ಪತ್ರಿಕೋದ್ಯಮ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ: ಎಸ್ಸಿ/ಎಸ್ಟಿ ಪದವೀಧರರಿಗೆ ಅವಕಾಶ

Spread the love

ಧಾರವಾಡ, ಡಿ. 10: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು 2025-26 ನೇ ಸಾಲಿಗೆ ಎಸ್.ಸಿ.ಎಸ್.ಪಿ (SCSP) ಮತ್ತು ಟಿ.ಎಸ್.ಪಿ (TSP) ಯೋಜನೆಯಡಿ ಪತ್ರಿಕೋದ್ಯಮ ಅಪ್ರೆಂಟಿಸ್ ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಿದೆ.

​ಧಾರವಾಡದ ಹಿರಿಯ ಸಹಾಯಕ ನಿರ್ದೇಶಕರ ಕಚೇರಿಯ ವತಿಯಿಂದ ಪರಿಶಿಷ್ಟ ಜಾತಿಯ ಒರ್ವ (01) ಮತ್ತು ಪರಿಶಿಷ್ಟ ಪಂಗಡದ ಒರ್ವ (01) ಪತ್ರಿಕೋದ್ಯಮ ಪದವೀಧರ ಅಥವಾ ಸ್ನಾತಕೋತ್ತರ ಪದವೀಧರ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಕಚೇರಿಯಲ್ಲಿ 12 ತಿಂಗಳ ಅವಧಿಯ ತರಬೇತಿ ನೀಡಲಾಗುತ್ತದೆ.

​ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆ

​ಕರ್ನಾಟಕದಲ್ಲಿ ಕಾನೂನಾತ್ಮಕವಾಗಿ ಸ್ಥಾಪಿತಗೊಂಡ ವಿಶ್ವವಿದ್ಯಾನಿಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಅಥವಾ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿರುವ, ಕಂಪ್ಯೂಟರ್ ಜ್ಞಾನವಿರುವ ಮತ್ತು ಕನ್ನಡ ಭಾಷೆ ಬಳಸುವ ಪ್ರಬುದ್ಧತೆ ಇರುವ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

​ಅಭ್ಯರ್ಥಿಗಳನ್ನು ಮೆರಿಟ್ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಅಭ್ಯರ್ಥಿಗಳಿಗೆ 35 ವರ್ಷದೊಳಗೆ ವಯಸ್ಸಾಗಿರಬೇಕು. ತರಬೇತಿಯ ಅವಧಿಯಲ್ಲಿ ಮಾಹೆಯಾನ ರೂ. 15 ಸಾವಿರ ಸ್ಟೈಪೆಂಡ್ ನೀಡಲಾಗುತ್ತದೆ. ಒಮ್ಮೆ ಈ ಯೋಜನೆಯಡಿ ಫಲಾನುಭವಿಯಾದವರನ್ನು ಮತ್ತೊಂದು ಅವಧಿಗೆ ಆಯ್ಕೆ ಮಾಡಲು ಅವಕಾಶವಿರುವುದಿಲ್ಲ.

ಸೂಚನೆ: ವಿಶೇಷ ಘಟಕ ಯೋಜನೆಯಡಿ ಹಾಗೂ ಗಿರಿಜನ ಉಪಯೋಜನೆಯಡಿ ಯಾವುದೇ ಜಿಲ್ಲೆಯಲ್ಲಿ ಅರ್ಹ ಅಭ್ಯರ್ಥಿಗಳು ದೊರೆಯದೆ ಇದ್ದಲ್ಲಿ, ನೆರೆಯ ಜಿಲ್ಲೆಗಳಿಂದಲೂ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇರುತ್ತದೆ.

​ಅರ್ಜಿ ಸಲ್ಲಿಸುವ ವಿಧಾನ

​ಅರ್ಜಿಯನ್ನು ಹಿರಿಯ ಸಹಾಯಕ ನಿರ್ದೇಶಕರ ಕಚೇರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾಡಳಿತ ಭವನ ಎದುರಿಗೆ, ಧಾರವಾಡ ಇಲ್ಲಿ ಪಡೆದು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಡಿಸೆಂಬರ್ 23, 2025 ರೊಳಗೆ ಕಚೇರಿಗೆ ಸಲ್ಲಿಸಬಹುದು.

​ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ನಿರ್ದೇಶಕರನ್ನು ಅಥವಾ ಸಹಾಯಕ ನಿರ್ದೇಶಕರು (ಪ್ರ) ಅವರ ಮೊಬೈಲ್ ಸಂಖ್ಯೆ: 9538076619 ಗೆ ಸಂಪರ್ಕಿಸುವಂತೆ ಇಲಾಖೆಯ ಪ್ರಕಟಣೆ ತಿಳಿಸಿದೆ.

Leave a Reply

Your email address will not be published. Required fields are marked *