
ಬೆಂಗಳೂರು, ಸೆ.11: ಕರ್ನಾಟಕ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಅವರ ಆಪ್ತ ಸಹಚರರಿಗೆ ಸಂಬಂಧಿಸಿದ ಬೆಂಗಳೂರು, ಬೆಳಗಾವಿ, ಗೋಕಾಕ ಮತ್ತು ಕೋಲ್ಕತ್ತಾದ ನಾಲ್ಕು ಸ್ಥಳಗಳಲ್ಲಿನ 21 ಆವರಣಗಳಲ್ಲಿ ಜಾರಿ ನಿರ್ದೇಶನಾಲಯ (ED) ಸೆ.9 ಮತ್ತು 10ರಂದು ಶೋಧ ಕಾರ್ಯಾಚರಣೆ ನಡೆಸಿದೆ. ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲಿ ಈ ಶೋಧ ನಡೆಸಲಾಗಿದ್ದು, ಜಾರಕಿಹೊಳಿ ಕುಟುಂಬದ ಬಹಿರಂಗಪಡಿಸದ ವಿದೇಶಿ ಹೂಡಿಕೆಗಳು, ಗಡಿಯಾಚೆಗಿನ ವ್ಯವಹಾರ ಸಂಬಂಧಗಳು ಹಾಗೂ ಶಂಕಿತ ಹಣಕಾಸು ಅಕ್ರಮಗಳ ಕುರಿತು ತನಿಖೆ ನಡೆಸಿ ಮಾಹಿತಿ ಸಂಗ್ರಹಿಸುವ ಉದ್ದೇಶ ಹೊಂದಿದೆ ಎಂದು ಇಡಿ ತಿಳಿಸಿದೆ.
ಶೋಧ ಕಾರ್ಯಾಚರಣೆಯಲ್ಲಿ ಚಿಕ್ಕೋಡಿ ಸಂಸದೆ ಹಾಗೂ ಸತೀಶ್ ಜಾರಕಿಹೊಳಿ ಅವರ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್ ಜಾರಕಿಹೊಳಿ ಹಾಗೂ ಭಾವ YD ಮಂಜುನಾಥ್ ಅವರಿಗೆ ಸಂಬಂಧಿಸಿದ ಸ್ಥಳಗಳನ್ನೂ ಪರಿಶೀಲಿಸಲಾಗಿದೆ. ಇದಲ್ಲದೆ, ಸತೀಶ್ ಜಾರಕಿಹೊಳಿ ಅವರ ಆಪ್ತ ಸಹಚರರಾದ OSD ಹಾಗೂ ವೈಯಕ್ತಿಕ ಸಹಾಯಕ ಮಲಗೌಡ ಪಾಟೀಲ, ರಾಜು ದರಗೆಟ್ಟಿ, ವಿಠ್ಠಲ ಪರಸನ್ನವರ ಮತ್ತು ಡಾ. ಗಿರೀಶ್ ಸೋನವಾಲ್ಕರ್ ಅವರಿಗೆ ಸೇರಿದ ಆಸ್ತಿಗಳಲ್ಲಿಯೂ ಶೋಧ ನಡೆಸಲಾಗಿದೆ.
ಲೋಕೋಪಯೋಗಿ ಇಲಾಖೆಯಿಂದ ಟೆಂಡರ್ ಪಡೆಯುವ ಸಲುವಾಗಿ M/s ಭಾರತ್ ವಾಣಿಜ್ಯ ಈಸ್ಟರ್ನ್ ಪ್ರೈವೇಟ್ ಲಿಮಿಟೆಡ್ (BVEPL) ಎಂಬ ಖಾಸಗಿ ಕಂಪನಿ ದೊಡ್ಡ ಮೊತ್ತದ ಲಂಚ ಪಾವತಿಸಿದೆ ಹಾಗೂ ಆ ಹಣವನ್ನು ವಿದೇಶಿ ಆಸ್ತಿಗಳ ಖರೀದಿಗೆ ಬಳಸಲಾಗಿದೆ ಎಂಬ ಆರೋಪದ ಬಗ್ಗೆಯೂ ತನಿಖೆ ನಡೆಸಲಾಗಿದೆ ಎಂದು ಇಡಿ ಹೇಳಿದೆ. ಈ ಹಿನ್ನೆಲೆಯಲ್ಲಿ BVEPL ಕಂಪನಿಯ ಮಾಲೀಕರ ಕಚೇರಿ ಹಾಗೂ ನಿವಾಸಗಳ ಮೇಲೂ ಶೋಧ ನಡೆಸಲಾಗಿದೆ.

ಜಾರಕಿಹೊಳಿ ಅವರ ಕುಟುಂಬದ ಸದಸ್ಯರಾದ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ, ಪುತ್ರ ರಾಹುಲ್ ಜಾರಕಿಹೊಳಿ ಹಾಗೂ ಸಹೋದರಿ ಮಹಾದೇವಿ ಮಂಜುನಾಥ್ ಅವರು, YD ಮಂಜುನಾಥ್ ಅವರ ಪತ್ನಿಯೂ ಆಗಿದ್ದು, ವಿದೇಶದ ಹಲವು ಸಂಸ್ಥೆಗಳಲ್ಲಿ ಷೇರು ಪಾಲುದಾರಿಕೆ ಹೊಂದಿರುವುದು ತನಿಖೆಯಲ್ಲಿ ಪತ್ತೆಯಾಗಿದೆ ಎಂದು ಇಡಿ ತಿಳಿಸಿದೆ. ಕಾಂಗೋದಲ್ಲಿರುವ M/s ಎಲ್ಡೊರಾಡೊ ಮೈನಿಂಗ್ ರಿಸೋರ್ಸಸ್ ಹಾಗೂ ಜಾಂಬಿಯಾದ M/s ನವಾ ಔರಮ್ ಮೈನಿಂಗ್ ಲಿಮಿಟೆಡ್ ಸೇರಿದಂತೆ ಹಲವು ವಿದೇಶಿ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿರುವುದಾಗಿ ದಾಖಲೆಗಳು ಪತ್ತೆಯಾಗಿವೆ ಎಂದು ಹೇಳಿದೆ.
ಅದೇ ರೀತಿ, ಸತೀಶ್ ಜಾರಕಿಹೊಳಿ ಅವರು ಕಾಂಗೋದಲ್ಲಿ ಚಿನ್ನದ ಗಣಿಗಾರಿಕೆ ನಡೆಸುತ್ತಿರುವ M/s ಮ್ಯಾಗ್ನಿಟ್ಯೂಡ್ ಸ್ಟಾರ್ SARL ಸಂಸ್ಥೆಯಲ್ಲಿ ಸುಮಾರು ಶೇ.40ರಷ್ಟು ಪಾಲನ್ನು ಹೊಂದಿರುವುದು ಪತ್ತೆಯಾಗಿದೆ ಎಂದು ಇಡಿ ಹೇಳಿದೆ. ಆಫ್ರಿಕಾದ ವಿವಿಧ ದೇಶಗಳಲ್ಲಿ ಗಣಿಗಾರಿಕೆ ಆಸ್ತಿಗಳನ್ನು ಹೊಂದಿರುವ ಇತರ ವಿದೇಶಿ ಸಂಸ್ಥೆಗಳಿಗೆ ಸಂಬಂಧಿಸಿದ ದಾಖಲೆಗಳನ್ನೂ ಪತ್ತೆಹಚ್ಚಿ ಜಪ್ತಿ ಮಾಡಲಾಗಿದೆ.
ಗೋಕಾಕದಲ್ಲಿರುವ ಸಚಿವರ ನಿವಾಸ, ಬೆಂಗಳೂರಿನ ಡಾಲರ್ಸ್ ಕಾಲೋನಿ ನಿವಾಸ ಹಾಗೂ ಕ್ರೆಸೆಂಟ್ ರಸ್ತೆಯಲ್ಲಿರುವ ಕಚೇರಿ ಸಹಿತ ನಿವಾಸ ಸೇರಿದಂತೆ ಗೋಕಾಕ ಮತ್ತು ಬೆಳಗಾವಿಯ ಹಲವು ಸ್ಥಳಗಳಲ್ಲಿ ಏಕಕಾಲದಲ್ಲಿ ಶೋಧ ನಡೆಸಲಾಗಿದೆ. ಈ ವೇಳೆ FEMA ಉಲ್ಲಂಘನೆಗೆ ಸಂಬಂಧಿಸಿದ ಮಹತ್ವದ ದಾಖಲೆಗಳು ಮತ್ತು ಇತರ ವಸ್ತುಗಳು ಪತ್ತೆಯಾಗಿವೆ ಎಂದು ಇಡಿ ತಿಳಿಸಿದೆ. ಶೋಧದ ವೇಳೆ ಲೆಕ್ಕಕ್ಕೆ ತೋರಿಸದ ₹3.3 ಕೋಟಿ ಭಾರತೀಯ ಕರೆನ್ಸಿ ಹಾಗೂ ಸುಮಾರು ₹15 ಲಕ್ಷ ಮೌಲ್ಯದ ಅಮೆರಿಕನ್ ಡಾಲರ್, ಯುರೋ ಸೇರಿದಂತೆ ವಿದೇಶಿ ಕರೆನ್ಸಿಯನ್ನು ಪತ್ತೆಹಚ್ಚಿ ಜಪ್ತಿ ಮಾಡಲಾಗಿದೆ.
ಕಾಂಗೋದಲ್ಲಿರುವ ಒಂದು ಸಂಸ್ಥೆಯಲ್ಲಿ ಅನುಮತಿ ಇಲ್ಲದ ಮಾರ್ಗದ ಮೂಲಕ ಭಾರಿ ಮೊತ್ತದ ಹೂಡಿಕೆ ಹಾಗೂ ನಗದು ವೆಚ್ಚ ಮಾಡಿರುವುದಕ್ಕೆ ಸಂಬಂಧಿಸಿದ ದಾಖಲೆಗಳು ಮತ್ತು ಸಾಕ್ಷ್ಯಗಳು ಕೂಡ ಶೋಧದ ವೇಳೆ ಲಭಿಸಿವೆ ಎಂದು ಇಡಿ ತಿಳಿಸಿದೆ. ಲೋಕೋಪಯೋಗಿ ಇಲಾಖೆಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದ ದಾಖಲೆಗಳು ಹಾಗೂ BVEPL ಸೇರಿದಂತೆ ಗುತ್ತಿಗೆದಾರರಿಂದ ಲಂಚದ ಹಣ ಸಂಗ್ರಹಿಸಿರುವುದಕ್ಕೆ ಸಂಬಂಧಿಸಿದ ಡಿಜಿಟಲ್ ಸಾಧನಗಳು, ದಾಖಲೆಗಳು ಸೇರಿದಂತೆ ಹಲವು ಮಹತ್ವದ ವಸ್ತುಗಳು ಪತ್ತೆಯಾಗಿವೆ ಎಂದು ಹೇಳಿದೆ.
ಪ್ರಭಾವಿ ವ್ಯಕ್ತಿಗಳ ವಿವಿಧ ಸಂಸ್ಥೆಗಳು ಹಾಗೂ ಖಾತೆಗಳಲ್ಲಿ, ಅದರಲ್ಲೂ ಸತೀಶ್ ಜಾರಕಿಹೊಳಿ ಅವರ ಭಾವ YD ಮಂಜುನಾಥ್ ನಿಯಂತ್ರಿಸಿ ನಿರ್ವಹಿಸುತ್ತಿರುವ ಸಂಸ್ಥೆಯ ಖಾತೆಗಳಲ್ಲಿ ಲಂಚದ ಹಣದ ವಹಿವಾಟಿಗೆ ಸಂಬಂಧಿಸಿದ ಸಾಕ್ಷ್ಯಗಳು ಪತ್ತೆಯಾಗಿವೆ ಎಂದು ಇಡಿ ತಿಳಿಸಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

