ಕುಂದಗೋಳ ಲೋಕ ಅದಾಲತ್: 13 ವರ್ಷದ ಆಸ್ತಿ ವಿವಾದ ಇತ್ಯರ್ಥ; ವಿಚ್ಛೇದನ ಪ್ರಕರಣಗಳಲ್ಲೂ ರಾಜೀ

Spread the love

ಕುಂದಗೋಳ: ನ್ಯಾಯಾಲಯಗಳಲ್ಲಿ ರಾಜಿ ಸಂಧಾನದ ಮೂಲಕ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಪಡಿಸುವ ಉದ್ದೇಶದಿಂದ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಹಲವು ಮಹತ್ವದ ಪ್ರಕರಣಗಳು ಇತ್ಯರ್ಥಗೊಂಡವು. ಇಲ್ಲಿ ನ್ಯಾಯಾಧೀಶರ ಮಾನವೀಯ ಸ್ಪರ್ಶ ಮತ್ತು ಮಾರ್ಗದರ್ಶನದಿಂದಾಗಿ, ಹದಿಮೂರು ವರ್ಷಗಳ ಹಳೆಯ ಆಸ್ತಿ ವಿವಾದವೊಂದು ಸುಖಾಂತ್ಯ ಕಂಡಿದ್ದು, ವಿಚ್ಛೇದನ ಕೋರಿದ್ದ ಮೂರು ದಂಪತಿಗಳು ಮತ್ತೆ ಒಂದಾದರು. ನ್ಯಾಯಾಂಗ ಇತಿಹಾಸದಲ್ಲಿ ಇದೊಂದು ಉತ್ತಮ ಬೆಳವಣಿಗೆಯಾಗಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ವಿಚ್ಛೇದನಕ್ಕಿದ್ದ ಮೂರು ಜೋಡಿಗಳು ಮತ್ತೆ ಒಂದಾದವು
ಹಿರಿಯ ಸಿವಿಲ್ ನ್ಯಾಯಾಧೀಶರಾದ ಅಬ್ದುಲ್ ಖಾದರ್ ಅವರ ಸಲಹೆಯ ಮೇರೆಗೆ, ಹೊಂದಾಣಿಕೆಯಾಗುತ್ತಿಲ್ಲವೆಂದು ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ ಮೂರು ದಂಪತಿಗಳು ಮತ್ತೆ ಒಂದಾದರು. ನ್ಯಾಯಾಧೀಶರು ಸ್ವತಃ ಅವರಿಗೆ ಪರಸ್ಪರ ಹೂವಿನ ಮಾಲೆ ಹಾಕಿಸಿ ರಾಜೀ ಸಂಧಾನ ಮಾಡಿಸಿದರು. ನ್ಯಾಯಾಲಯದಲ್ಲಿ ಸಂಸಾರವನ್ನು ಮತ್ತೆ ಕಟ್ಟಿಕೊಟ್ಟ ನ್ಯಾಯಾಧೀಶರ ಕಾರ್ಯಕ್ಕೆ ದಂಪತಿಗಳು ಸಂತೋಷ ವ್ಯಕ್ತಪಡಿಸಿ ಧನ್ಯವಾದ ಅರ್ಪಿಸಿದರು. ಹಿರಿಯ ಸಿವಿಲ್ ನ್ಯಾಯಾಧೀಶರಾದ ಅಬ್ದುಲ್ ಖಾದರ್ ಅವರು ಒಟ್ಟು 563 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದು, ಅವುಗಳಲ್ಲಿ ಕಂಪೌಂಡಬಲ್, ಚೆಕ್ ಬೌನ್ಸ್, ಬ್ಯಾಂಕ್, ಇಸಿಎ, ಎಂಸಿ, ಅಸಲು ದಾವಾ, ಎಫ್‌ಡಿಪಿ, ಎಂವಿ ಸಿ, 125 ಸಿಆರ್‌ಪಿಸಿ ಮತ್ತು ಸಣ್ಣಪುಟ್ಟ ಪ್ರಕರಣಗಳು ಸೇರಿವೆ. ಇದರ ಮೂಲಕ 70,27,355 ರೂ. ಪರಿಹಾರ ಧನ ವಿತರಿಸಲಾಯಿತು.

ವೃದ್ಧರ ಮನೆಗೇ ತೆರಳಿ ಆಸ್ತಿ ವಿವಾದ ಇತ್ಯರ್ಥ
ಸ್ಥಳೀಯ ಜೆಎಂಎಫ್‌ಸಿ ಕಿರಿಯ ದಿವಾಣಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಗಾಯತ್ರಿ ಅವರು, ನ್ಯಾಯಾಲಯಕ್ಕೆ ಬರಲು ಅಸಾಧ್ಯವಾಗಿದ್ದ ವೃದ್ಧರೊಬ್ಬರ ಮನವಿ ಮೇರೆಗೆ ಅವರ ಮನೆಗೆ ಭೇಟಿ ನೀಡಿ, 13 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಆಸ್ತಿ ಹಂಚಿಕೆ ವ್ಯಾಜ್ಯವನ್ನು ವಿಚಾರಣೆ ನಡೆಸಿ ಇತ್ಯರ್ಥಪಡಿಸಿದರು.

ನ್ಯಾಯಾಧೀಶರ ಈ ಮಾನವೀಯ ಕಾರ್ಯಕ್ಕೆ ವ್ಯಾಜ್ಯದ ಕಕ್ಷಿದಾರರು ಹಾಗೂ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಇದೇ ಲೋಕ ಅದಾಲತ್‌ನಲ್ಲಿ ವಿವಿಧ ಆಸ್ತಿ ವಿವಾದಗಳು ಸೇರಿದಂತೆ ಹಲವು ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಯಿತು. ಕಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಗಾಯತ್ರಿಯವರು ಒಟ್ಟು 152 ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದು, ಇದರಲ್ಲಿ ಬ್ಯಾಂಕ್ ಸೂಟೋ ಕೇಸ್‌, ಅಸಲು ದಾವಾ, ಎಫ್‌ಡಿಪಿ, ಎಕ್ಸಿಕ್ಯೂಷನ್, ಇತರೆ ಸಿವಿಲ್ ಕೇಸ್‌ಗಳು, 125 ಸಿಆರ್‌ಪಿಸಿ ಕೇಸ್‌, ಹುಟ್ಟು-ಸಾವು ನೋಂದಣಿ, ಪಟ್ಟಿ ಹಾಗೂ ಇತರೆ ಕ್ರಿಮಿನಲ್ ಕೇಸ್‌ಗಳು ಸೇರಿದ್ದು, ಒಟ್ಟು 7,26,356 ರೂ. ಪರಿಹಾರ ವಿತರಿಸಲಾಯಿತು.

Leave a Reply

Your email address will not be published. Required fields are marked *