
ಧಾರವಾಡ: ಪ್ರಸ್ತುತ ದಿನಗಳಲ್ಲಿ ಸಾರ್ವಜನಿಕರು ಮಾತ್ರವಲ್ಲದೆ ಸರ್ಕಾರಿ ನೌಕರರು ಕೂಡ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿಲ್ಲ. ಈ ಕಾರಣಕ್ಕಾಗಿಯೇ ಸೈಬರ್ ವಂಚನೆಗಳು ದಿನೇದಿನೇ ಹೆಚ್ಚಾಗುತ್ತಿವೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು. ಅಕ್ಷರಸ್ಥರೇ ಹೆಚ್ಚು ಮೋಸ ಹೋಗುತ್ತಿದ್ದು, ತಾಂತ್ರಿಕ ಜ್ಞಾನ ಮತ್ತು ಮೊಬೈಲ್ ಬಳಕೆ ಬಗ್ಗೆ ಸಾಮಾನ್ಯ ತಿಳುವಳಿಕೆ ಅತ್ಯಗತ್ಯ ಎಂದು ಅವರು ಅಭಿಪ್ರಾಯಪಟ್ಟರು.
ಅವರು ಮಂಗಳವಾರದಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ವತಿಯಿಂದ ಸರ್ಕಾರಿ ನೌಕರರಿಗಾಗಿ ಆಯೋಜಿಸಿದ್ದ ಆರ್ಥಿಕ ವಂಚನೆ, ಸೈಬರ್ ಕ್ರೈಮ್, ಡಿಜಿಟಲ್ ಅರೆಸ್ಟ್ ಕುರಿತು ಮತ್ತು ಕೆಜಿಐಡಿ ಸೌಲಭ್ಯಗಳ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಲಾಖೆಯಲ್ಲಿರುವ ಎಲ್ಲ ಅಧಿಕಾರಿಗಳು ತಮ್ಮ ಸಂಬಂಧಪಟ್ಟ ಹುದ್ದೆಯ ಅರ್ಹತೆ ಮತ್ತು ಇತರ ಇಲಾಖೆಗಳ ಬಗ್ಗೆಯೂ ಮಾಹಿತಿಯನ್ನು ತಿಳಿದುಕೊಂಡಿರಬೇಕು. ಮೇಲಾಧಿಕಾರಿಗಳು ಕೆಳ ವರ್ಗದ ಸಿಬ್ಬಂದಿಗಳಿಗೆ ಯಾವ ರೀತಿ ತರಬೇತಿಯ ಅವಶ್ಯಕತೆ ಇದೆ ಎಂಬುದನ್ನು ತಿಳಿದುಕೊಂಡು ಕಾರ್ಯಗಾರಗಳ ಮೂಲಕ ತರಬೇತಿಯನ್ನು ನೀಡುವುದು ಸೂಕ್ತ. ಪ್ರತಿಯೊಂದು ಹಂತದಲ್ಲಿಯೂ ಸಿಬ್ಬಂದಿ ವರ್ಗದವರಿಗೆ ಕಾರ್ಯಗಾರ ಮುಖಾಂತರ ತರಬೇತಿ ನೀಡಿದರೆ ಉತ್ತಮ ಎಂದು ಹೇಳಿದರು. ಯಾವ ರೀತಿಯ ತರಬೇತಿ ಬೇಕು ಎಂಬುದನ್ನು ಎಲ್ಲ ಇಲಾಖೆಯವರು ತಿಳಿಸಿದರೆ, ಜಿಲ್ಲಾಡಳಿತದಿಂದ ಎಲ್ಲ ಅನುಕೂಲವನ್ನು ಮಾಡಿಕೊಡುತ್ತೇವೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಭರವಸೆ ನೀಡಿದರು.
ಸೈಬರ್ ಜಾಗೃತಿ ಅಗತ್ಯ:
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಹಿರಿಯ ಪೊಲೀಸ್ ಅಧಿಕಾರಿ, ಸಿಇಎನ್ ಪೊಲೀಸ್ ಠಾಣೆಯ ಡಿವೈಎಸ್ಪಿ ಶಿವಾನಂದ ಕಟಗಿ ಅವರು ಮಾತನಾಡಿ, ಇಂದಿನ ಕಾಲದಲ್ಲಿ ಸೈಬರ್ ಜಾಗೃತಿ ಅತ್ಯಂತ ಅಗತ್ಯವಾದ ಕೌಶಲ್ಯವಾಗಿದೆ. ಮಾನವೀಯ ಸಂಬಂಧಗಳು, ಬ್ಯಾಂಕಿಂಗ್ ವ್ಯವಸ್ಥೆಗಳು, ವ್ಯಾಪಾರ ವಹಿವಾಟು ಎಲ್ಲವೂ ಡಿಜಿಟಲ್ ಆಗುತ್ತಿರುವ ಈ ಯುಗದಲ್ಲಿ ವಂಚನೆಗಳ ರೂಪವೇ ಬದಲಾಗಿದೆ. ನಾವು ಜಾಗೃತರಾಗಿರದಿದ್ದರೆ, ಅಪರಾಧಿಗಳು ಕೆಲವೇ ಕ್ಷಣಗಳಲ್ಲಿ ನಮ್ಮ ಸಂಪೂರ್ಣ ಹಣವನ್ನು ದೋಚಬಹುದು ಎಂದು ಎಚ್ಚರಿಸಿದರು.
ಬ್ಯಾಂಕ್ ಖಾತೆ ವಿವರಗಳು, ಓಟಿಪಿ, ಎಟಿಎಂ ಪಿನ್, ಆಧಾರ್ ಅಥವಾ ಪ್ಯಾನ್ ವಿವರಗಳನ್ನು ಕೇಳುವ ಯಾವುದೇ ಕರೆ ಅಥವಾ ಸಂದೇಶವನ್ನು ನಂಬಬಾರದು. ಯಾವುದೇ ಬ್ಯಾಂಕ್ ಅಥವಾ ಸರ್ಕಾರಿ ಇಲಾಖೆ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಫೋನ್ ಮೂಲಕ ಕೇಳುವುದಿಲ್ಲ. ಕೇಳಿದರೆ ಅದು ವಂಚನೆ ಎನ್ನುವುದು ನಿಶ್ಚಿತ ಎಂದು ಅವರು ಸ್ಪಷ್ಟಪಡಿಸಿದರು. ನಕಲಿ ಕಸ್ಟಮ್ಸ್, ಸಿಬಿಐ, ಸೈಬರ್ ಕ್ರೈಮ್ ಅಥವಾ ಪೊಲೀಸ್ ಅಧಿಕಾರಿ ಎಂದು ಕರೆ ಮಾಡುವ ಮೂಲಕ ನಿಮ್ಮ ಮೇಲೆ ಪ್ರಕರಣವಿದೆ, ಹಣಕಾಸು ಗೊಂದಲವಿದೆ, ವಿಡಿಯೋ ಕಾಲ್ ಮೂಲಕ ವಿಚಾರಣೆ ನಡೆಯುತ್ತದೆ ಎಂದು ಹೇಳಿ ಜನರನ್ನು ಹೆದರಿಸುವುದು ಕಾನೂನಿನಲ್ಲಿ ಇಲ್ಲ. ಪೊಲೀಸರು ದೂರವಾಣಿ ಅಥವಾ ವಿಡಿಯೋ ಕಾಲ್ ಮೂಲಕ ಯಾರನ್ನೂ ಬಂಧಿಸುವುದಿಲ್ಲ. ಯಾವುದೇ ಶಂಕೆ ಬಂದರೆ, ತಕ್ಷಣ 112 ಅಥವಾ ಸೈಬರ್ ಹೆಲ್ಪ್ಲೈನ್ 1930 ನ್ನು ಸಂಪರ್ಕಿಸಿ ಎಂದು ಅವರು ನೌಕರರಿಗೆ ಮನವಿ ಮಾಡಿದರು.
ಕಳೆದ ಎಂಟು ದಿನಗಳಲ್ಲಿ ಸೈಬರ್ ಕ್ರೈಂನಿಂದ ಧಾರವಾಡದಲ್ಲಿ ₹48 ಲಕ್ಷ ಹಣ ವಂಚನೆ ಆಗಿದೆ. ದೆಹಲಿಯಲ್ಲಿ ₹26 ಕೋಟಿ ಮತ್ತು ಬೆಂಗಳೂರಲ್ಲಿ ₹11 ಕೋಟಿ ಹಣ ಕಳೆದುಕೊಂಡಿದ್ದಾರೆ. ಪ್ರತಿ ವರ್ಷ ಭಾರತದಲ್ಲಿ ₹23 ಸಾವಿರ ಕೋಟಿ ಹಣ ಸೈಬರ್ ಕಾರಣದಿಂದಾಗಿ ಲ್ಯಾಪ್ಸ್ ಆಗುತ್ತಿದೆ ಎಂದು ಅವರು ಹೇಳಿದರು. ಆದರೆ, ಸೈಬರ್ನಿಂದ ವಂಚಿತರಾದವರಲ್ಲಿ ಕೇವಲ ಶೇ. 10 ರಷ್ಟು ಜನ ಮಾತ್ರ ದೂರನ್ನು ದಾಖಲಿಸುತ್ತಾರೆ. ಉಳಿದವರು ಸಣ್ಣ ಮೊತ್ತ ಕಳೆದುಕೊಂಡವರು ಮತ್ತು ಒಟಿಪಿ ವರ್ಗಾಯಿಸಿದವರು ಯಾವುದೇ ದೂರುಗಳನ್ನು ನೀಡುವುದಿಲ್ಲ ಎಂದು ಅವರು ತಿಳಿಸಿದರು.
ಕೆಜಿಐಡಿ ಜಿಲ್ಲಾ ವಿಮಾ ಅಧಿಕಾರಿ ಜೆ.ಸಿ.ಕಠಾರಿ ಅವರು ಕೆಜಿಐಡಿ ವಿಮೆ, ವಂತಿಗೆ, ಬೋನಸ್, ಲಾಭ ಮತ್ತು ಹೂಡಿಕೆ ಕುರಿತು ವಿವರವಾಗಿ ವಿವರಿಸಿದರು. ಜಿಲ್ಲಾಧಿಕಾರಿಗಳ ಕಚೇರಿ ಶಿರಸ್ತೆದಾರ ಕೆ.ಶ್ರೀಧರ ಸ್ವಾಗತಿಸಿದರು. ಮಲ್ಲಿಕಾರ್ಜುನ ಸೊಲಗಿ ಅವರು ಕಾರ್ಯಕ್ರಮ ನಿರೂಪಿಸಿದರು. ಡಾ.ಸುರೇಶ ಹಿರೇಮಠ ವಂದಿಸಿದರು. ಉಪನ್ಯಾಸ ಕಾರ್ಯಕ್ರಮದಲ್ಲಿ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಡಿಡಿಓಗಳು ಮತ್ತು ವಿಷಯ ನಿರ್ವಾಹಕರು ಭಾಗವಹಿಸಿದ್ದರು.

