
ಧಾರವಾಡ, ಜೂ.11: ನಗರಗಳ ಅಭಿವೃದ್ಧಿಯೊಂದಿಗೆ ಗ್ರಾಮಗಳ ಸಮಗ್ರ ಅಭಿವೃದ್ಧಿಗೂ ಹೆಚ್ಚಿನ ಆದ್ಯತೆ ನೀಡಬೇಕು. ಗ್ರಾಮೀಣಾಭಿವೃದ್ಧಿಗೆ ಅಧಿಕಾರಿಗಳು ಜವಾಬ್ದಾರಿಯುತವಾಗಿ ಹಾಗೂ ಮುತುವರ್ಜಿಯಿಂದ ಕಾರ್ಯನಿರ್ವಹಿಸಬೇಕು ಎಂದು ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ. ರಾಮ್ ಪ್ರಸಾತ್ ಮನೋಹರ ವಿ. ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯ ನೂತನ ಸಭಾಂಗಣದಲ್ಲಿ ಗುರುವಾರ ನಡೆದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮಗಳ ಅಭಿವೃದ್ಧಿಯೇ ನಿಜವಾದ ಅಭಿವೃದ್ಧಿಯಾಗಿದ್ದು, ಜಿಲ್ಲೆಯ ಪ್ರತಿಯೊಂದು ಗ್ರಾಮದ ಸಮಗ್ರ ಬೆಳವಣಿಗೆಗೆ ಪೂರಕವಾಗುವ ಕಾಮಗಾರಿಗಳನ್ನು ಕೈಗೊಳ್ಳಬೇಕು. ವಿಶೇಷವಾಗಿ ಗುಣಮಟ್ಟದ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಲಭ್ಯವಿರುವ ಅನುದಾನಕ್ಕೆ ಅನುಗುಣವಾಗಿ ಅಭಿವೃದ್ಧಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಹೇಳಿದರು.
ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯನಿರ್ವಹಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಮೇಲ್ವಿಚಾರಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಸೂಚಿಸಿದರು.
ಎಂ.ಜಿ. ನರೇಗಾ ಯೋಜನೆಯ ಬದಲಾಗಿ ಜುಲೈ 1ರಿಂದ ವಿಬಿಜಿ ರಾಮಜಿ ಯೋಜನೆ ಜಾರಿಯಾಗಲಿದ್ದು, ಹೊಸ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು. ಅಧಿಕಾರಿಗಳು ಗ್ರಾಮಗಳಿಗೆ ಖುದ್ದಾಗಿ ಭೇಟಿ ನೀಡಿ ಕಾಮಗಾರಿಗಳ ಪ್ರಗತಿಯನ್ನು ಪರಿಶೀಲಿಸಬೇಕು. ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನಡೆಯುವ ಕಾಮಗಾರಿಗಳ ಮೇಲ್ವಿಚಾರಣೆಯನ್ನು ಪಿಡಿಒಗಳು ಕಟ್ಟುನಿಟ್ಟಾಗಿ ನಡೆಸಬೇಕು ಎಂದು ತಿಳಿಸಿದರು.

ರೈತರಿಂದ ಯಾವುದೇ ರೀತಿಯ ದೂರುಗಳು ಬಾರದಂತೆ ನೋಡಿಕೊಳ್ಳಬೇಕು. ಸರ್ಕಾರದ ವಿವಿಧ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಕ್ರಮವಹಿಸಬೇಕು. ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಶುದ್ಧ ಕುಡಿಯುವ ನೀರು, ಗುಣಮಟ್ಟದ ಆಹಾರ ಹಾಗೂ ಉತ್ತಮ ಶಿಕ್ಷಣ ಸೌಲಭ್ಯ ದೊರೆಯುವಂತೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕು. ವಸತಿ ನಿಲಯಗಳಲ್ಲಿ ಸ್ವಚ್ಛತೆ ಮತ್ತು ಆರೋಗ್ಯಕರ ವಾತಾವರಣಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಮಳೆಗಾಲದಲ್ಲಿ ವಿದ್ಯುತ್ ಕಂಬಗಳು ನೆಲಕ್ಕುರುಳುವ ಸಾಧ್ಯತೆ ಇರುವುದರಿಂದ ಅಪಾಯಕಾರಿಯಾಗಿ ನಿಂತಿರುವ ವಿದ್ಯುತ್ ಕಂಬಗಳನ್ನು ಕೂಡಲೇ ತೆರವುಗೊಳಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ನಿರಂತರ ಹಾಗೂ ಸಮರ್ಪಕ ವಿದ್ಯುತ್ ಪೂರೈಕೆಗೆ ಹೆಚ್ಚಿನ ಗಮನ ಹರಿಸಬೇಕು. ವಿದ್ಯುತ್ ಅವಘಡಗಳನ್ನು ತಡೆಯಲು ಹೆಸ್ಕಾಂ ಅಧಿಕಾರಿಗಳು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭುವನೇಶ ಪಾಟೀಲ ಹಾಗೂ ಪ್ರೊಬೇಷನರಿ ಐಎಎಸ್ ಅಧಿಕಾರಿ ಅನುಪ್ರಿಯಾ ಸಾಕ್ಯಾ ಉಪಸ್ಥಿತರಿದ್ದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಕೆ.ಸಿ. ಭದ್ರಣ್ಣವರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸೇರಿದಂತೆ ಜಿಲ್ಲೆಯ ಎಲ್ಲಾ ತಾಲೂಕುಗಳ ತಹಶೀಲ್ದಾರರು, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

