ಹೊಸ ಬಟ್ಟೆ ಕೊಡಿಸಲಿಲ್ಲವೆಂದು ಅಕ್ಕ-ತಂಗಿಯರ ಆತ್ಮಹತ್ಯೆ; ಕಲಬುರಗಿಯಲ್ಲಿ ಹೃದಯವಿದ್ರಾವಕ ಘಟನೆ

Spread the love

ಕಲಬುರಗಿ: ಹಬ್ಬಕ್ಕೆ ಹೊಸ ಬಟ್ಟೆ ಕೊಡಿಸಲಿಲ್ಲವೆಂದು ಮನನೊಂದು ಅಕ್ಕ-ತಂಗಿಯರಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಕಲಬುರಗಿ ಜಿಲ್ಲೆಯ ಶಹಬಾದ್ ಪಟ್ಟಣದಲ್ಲಿ ನಡೆದಿದೆ. ತಾಯಿಯನ್ನು ಕಳೆದುಕೊಂಡು ತಂದೆಯೊಂದಿಗೆ ವಾಸಿಸುತ್ತಿದ್ದ ಪೂಜಾ ಹಾಗೂ ಆಕೆಯ ತಂಗಿ ಈ ದುರಂತ ನಿರ್ಧಾರಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಮೃತ ಯುವತಿಯರು ಸುಮಾರು ಒಂಬತ್ತು ವರ್ಷಗಳ ಹಿಂದೆಯೇ ತಾಯಿಯನ್ನು ಕಳೆದುಕೊಂಡಿದ್ದು, ತಂದೆಯ ಆರೈಕೆಯಲ್ಲೇ ಬದುಕು ಸಾಗಿಸುತ್ತಿದ್ದರು. ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ನಂತರ ಕುಡಿತದ ಚಟಕ್ಕೆ ಬಿದ್ದಿದ್ದರು ಎನ್ನಲಾಗಿದೆ. ಮದ್ಯದ ನಶೆಯಲ್ಲಿ ಮನೆಗೆ ಬಂದು ಹೆಣ್ಣುಮಕ್ಕಳೊಂದಿಗೆ ನಿತ್ಯ ಜಗಳ ಮಾಡುತ್ತಾ, ಬೈದು ಕಿರುಕುಳ ನೀಡುತ್ತಿದ್ದನೆಂದು ಸ್ಥಳೀಯರು ತಿಳಿಸಿದ್ದಾರೆ. ಕುಟುಂಬದ ಹಿರಿಯ ಮಗ ಉದ್ಯೋಗ ನಿಮಿತ್ತ ಹೈದರಾಬಾದ್‌ನಲ್ಲಿ ವಾಸವಾಗಿದ್ದರಿಂದ, ಮನೆಯಲ್ಲಿ ಈ ಇಬ್ಬರು ಸಹೋದರಿಯರಿಗೆ ಬೆಂಬಲವಾಗಿ ಯಾರೂ ಇರಲಿಲ್ಲ.

ಇತ್ತೀಚೆಗೆ ಊರಿನಲ್ಲಿ ಹಬ್ಬವಿದ್ದ ಹಿನ್ನೆಲೆಯಲ್ಲಿ ಅಕ್ಕ-ತಂಗಿಯರು ತಂದೆಯ ಬಳಿ ಹೊಸ ಬಟ್ಟೆ ಕೊಡಿಸುವಂತೆ ಕೇಳಿಕೊಂಡಿದ್ದರು. ಆದರೆ ಕುಡಿತದ ಅಮಲಿನಲ್ಲಿದ್ದ ತಂದೆ ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ಬೈದು ಕಳುಹಿಸಿದ್ದಾನೆ ಎನ್ನಲಾಗಿದೆ. ಈ ಘಟನೆಯಿಂದ ತೀವ್ರವಾಗಿ ಮನನೊಂದ ಇಬ್ಬರೂ ಸಹೋದರಿಯರು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಘಟನೆಯ ಕುರಿತು ಶಹಬಾದ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *