ಧಾರವಾಡ ಜಿಲ್ಲೆಯಲ್ಲಿ ರೌಡಿ ಶೀಟರ್‌ಗಳ ಮನೆಗಳ ಮೇಲೆ ಪೊಲೀಸ್ ಪರಿಶೀಲನೆ: 47 ಮಂದಿಗೆ ಎಚ್ಚರಿಕೆ

Spread the love

ಧಾರವಾಡ: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ರೌಡಿ ಸ್ಕ್ವಾಡ್ ವತಿಯಿಂದ ಬುಧವಾರ ಮುಂಜಾಗ್ರತಾ ಕ್ರಮವಾಗಿ ರೌಡಿ ಶೀಟರ್‌ಗಳ ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.

ಜಿಲ್ಲಾ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಧಾರವಾಡ ಗ್ರಾಮೀಣ ಉಪವಿಭಾಗದ ಡಿ.ಎಸ್.ಪಿ., ಸಿ.ಪಿ.ಐ., ಪಿ.ಐ., ಪಿ.ಎಸ್.ಐ. ಹಾಗೂ ಪೊಲೀಸ್ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಪರಿಶೀಲನೆ ವೇಳೆ ರೌಡಿ ಶೀಟರ್‌ಗಳ ಮನೆಗಳಲ್ಲಿ ಮಾರಕಾಸ್ತ್ರಗಳು ಸೇರಿದಂತೆ ಅನುಮಾನಾಸ್ಪದ ವಸ್ತುಗಳಿಗಾಗಿ ತಪಾಸಣೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಹೊಲ್ತಿಕೋಟಿ ಗ್ರಾಮದ ಒಬ್ಬ ರೌಡಿ ಶೀಟರ್‌ನ ಮನೆಯಲ್ಲಿ ಸಾಗವಾನಿ ಮರದ ದಿಮ್ಮಿ ಹಾಗೂ ಸೀಸಂ ಮರದ ಕಟ್ಟಿಗೆಯ ತುಂಡುಗಳು ಪತ್ತೆಯಾಗಿವೆ. ಅವುಗಳಿಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಬಳಿಕ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಧಾರವಾಡ ಜಿಲ್ಲಾ ವ್ಯಾಪ್ತಿಯಲ್ಲಿ ಒಟ್ಟು 47 ರೌಡಿ ಶೀಟರ್‌ಗಳ ಮನೆಗಳನ್ನು ಪರಿಶೀಲನೆಗೊಳಪಡಿಸಲಾಗಿದ್ದು, ಈ ವೇಳೆ ಅವರಿಗೆ ಕಾನೂನು ಅರಿವು ಮೂಡಿಸುವುದರ ಜೊತೆಗೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.

Leave a Reply

Your email address will not be published. Required fields are marked *