ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸಮಿತಿ ರಚನೆ ಕಡ್ಡಾಯ: ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ಭಾರತಿ

Spread the love

ಜಿಲ್ಲಾ ನ್ಯಾಯಾಲಯದಲ್ಲಿ ಅಂತರರಾಷ್ಟ್ರೀಯ ದಿನಾಚರಣೆ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮ

ಧಾರವಾಡ: ನವೆಂಬರ್ 25: ಮಹಿಳೆಯರ ಮೇಲಿನ ದೌರ್ಜನ್ಯ ನಿರ್ಮೂಲನೆಗಾಗಿ ಅಂತರಾಷ್ಟ್ರೀಯ ದಿನದ ಅಂಗವಾಗಿ ಇಂದು (ನ.25) ಧಾರವಾಡ ಜಿಲ್ಲಾ ನ್ಯಾಯಾಲಯದಲ್ಲಿ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಜಿಲ್ಲಾ ನ್ಯಾಯಾಂಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಅಭಿಯೋಜನೆ ಇಲಾಖೆ ಸಹಯೋಗದಲ್ಲಿ ಈ ಕಾರ್ಯಕ್ರಮ ಜರುಗಿತು.

​ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ಭಾರತಿ ಅವರು, ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ತಡೆಯುವ ಕುರಿತು ಕಾನೂನು ಜಾರಿಗೆ ಬಂದಿದೆ ಎಂದು ತಿಳಿಸಿದರು.

​ಈ ದಿನವನ್ನು ಮಹಿಳೆಯರ ಮೇಲೆ ನಡೆಯುವ ದೈಹಿಕ, ಲೈಂಗಿಕ, ಭಾವನಾತ್ಮಕ ಮತ್ತು ಆರ್ಥಿಕ ದೌರ್ಜನ್ಯಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಆ ದೌರ್ಜನ್ಯಗಳನ್ನು ನಿಲ್ಲಿಸಲು ಜಾಗತಿಕ ಕ್ರಿಯೆಗೆ ಕರೆ ನೀಡಲು ಸಮರ್ಪಿಸಲಾಗಿದೆ. ಮಹಿಳೆಯರು ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲಿ ಸುರಕ್ಷತೆಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸುವುದು ಅತಿ ಅವಶ್ಯಕವಾಗಿದೆ. ಪ್ರತಿಯೊಬ್ಬರೂ ಕಚೇರಿಯಲ್ಲಿರುವ ಮಹಿಳೆಯರನ್ನು ಸಹೋದರಿಯರ ರೀತಿಯಲ್ಲಿ ನೋಡುವುದು ಹಾಗೂ ಅವರ ಕರ್ತವ್ಯ ನಿರ್ವಹಣೆಗೆ ಸಹಕರಿಸುವುದು ಅತಿ ಮುಖ್ಯವಾದುದು ಎಂದು ಅವರು ಹೇಳಿದರು.

​ಕಾಯ್ದೆಯ ಮಾರ್ಗಸೂಚಿಯಂತೆ ಪ್ರತಿ ಇಲಾಖೆಯಲ್ಲಿ ಸಮಿತಿ ರಚನೆಯಾಗಿರುತ್ತದೆ. ಸದರಿ ಸಮಿತಿಯು ಮಹಿಳೆಯರ ಮೇಲೆ ಆಗುವ ದೌರ್ಜನ್ಯದ ತಡೆಯ ಕುರಿತು ಅಗತ್ಯ ಕ್ರಮವಹಿಸುವ ಅಧಿಕಾರವನ್ನು ಹೊಂದಿರುತ್ತದೆ ಎಂದು ಬಿ.ಎಸ್.ಭಾರತಿ ಅವರು ತಿಳಿಸಿದರು.

​ಕಾರ್ಯಕ್ರಮದ ಅಧ್ಯಕ್ಷತೆಯನ್ನು ಖಾಯಂ ಜನತಾ ನ್ಯಾಯಾಲಯದ ಅಧ್ಯಕ್ಷರು ಹಾಗೂ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸುವರ್ಣಾ ಕೆ. ಮಿರ್ಜಿ ಅವರು ವಹಿಸಿದ್ದರು. ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ನಾಗರಾಜಪ್ಪ ಎ.ಕೆ., ರಾಜಕುಮಾರ ಸಿ., ಜರೀನಾ, ಪೂರ್ಣಿಮಾ ಭಂಡಾರಕರ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿಗಳಾದ ಪರಶುರಾಮ ಎಫ್. ದೊಡ್ಡಮನಿ, ಸರ್ಕಾರಿ ಅಭಿಯೋಜಕರಾದ ಶೈಲಾ ಅಂಗಡಿ ಅವರು ಅತಿಥಿಗಳಾಗಿ ಭಾಗವಹಿಸಿದ್ದರು.

​ಈ ಸಂದರ್ಭದಲ್ಲಿ ನಗರದ ನ್ಯಾಯಾಧೀಶರು, ಜಿಲ್ಲಾ ನ್ಯಾಯಾಲಯದ ಸಿಬ್ಬಂದಿ, ಅಭಿಯೋಜನೆ ಇಲಾಖೆಯ ಸಿಬ್ಬಂದಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿ ಹಾಜರಿದ್ದರು.

Leave a Reply

Your email address will not be published. Required fields are marked *