ಹಾವೇರಿ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿಸಲು ಸರ್ಕಾರ ಬದ್ಧ: ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಉದ್ಘಾಟಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

Spread the love

ಹಾವೇರಿ: ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಂಡಿರುವ ಹಾವೇರಿ ಜಿಲ್ಲೆಯಲ್ಲಿ ಕ್ಯಾನ್ಸರ್ ಆಸ್ಪತ್ರೆ, ಟ್ರಾಮಾ ಸೆಂಟರ್ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಶೀಘ್ರವೇ ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು. ಹಾವೇರಿಯಲ್ಲಿಂದು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಇಲಾಖೆ ನಿರ್ಮಿಸಿರುವ ನೂತನ ವಿವಿಐಪಿ ಸರ್ಕೀಟ್ ಹೌಸ್ ಕಟ್ಟಡ ಹಾಗೂ ನೆಲೋಗಲ್ಲ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗುವ ಸರ್ಕೀಟ್ ಹೌಸ್ ಕಟ್ಟಡದ ಶಿಲಾನ್ಯಾಸ ನೆರವೇರಿಸಿದ ಅವರು, ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಅದ್ಧೂರಿ ಉದ್ಘಾಟನೆಯನ್ನು ನೆರವೇರಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ ಹಾಗೂ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಈ ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಈ ಸಂಸ್ಥೆಯನ್ನು ಘೋಷಿಸಿದ್ದನ್ನು ಸ್ಮರಿಸಿದರಲ್ಲದೆ, ಉಪಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ಪ್ರತಿ ಜಿಲ್ಲೆಯಲ್ಲೂ ವೈದ್ಯಕೀಯ ಕಾಲೇಜು ಇರಬೇಕೆಂಬ ಆಶಯ ವ್ಯಕ್ತಪಡಿಸಿದ್ದಾಗಿ ತಿಳಿಸಿದರು.

​ರಾಜ್ಯದ ಆರೋಗ್ಯ ಕ್ಷೇತ್ರದ ಬೆಳವಣಿಗೆಯ ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿಗಳು, ಕರ್ನಾಟಕದಲ್ಲಿ ಪ್ರಸ್ತುತ 71 ವೈದ್ಯಕೀಯ ಕಾಲೇಜುಗಳಿದ್ದು, ಈ ಪೈಕಿ 22 ಸರ್ಕಾರಿ ಕಾಲೇಜುಗಳಿವೆ. ಮುಂದಿನ ದಿನಗಳಲ್ಲಿ ವಿಜಯಪುರ ಸೇರಿದಂತೆ ವೈದ್ಯಕೀಯ ಕಾಲೇಜುಗಳಿಲ್ಲದ ಜಿಲ್ಲೆಗಳಲ್ಲಿ ಹಂತ ಹಂತವಾಗಿ ಕಾಲೇಜುಗಳು ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಿಸಲಾಗುವುದು ಎಂದು ತಿಳಿಸಿದರು. ನಮ್ಮ ಸಮಾಜದಲ್ಲಿ ಬಡವರ ಸಂಖ್ಯೆ ಹೆಚ್ಚಾಗಿದ್ದು, ಅವರು ಸರ್ಕಾರಿ ಆಸ್ಪತ್ರೆಗಳನ್ನೇ ಅವಲಂಬಿಸಿದ್ದಾರೆ. ಖಾಸಗಿ ಆಸ್ಪತ್ರೆಗಳ ದುಬಾರಿ ಚಿಕಿತ್ಸೆ ಬಡವರಿಗೆ ಕೈಗೆಟುಕದ ಕಾರಣ ಪ್ರತಿ ಜಿಲ್ಲೆಯಲ್ಲಿಯೂ ಸುಸಜ್ಜಿತ ವೈದ್ಯಕೀಯ ಸೌಲಭ್ಯಗಳು ಲಭ್ಯವಿರಬೇಕು ಎಂಬುದು ಸರ್ಕಾರದ ಗುರಿಯಾಗಿದೆ. ಹಾವೇರಿ ವೈದ್ಯಕೀಯ ಕಾಲೇಜಿಗೆ ಸುಮಾರು 500 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದ್ದು, ಇದರಲ್ಲಿ ಕೇಂದ್ರ ಸರ್ಕಾರ 194 ಕೋಟಿ ರೂಪಾಯಿ ನೀಡಿದ್ದರೆ, ರಾಜ್ಯ ಸರ್ಕಾರ 300 ಕೋಟಿಗೂ ಅಧಿಕ ಅನುದಾನ ಭರಿಸಿದೆ ಎಂದು ಅವರು ವಿವರಿಸಿದರು.

​ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ನಮ್ಮದು ಎಲ್ಲರನ್ನೂ ಒಳಗೊಂಡಿರುವ ಸರ್ಕಾರವಾಗಿದ್ದು, ಜಾತಿ, ಧರ್ಮ ಮತ್ತು ಪಕ್ಷದ ಭೇದವಿಲ್ಲದೆ ಎಲ್ಲ ಬಡವರಿಗೂ ಗ್ಯಾರಂಟಿ ಸೌಲಭ್ಯಗಳು ತಲುಪುತ್ತಿವೆ. ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಕಳೆದಿದ್ದು, ಮೊದಲ ವರ್ಷದಲ್ಲೇ ಎಲ್ಲಾ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಗ್ಯಾರಂಟಿ ಯೋಜನೆಗಳಿಗಾಗಿ ಎರಡೂವರೆ ವರ್ಷಗಳಲ್ಲಿ 1 ಲಕ್ಷದ 12 ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಿದ್ದರೂ ರಾಜ್ಯ ಆರ್ಥಿಕವಾಗಿ ದಿವಾಳಿಯಾಗಿಲ್ಲ. ಪ್ರತಿ ವರ್ಷ 52,000 ಕೋಟಿ ರೂಪಾಯಿಗಳನ್ನು ಈ ಯೋಜನೆಗಳಿಗೆ ವೆಚ್ಚ ಮಾಡುತ್ತಿದ್ದರೂ ಅಭಿವೃದ್ಧಿ ಕೆಲಸಗಳು ನಿಂತಿಲ್ಲ ಎಂದು ಟೀಕಾಕಾರರಿಗೆ ತಿರುಗೇಟು ನೀಡಿದರು. ಜಿಲ್ಲೆಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ, ಪ್ರವಾಸಿ ಮಂದಿರ, ವಾಲ್ಮೀಕಿ ಭವನ ಸೇರಿದಂತೆ ಹತ್ತಾರು ಕಾಮಗಾರಿಗಳನ್ನು ಪೂರೈಸಲಾಗಿದ್ದು, ಜಿಲ್ಲಾ ಆಸ್ಪತ್ರೆಯನ್ನು 500 ಹಾಸಿಗೆಗಳ ಆಸ್ಪತ್ರೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ ಎಂದರು.

​ನೀರಾವರಿ ಯೋಜನೆಗಳ ಕುರಿತು ಪ್ರಸ್ತಾಪಿಸಿದ ಮುಖ್ಯಮಂತ್ರಿಗಳು, ರಾಜ್ಯದ ನೀರಾವರಿ ಯೋಜನೆಗಳಿಗೆ ವೇಗ ನೀಡಲು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿಯೇ ಸಮಿತಿ ರಚಿಸಲು ಸಿದ್ಧರಿರುವುದಾಗಿ ತಿಳಿಸಿದರು. ಮಹದಾಯಿ ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ ಜಾರಿಯಾಗುವುದು ಅತ್ಯಗತ್ಯವಾಗಿದ್ದು, ಸುಪ್ರೀಂ ಕೋರ್ಟ್‌ನಲ್ಲಿರುವ ಪ್ರಕರಣಗಳ ಕುರಿತು ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದುವರೆಯೋಣ. ಕೃಷ್ಣಾ ಮೇಲ್ದಂಡೆ ಯೋಜನೆ ಪೂರ್ಣಗೊಳ್ಳದಿದ್ದರೆ ರಾಜ್ಯಕ್ಕೆ ಹಂಚಿಕೆಯಾಗಿರುವ 173 ಟಿಎಂಸಿ ನೀರನ್ನು ಬಳಸಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಬೊಮ್ಮಾಯಿ ಅವರು ಆಸಕ್ತಿ ವಹಿಸಿ ಕೇಂದ್ರದಿಂದ ಪರಿಸರ ತೀರುವಳಿ ದೊರಕಿಸಲು ಪ್ರಯತ್ನಿಸಬೇಕು ಎಂದು ಮನವಿ ಮಾಡಿದರು. ಹಾವೇರಿ ಜಿಲ್ಲೆಯು ಸರ್ವಜ್ಞ, ಕನಕದಾಸ ಹಾಗೂ ಶಿಶುನಾಳ ಶರೀಫರಂತಹ ಮಹಾಪುರುಷರ ನಾಡಾಗಿದ್ದು, ಮನುಷ್ಯರು ಪರಸ್ಪರ ಪ್ರೀತಿಸಬೇಕೆಂದು ಸಾರಿದ ಅವರ ತತ್ವದಂತೆ ದ್ವೇಷವಿಲ್ಲದ ಸಮಾಜ ನಿರ್ಮಾಣಕ್ಕೆ ಸರ್ಕಾರ ಶ್ರಮಿಸಲಿದೆ ಎಂದು ಹೇಳಿದರು.

​ಈ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಹೆಚ್.ಕೆ. ಪಾಟೀಲ್, ಶರಣ ಪ್ರಕಾಶ್ ಪಾಟೀಲ್, ಶಿವಾನಂದ ಪಾಟೀಲ್, ಸಂಸದ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹಾಗೂ ಜಿಲ್ಲೆಯ ಶಾಸಕರು ಮತ್ತು ಪ್ರಮುಖ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *