
ಧಾರವಾಡ: ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡುವ ವೀರ ಸೈನಿಕರು ಮತ್ತು ಅವರ ಕುಟುಂಬದ ಸದಸ್ಯರು ಕಾನೂನಿನ ತೊಡಕುಗಳಲ್ಲಿ ಸಿಲುಕಿ ತೊಂದರೆ ಅನುಭವಿಸಬಾರದು ಎಂಬ ಉದ್ದೇಶದಿಂದ ಉಚಿತ ಕಾನೂನು ಸೇವೆಗಳ ಕ್ಲಿನಿಕ್ಗಳನ್ನು ಪ್ರಾರಂಭಿಸಲಾಗಿದೆ ಎಂದು ಧಾರವಾಡದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಭಾರತಿ ಬಿ.ಎಸ್. ಹೇಳಿದರು.
ಸೆಪ್ಟೆಂಬರ್ 15ರಂದು ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ವೀರ ಪರಿವಾರ ಸಹಾಯ ಯೋಜನೆ-2025’ರ ಅಡಿಯಲ್ಲಿ ಉಚಿತ ಕಾನೂನು ಸೇವೆಗಳ ಕ್ಲಿನಿಕ್ ಅನ್ನು ಅವರು ವರ್ಚುವಲ್ ಆಗಿ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಹಾಗೂ ಧಾರವಾಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಧಾರವಾಡ ವಕೀಲರ ಸಂಘ ಮತ್ತು ಧಾರವಾಡ ಸೈನಿಕ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಈ ಕ್ಲಿನಿಕ್ ಅನ್ನು ತೆರೆಯಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪರಶುರಾಮ ಎಫ್. ದೊಡ್ಡಮನಿ, ಮಾಜಿ ಸೈನಿಕರು, ಅವರ ಕುಟುಂಬದವರು ಹಾಗೂ ಇಲಾಖೆಯ ಸಿಬ್ಬಂದಿ ಹಾಜರಿದ್ದರು.

