ಧಾರವಾಡ: ಇಲ್ಲಿನ ಭಾರತೀಯ ಕ್ರೀಡಾ ಪ್ರಾಧಿಕಾರ (SAI) ತರಬೇತಿ ಕೇಂದ್ರವು ಬಾಸ್ಕೆಟ್ ಬಾಲ್, ಕುಸ್ತಿ ಮತ್ತು ಕಬಡ್ಡಿ ಕ್ರೀಡೆಗಳಲ್ಲಿ ಹೊಸ ಕ್ರೀಡಾಪಟುಗಳನ್ನು ಗುರುತಿಸಲು ಇದೇ ಫೆಬ್ರವರಿ 23 ರಿಂದ 25 ರವರೆಗೆ ಮೂರು ದಿನಗಳ ಕಾಲ ಆಯ್ಕೆ ಪ್ರಕ್ರಿಯೆಯನ್ನು ಹಮ್ಮಿಕೊಂಡಿದೆ.
ಆಯ್ಕೆ ಪ್ರಕ್ರಿಯೆಯ ವೇಳಾಪಟ್ಟಿಯಂತೆ, ಫೆಬ್ರವರಿ 23 ರಂದು ಬಾಸ್ಕೆಟ್ ಬಾಲ್ ಮತ್ತು ಕುಸ್ತಿ ಕ್ರೀಡೆಗಳಿಗೆ ಹಾಗೂ ಫೆಬ್ರವರಿ 24 ಮತ್ತು 25 ರಂದು ಕಬಡ್ಡಿ ಕ್ರೀಡೆಗೆ ಆಯ್ಕೆಗಳು ನಡೆಯಲಿವೆ. ಈ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳಲು ಬಯಸುವ 13 ರಿಂದ 16 ವರ್ಷ ವಯಸ್ಸಿನ ಪ್ರತಿಭಾವಂತ ಕ್ರೀಡಾಪಟುಗಳು ನಿಗದಿತ ದಿನಗಳಂದು ಬೆಳಿಗ್ಗೆ 8 ಗಂಟೆಗೆ ಹಾಜರಿರಬೇಕು. ಕ್ರೀಡಾ ವಸತಿ ನಿಲಯಕ್ಕೆ ಪ್ರವೇಶ ಬಯಸುವ ಆಸಕ್ತ ಕ್ರೀಡಾಪಟುಗಳು ಆಯಾ ಕ್ರೀಡೆಗೆ ಸಂಬಂಧಿಸಿದ ಸಮವಸ್ತ್ರದೊಂದಿಗೆ ಅಗತ್ಯವಿರುವ ಮೂಲ ದಾಖಲೆಗಳನ್ನು ತರುವುದು ಕಡ್ಡಾಯವಾಗಿದೆ.
ಈ ಆಯ್ಕೆ ಪ್ರಕ್ರಿಯೆಯ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಇಚ್ಚಿಸುವವರು ತರಬೇತಿದಾರರಾದ ರಂಗನಾಥ (ಮೊ: 9740888020) ಅಥವಾ ಶಂಕರಯ್ಯ ಪೂಜಾರಿ (ಮೊ: 7019911347) ಅವರನ್ನು ಸಂಪರ್ಕಿಸಬಹುದು ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ ತರಬೇತಿ ಕೇಂದ್ರದ ಆಡಳಿತ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರತಿಭಾವಂತ ಗ್ರಾಮೀಣ ಮತ್ತು ನಗರ ಭಾಗದ ಕ್ರೀಡಾಪಟುಗಳು ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಕೋರಲಾಗಿದೆ.

