಿಗಳಿಗೆ ನೇಮಕಾತಿಗಳನ್ನು ಪ್ರಾರಂಭಿಸುವಂತೆ ಶಾಸಕರು ಸರ್ಕಾರಕ್ಕೆ ಬಲವಾಗಿ ಆಗ್ರಹಿಸಿದರು.

