ಕುಂದಗೋಳ ತಾ.ಪಂ ನಿರ್ಲಕ್ಷ್ಯಕ್ಕೆ ಅಮಾಯಕ ಜೀವಗಳು ಬಲಿ ಬೇಕೇ?ಚರಂಡಿಗಿಂತ ಕಡೆಯಾದ ಸರ್ಕಾರಿ ಕಚೇರಿಗಳ ಸ್ಥಿತಿ ಕಂಡು ಸಾರ್ವಜನಿಕರ ಆಕ್ರೋಶ!

Spread the love


ಕುಂದಗೋಳ:ತಾಲೂಕಿನ ವಿವಿಧ ಇಲಾಖೆಗಳ ಸರ್ಕಾರಿ ಸಂಕೀರ್ಣ ಕಟ್ಟಡದಲ್ಲಿ ಕಾರ್ಯನಿರ್ವಹಿಸುವ ಉದ್ಯೋಗಿಗಳು ಹಾಗೂ ಅಲ್ಲಿಗೆ ಬರುವ ಸಾರ್ವಜನಿಕರು ಕಲುಷಿತ ನೀರಿನಿಂದ ರೋಗಪೀಡಿತರಾಗುವ ಭೀತಿಯಲ್ಲಿದ್ದಾರೆ. ಸುಮಾರು 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಭವ್ಯ ಕಟ್ಟಡವು, ಸಮರ್ಪಕ ನಿರ್ವಹಣೆಯಿಲ್ಲದೆ ಇದೀಗ ರೋಗಗಳ ಕಾರ್ಖಾನೆಯಾಗಿ ಪರಿವರ್ತನೆಯಾಗಿರುವುದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಲೋಕೋಪಯೋಗಿ ಇಲಾಖೆಯಿಂದ ನಿರ್ಮಿಸಲಾದ ತಾಲೂಕು ಪಂಚಾಯಿತಿ ವ್ಯಾಪ್ತಿಯ ಈ ಸರ್ಕಾರಿ ಸಂಕೀರ್ಣದಲ್ಲಿ ಅರಣ್ಯ ಇಲಾಖೆ, ಶಿಶು ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸೇರಿದಂತೆ ಒಟ್ಟು ಐದು ಪ್ರಮುಖ ಇಲಾಖೆಗಳು ಕಾರ್ಯನಿರ್ವಹಿಸುತ್ತಿವೆ. ಆದರೆ, ಈ ಕಟ್ಟಡಕ್ಕೆ ನೀರು ಸರಬರಾಜು ಮಾಡುವ ಸಿಂಟ್ಯಾಕ್ಸ್ ಟ್ಯಾಂಕ್‌ಗಳ ಸ್ಥಿತಿ ಅತೀವ ಅಸಹ್ಯಕರವಾಗಿದೆ.

ಟ್ಯಾಂಕ್‌ಗಳಲ್ಲಿ ಹುಳುಗಳು ತುಂಬಿದ್ದು, ಸತ್ತ ಹುಳುಗಳು ನೀರಿನಲ್ಲೇ ಕೊಳೆತು ಕೆಸರು ಹಾಗೂ ಶಿಲೀಂಧ್ರ (Fungus) ಉತ್ಪತ್ತಿಯಾಗಿರುವುದು ಕಂಡುಬಂದಿದೆ. ಇದೇ ಕಲುಷಿತ ನೀರನ್ನು ಉದ್ಯೋಗಿಗಳು ಹಾಗೂ ಸಾರ್ವಜನಿಕರು ದಿನನಿತ್ಯ ಬಳಸುತ್ತಿರುವುದು ಆರೋಗ್ಯದ ದೃಷ್ಟಿಯಿಂದ ಅತ್ಯಂತ ಅಪಾಯಕಾರಿಯಾಗಿದೆ.

ಚರಂಡಿಗಿಂತ ಕಡೆಯಾದ ಕಟ್ಟಡದ ಮೇಲ್ಬಾವಣಿ

ಕಟ್ಟಡದ ಮೇಲ್ಬಾವಣಿಯ ಸ್ಥಿತಿ ಚರಂಡಿಗಿಂತಲೂ ಹೀನಾಯವಾಗಿದ್ದು, ಎಲ್ಲೆಂದರಲ್ಲಿ ಕೊಳಚೆ, ಕೀಟಗಳು ಹಾಗೂ ದುರ್ವಾಸನೆ ಆವರಿಸಿಕೊಂಡಿವೆ. ಇದೇ ಕಟ್ಟಡದಲ್ಲೇ ಶಾಸಕರಾದ ಎಂ.ಆರ್. ಪಾಟೀಲ್ ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಸತೀಶ್ ಕೊಬ್ಬಯ್ಯನವರ ಕಚೇರಿಗಳೂ ಇದ್ದರೂ, ಕಟ್ಟಡದ ದುಸ್ಥಿತಿಯತ್ತ ಯಾರೂ ಗಮನಹರಿಸದಿರುವುದು ಅಚ್ಚರಿಯ ವಿಷಯವಾಗಿದೆ.

ಕಿಟಕಿಗಳ ಗಾಜುಗಳು ಒಡೆದು ಹೋಗಿದ್ದು, ವಿದ್ಯುತ್ ವೈರಿಂಗ್ ಅವ್ಯವಸ್ಥಿತವಾಗಿದೆ. ಸ್ವಚ್ಛತೆ ಎಂಬುದು ಇಲ್ಲಿ ಕೇವಲ ಮಾತಿನ ಮಟ್ಟಕ್ಕೆ ಸೀಮಿತವಾಗಿರುವಂತಾಗಿದೆ.

ಐದು ಇಲಾಖೆಗಳಿಂದ ಪ್ರತಿ ತಿಂಗಳು ಸಾವಿರಾರು ರೂಪಾಯಿ ಬಾಡಿಗೆ ಸಂಗ್ರಹಿಸುತ್ತಿರುವ ತಾಲೂಕು ಪಂಚಾಯಿತಿ, ಕಳೆದ ಎರಡು ವರ್ಷಗಳಿಂದ ಕಟ್ಟಡದ ನಿರ್ವಹಣೆಯ ವಿಚಾರದಲ್ಲಿ ಸಂಪೂರ್ಣವಾಗಿ ಕುರುಡಾಗಿ ವರ್ತಿಸುತ್ತಿದೆ. ಯಾವುದೇ ಅಧಿಕಾರಿಯೂ ಸಮಸ್ಯೆಯತ್ತ ಕಣ್ಣೆತ್ತಿ ನೋಡದಿರುವುದು ಆಡಳಿತದ ಬೇಜವಾಬ್ದಾರಿತನಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ.

ಸಾರ್ವಜನಿಕರ ತೆರಿಗೆ ಹಣದಲ್ಲಿ ನಿರ್ಮಿಸಲಾದ ಕಟ್ಟಡವನ್ನು ರೋಗಗಳ ತಾಣವನ್ನಾಗಿ ಮಾಡಿರುವ ಅಧಿಕಾರಿಗಳ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ತುರ್ತಾಗಿ ಸ್ವಚ್ಛತಾ ಮತ್ತು ನಿರ್ವಹಣಾ ಕಾರ್ಯ ಕೈಗೊಳ್ಳುತ್ತಾರೆಯೇ, ಅಥವಾ ಸಾಂಕ್ರಾಮಿಕ ರೋಗ ಹರಡುವವರೆಗೂ ಕಾಯುತ್ತಾರೆಯೇ ಎಂಬ ಪ್ರಶ್ನೆ ಇದೀಗ ಎಲ್ಲರ ಮನದಲ್ಲಿ ಮೂಡಿದೆ.


Leave a Reply

Your email address will not be published. Required fields are marked *