
ಬೆಂಗಳೂರು: ರಸ್ತೆಯಲ್ಲಿ ನಡೆದ ಗಲಾಟೆ ಹಾಗೂ ಅಧಿಕಾರ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ನಿಂದ ತೀವ್ರ ತರಾಟೆಗೆ ಒಳಗಾಗಿದ್ದ ಕೋಲಾರ ಜಿಲ್ಲೆಯ ಮಾಲೂರು ಪ್ರಧಾನ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶೆ ಗಾಯತ್ರಿ ಅವರನ್ನು ಬೀದರ್ ಜಿಲ್ಲೆಯ ಹುಮನಾಬಾದ್ ಪ್ರಧಾನ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್ಸಿ ನ್ಯಾಯಾಲಯಕ್ಕೆ ಆಡಳಿತಾತ್ಮಕವಾಗಿ ವರ್ಗಾವಣೆ ಮಾಡಲಾಗಿದೆ. ಈ ಬೆಳವಣಿಗೆ ರಾಜ್ಯಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಪ್ರಕರಣದ ಹಿನ್ನೆಲೆ ಪ್ರಕಾರ, ನ್ಯಾಯಾಧೀಶೆ ಗಾಯತ್ರಿ ಅವರು ಮಾಲೂರಿನಲ್ಲಿ ತಮ್ಮ ಖಾಸಗಿ ಇನ್ನೋವಾ ಕಾರಿನಲ್ಲಿ ಸಂಚರಿಸುತ್ತಿದ್ದ ವೇಳೆ ಕೆ.ಎಂ. ವಿನಯ್ ಎಂಬ ಯುವಕನೊಂದಿಗೆ ರಸ್ತೆಯಲ್ಲಿ ಮಾತಿನ ಚಕಮಕಿ ನಡೆಸಿದ್ದರು ಎನ್ನಲಾಗಿದೆ. ಈ ವೇಳೆ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಬಳಿಕ ವಿನಯ್ ಅವರ ತಾಯಿ ವಿ. ಕವಿತಾ ಹಾಗೂ ಅಜ್ಜ ಪಿ. ವೆಂಕಟೇಶ್ ವಿರುದ್ಧ ಪೊಲೀಸರ ಮೇಲೆ ಒತ್ತಡ ಹೇರಿ ಎಫ್ಐಆರ್ ದಾಖಲಿಸಲಾಗಿದೆ ಎಂಬ ಆರೋಪವೂ ಕೇಳಿಬಂದಿತ್ತು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದ ರದ್ದತಿಗೆ ಕೋರಿ ಆರೋಪಿಗಳು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ನ್ಯಾಯಾಧೀಶೆ ಗಾಯತ್ರಿ ಅವರ ವರ್ತನೆಯನ್ನು ತೀವ್ರವಾಗಿ ಖಂಡಿಸಿತ್ತು. “ರೋಡ್ ರೇಜ್ಗೆ ಸಂಬಂಧಿಸಿದ ವಿಡಿಯೋ ನೋಡಿದರೆ ಮೇಲ್ನೋಟಕ್ಕೆ ಇದು ನ್ಯಾಯಾಂಗ ಅಧಿಕಾರಿಯ ಘನತೆಗೆ ತಕ್ಕಂತಿಲ್ಲ. ಕಾರಿನಿಂದ ಇಳಿದು ಸಾಮಾನ್ಯ ವ್ಯಕ್ತಿಯೊಂದಿಗೆ ಜಗಳ ತೆಗೆದಿದ್ದಾರೆ” ಎಂದು ನ್ಯಾಯಪೀಠ ಕಟುವಾಗಿ ಟೀಕಿಸಿತ್ತು. ಅಲ್ಲದೆ, ಬಲಿಪಶುಗಳಾದ ಸವಾರರ ಮೇಲೆಯೇ ದೂರು ದಾಖಲಿಸಿಕೊಂಡ ಪೊಲೀಸರ ಕ್ರಮವನ್ನೂ ನ್ಯಾಯಾಲಯ ತೀವ್ರ ತರಾಟೆಗೆ ತೆಗೆದುಕೊಂಡಿತ್ತು.
ಈ ಬೆಳವಣಿಗೆಯ ಬೆನ್ನಲ್ಲೇ ಹೈಕೋರ್ಟ್ ರಿಜಿಸ್ಟ್ರಾರ್ ಚಂದ್ರಶೇಖರ ರೆಡ್ಡಿ ಅವರು ಬುಧವಾರ ಅಧಿಸೂಚನೆ ಹೊರಡಿಸಿದ್ದು, ನ್ಯಾಯಾಧೀಶೆ ಗಾಯತ್ರಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಬೀದರ್ ಜಿಲ್ಲೆಯ ಹುಮನಾಬಾದ್ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್ಸಿ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

