ಹೆಸರು ಬದಲಾವಣೆ ಹಾಗೂ ಬಡವರ ಯೋಜನೆಗಳ ಕಡಿತವೇ ಬಿಜೆಪಿಯ ಅಜೆಂಡಾ: ಬಸವರಾಜ ಮಾದರ ಆಕ್ರೋಶ

Spread the love

ಧಾರವಾಡ: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದ ಬಡವರ ಪರ ಯೋಜನೆಗಳ ಹೆಸರು ಬದಲಾಯಿಸುವುದು ಮತ್ತು ಅವುಗಳಿಗೆ ನೀಡುವ ಅನುದಾನ ಕಡಿತಗೊಳಿಸಿ ಬಡವರ ಬದುಕಿಗೆ ಕಂಟಕವಾಗುವುದೇ ಕೇಂದ್ರ ಬಿಜೆಪಿ ಸರ್ಕಾರದ ಮುಖ್ಯ ಅಜೆಂಡಾ ಎಂದು ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಮಾಧ್ಯಮ ವಕ್ತಾರ ಬಸವರಾಜ ಮಾದರ ಅವರು ತೀವ್ರವಾಗಿ ಟೀಕಿಸಿದರು. ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಹಾತ್ಮ ಗಾಂಧೀಜಿಯವರ ವಿಕೇಂದ್ರೀಕರಣ ಮತ್ತು ಗ್ರಾಮ ಸ್ವರಾಜ್ಯದ ಕನಸನ್ನು ಸಾಕಾರಗೊಳಿಸಲು ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ’ (ನರೇಗಾ) ಯೋಜನೆಯನ್ನು ಬಿಜೆಪಿ ಸರ್ಕಾರ ವ್ಯವಸ್ಥಿತವಾಗಿ ಹಳ್ಳ ಹಿಡಿಸುತ್ತಿದೆ ಎಂದು ಆರೋಪಿಸಿದರು.

​ಹಿಂದೆ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಈ ಯೋಜನೆಗೆ ಕೇಂದ್ರ ಸರ್ಕಾರ ಶೇಕಡಾ 90 ರಷ್ಟು ಅನುದಾನ ನೀಡುತ್ತಿತ್ತು ಮತ್ತು ರಾಜ್ಯ ಸರ್ಕಾರಗಳು ಶೇ. 10 ರಷ್ಟು ಪಾಲು ಭರಿಸುತ್ತಿದ್ದವು. ಆದರೆ ಈಗಿನ ಬಿಜೆಪಿ ಸರ್ಕಾರವು ಕೇಂದ್ರದ ಪಾಲನ್ನು ಶೇ. 60 ಕ್ಕೆ ಇಳಿಸಿ, ರಾಜ್ಯಗಳು ಶೇ. 40 ರಷ್ಟು ಭರಿಸಬೇಕೆಂದು ಆದೇಶಿಸುವ ಮೂಲಕ ಶೇ. 30 ರಷ್ಟು ಅನುದಾನ ಕಡಿತಗೊಳಿಸಿ ಬಡವರ ಉದ್ಯೋಗಕ್ಕೆ ಕುತ್ತು ತಂದಿದೆ. ಬೇಸಿಗೆ ಕಾಲದಲ್ಲಿ ಗ್ರಾಮಗಳಲ್ಲಿ ಕೆಲಸವಿಲ್ಲದ ಸಂದರ್ಭದಲ್ಲಿ ಕೆರೆ ಹೂಳೆತ್ತುವುದು, ರಸ್ತೆ ಕಾಮಗಾರಿ ಹಾಗೂ ಕೃಷಿ ಚಟುವಟಿಕೆಗಳ ಮೂಲಕ ಬದುಕು ಕಟ್ಟಿಕೊಳ್ಳುತ್ತಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಆರ್ಥಿಕ ಸಬಲತೆಗೆ ಬಿಜೆಪಿ ಕೊಡಲಿ ಪೆಟ್ಟು ನೀಡುತ್ತಿದೆ. ಅಷ್ಟೇ ಅಲ್ಲದೆ, ಗಾಂಧೀಜಿಯವರ ಹೆಸರಿರುವ ಈ ಯೋಜನೆಗೆ ಈಗ ‘ಜಿ ರಾಮ್ ಜಿ’ ಎಂದು ಹೆಸರಿಟ್ಟು ಮಹನೀಯರ ಹೆಸರನ್ನು ಅಳಿಸುವ ಕೆಲಸ ಮಾಡುತ್ತಿದೆ ಎಂದು ಅವರು ದೂರಿದರು.

​ಕಳೆದ 13 ವರ್ಷಗಳಿಂದ ಬಿಜೆಪಿ ಸರ್ಕಾರವು ದೇಶದ ಆಸ್ತಿಗಳನ್ನು ಅದಾನಿ-ಅಂಬಾನಿಯಂತಹ ಶ್ರೀಮಂತರಿಗೆ ಮಾರಾಟ ಮಾಡುತ್ತಿದೆ ಹಾಗೂ ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿ ವಿದ್ಯಾವಂತ ಯುವಕರ ಉದ್ಯೋಗಾವಕಾಶಗಳನ್ನು ಕಸಿದುಕೊಳ್ಳುತ್ತಿದೆ. ಅಭಿವೃದ್ಧಿ ಕೆಲಸಗಳಿಗಿಂತ ಧರ್ಮಗಳ ನಡುವೆ ದ್ವೇಷ ಹುಟ್ಟಿಸುವುದು ಮತ್ತು ಸಂವಿಧಾನ ಬದಲಾವಣೆಯ ಆಲೋಚನೆ ಮಾಡುವುದೇ ಈ ಸರ್ಕಾರದ ಸಾಧನೆಯಾಗಿದೆ. ಬಡವರ ಮತ್ತು ಮಧ್ಯಮ ವರ್ಗದ ಜನರ ಏಳಿಗೆಗೆ ಮಾರಕವಾಗಿರುವ ಈ ಕೆಟ್ಟ ಆಡಳಿತವನ್ನು ದೇಶದ ನಾಗರಿಕರು, ಯುವಕರು ಮತ್ತು ಶೋಷಿತ ವರ್ಗದವರು ಎಚ್ಚೆತ್ತುಕೊಂಡು ಕಿತ್ತೊಗೆಯಬೇಕಿದೆ. ನರೇಗಾ ಯೋಜನೆಗೆ ಮೊದಲಿನಂತೆ ಶೇಕಡಾ 90 ರಷ್ಟು ಅನುದಾನ ಪಡೆಯಲು ಮತ್ತು ಬಿಜೆಪಿ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ರಾಜ್ಯಾದ್ಯಂತ ನಿರಂತರ ಹೋರಾಟ ರೂಪಿಸಬೇಕೆಂದು ಬಸವರಾಜ ಮಾದರ ಅವರು ಸುದ್ದಿಗೋಷ್ಠಿಯಲ್ಲಿ ಕರೆ ನೀಡಿದರು.

Leave a Reply

Your email address will not be published. Required fields are marked *