
ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಅತ್ಯಾಚಾರ ಪ್ರಕರಣದ ಶಿಕ್ಷೆಗೊಳಗಾದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಸೆಲ್‌ನಲ್ಲಿ ಮೊಬೈಲ್ ಫೋನ್ ಪತ್ತೆಯಾದ ಹಿನ್ನೆಲೆಯಲ್ಲಿ ಕಾರಾಗೃಹದ ಮುಖ್ಯ ಅಧೀಕ್ಷಕರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದ್ದು, ಭದ್ರತಾ ವಿಭಾಗದ ಉಸ್ತುವಾರಿ ಸಹಾಯಕ ಅಧೀಕ್ಷಕ (ಎಎಸ್‌ಪಿ) ಈರಣ್ಣ ರಂಗಾಪುರ ಅವರನ್ನು ಅಮಾನತುಗೊಳಿಸಿ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಆದೇಶಿಸಿದ್ದಾರೆ.
ಈ ಕುರಿತು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಲೋಕ್ ಕುಮಾರ್, ಜೈಲಿನಲ್ಲಿ ನಿಷೇಧಿತ ವಸ್ತುಗಳು ಹಾಗೂ ಅಕ್ರಮ ಚಟುವಟಿಕೆಗಳನ್ನು ಯಾವುದೇ ಕಾರಣಕ್ಕೂ ಲಘುವಾಗಿ ಪರಿಗಣಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಪ್ರಜ್ವಲ್ ರೇವಣ್ಣ ಅವರ ಸೆಲ್‌ನಲ್ಲಿ ಮೊಬೈಲ್ ಪತ್ತೆಯಾಗಿರುವುದು ಗಂಭೀರ ಭದ್ರತಾ ಲೋಪವಾಗಿದ್ದು, ಡಿಐಜಿ (ದಕ್ಷಿಣ) ಅವರ ವರದಿ ಆಧರಿಸಿ ಆ ಬ್ಯಾರಕ್‌ನ ಭದ್ರತಾ ಉಸ್ತುವಾರಿಯಾಗಿದ್ದ ಎಎಸ್‌ಪಿ ಈರಣ್ಣ ರಂಗಾಪುರ ಅವರನ್ನು ಅಮಾನತುಗೊಳಿಸಲಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯ ಅಧೀಕ್ಷಕ ಅಂಶುಕುಮಾರ್ ಅವರಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ನೀಡಲಾಗಿದೆ.

ಇದೇ ವೇಳೆ ಜೈಲಿನ ನಿಯಮಾವಳಿಯಂತೆ ಕೈದಿಗಳ ಸಮವಸ್ತ್ರ ಧರಿಸುವಂತೆ ಪ್ರಜ್ವಲ್ ರೇವಣ್ಣ ಅವರಿಗೆ ಕಡ್ಡಾಯವಾಗಿ ಸೂಚನೆ ನೀಡಲಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ. ಶಿಕ್ಷೆಗೆ ಗುರಿಯಾದ ಬಳಿಕ ಅವರಿಗೆ ಸಮವಸ್ತ್ರ ನೀಡಲಾಗಿದ್ದರೂ, ಕೆಲ ದಿನಗಳ ನಂತರ ಅದನ್ನು ಧರಿಸದೆ ಇದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳಿಗೆ ಮೆಮೋ ನೀಡಲಾಗಿತ್ತು. ನಂತರ ಸಮವಸ್ತ್ರ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ ಎಂದು ಅವರು ಹೇಳಿದರು.
ಪರಪ್ಪನ ಅಗ್ರಹಾರ ಜೈಲಿನಲ್ಲಿ ಅತ್ಯಾಧುನಿಕ ಮೊಬೈಲ್ ಜಾಮರ್ ಅಳವಡಿಸಲಾಗಿದ್ದರೂ, ಆಂಧ್ರ ಪ್ರದೇಶದ ಏರ್‌ಟೆಲ್ ಸಿಮ್‌ಗಳು ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಕಂಪನಿಯ ಅಧಿಕಾರಿಗಳಿಂದ ವಿವರಣೆ ಪಡೆಯಲಾಗಿದ್ದು, ಏರ್‌ಟೆಲ್ ವಿರುದ್ಧ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮಕ್ಕೆ ಸೂಚಿಸಲಾಗಿದೆ ಎಂದು ಅಲೋಕ್ ಕುಮಾರ್ ತಿಳಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಅವರಿಗೆ ಈವರೆಗೆ ನ್ಯಾಯಾಲಯದ ಅನುಮತಿಯೊಂದಿಗೆ ಮನೆಯಿಂದ ಆಹಾರ ಪೂರೈಕೆಯಾಗುತ್ತಿತ್ತು. ಅನಾರೋಗ್ಯದ ಕಾರಣ ನೀಡಿ ಸೆಲ್‌ನಲ್ಲಿ ದಿವಾನ್ ಕಾಟ್ (ಮಂಚ) ಬಳಕೆಯನ್ನೂ ಪಡೆದಿದ್ದರು. ಆದರೆ ಶಿಕ್ಷೆಗೊಳಗಾದ ಬಳಿಕ ಅವರಿಗೆ ಮನೆ ಊಟದ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿದ್ದು, ಸೆಲ್‌ನಲ್ಲಿದ್ದ ಮಂಚವನ್ನೂ ತೆರವುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ತವ್ಯಲೋಪದ ಆರೋಪದ ಹಿನ್ನೆಲೆಯಲ್ಲಿ ಎಎಸ್‌ಪಿ ಈರಣ್ಣ ರಂಗಾಪುರ ಅವರನ್ನು ಚಿಕ್ಕಮಗಳೂರು ಕಾರಾಗೃಹಕ್ಕೆ ವರ್ಗಾವಣೆ ಮಾಡಿ ಮಂಗಳವಾರವೇ ಆದೇಶಿಸಲಾಗಿತ್ತು. ಆದರೆ ಆ ಆದೇಶ ಅವರ ಕೈ ಸೇರುವ ಮುನ್ನವೇ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಸಿಸಿಬಿ ದಾಳಿ ನಡೆದಿದ್ದು, ಪ್ರಜ್ವಲ್ ರೇವಣ್ಣ ಅವರ ಸೆಲ್‌ನಲ್ಲಿ ಮೊಬೈಲ್ ಪತ್ತೆಯಾದ ಬೆನ್ನಲ್ಲೇ ಅವರನ್ನು ಅಮಾನತುಗೊಳಿಸಲಾಗಿದೆ.
ಡಿಜಿಪಿ ಅಲೋಕ್ ಕುಮಾರ್ ಹೇಳಿದ್ದೇನು?
ಕಾರಾಗೃಹದಲ್ಲಿ ಯಾವುದೇ ಕಾರಣಕ್ಕೂ ಅಕ್ರಮ ಚಟುವಟಿಕೆಗಳಿಗೆ ಸಹಿಸುವುದಿಲ್ಲ. ತಪ್ಪು ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ಕೆಲ ಅಧಿಕಾರಿಗಳು ಆಮಿಷ ಮತ್ತು ದುರಾಸೆಗೆ ಒಳಗಾಗಿ ಕಾನೂನುಬಾಹಿರ ಕೃತ್ಯಗಳಿಗೆ ನೆರವಾಗುತ್ತಿರುವುದು ಗಂಭೀರ ವಿಚಾರ ಎಂದು ಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

